

Asia Cup 2025 : ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಯ ಸೂಪರ್-4 ರ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ (ಸೆ.21) ದುಬೈನಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತ, ಆರು ವಿಕೆಟ್ಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ತನ್ನ ಖಾತೆಗೆ ಎರಡು ಅಂಕಗಳನ್ನು ಸೇರಿಸಿಕೊಂಡಿದೆ.
ಅಂದಹಾಗೆ, ಎಲ್ಲ ತಂಡಗಳು ಸೂಪರ್-4 ಹಂತವನ್ನು ಶೂನ್ಯ ಅಂಕಗಳೊಂದಿಗೆ ಪ್ರಾರಂಭಿಸುತ್ತವೆ. ಇದೀಗ ಭಾರತ ಸೂಪರ್-4 ನಲ್ಲಿ ಆಡಿದ ಏಕೈಕ ಪಂದ್ಯವನ್ನು ಗೆದ್ದಿದ್ದು, ಎರಡು ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮತ್ತೊಂದೆಡೆ, ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಕೂಡ ಎರಡು ಅಂಕಗಳನ್ನು ಹೊಂದಿದೆ ಆದರೆ, ಅವರ ರನ್ ರೇಟ್ (+0.121) ಭಾರತಕ್ಕಿಂತ (+0.689) ಕಡಿಮೆಯಿದ್ದು, ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಕೇವಲ ಒಂದು ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ (-0.121) ಮತ್ತು ಪಾಕಿಸ್ತಾನ (-0.689) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಏಷ್ಯಾ ಕಪ್ 2025ರ ನಿಯಮಗಳ ಪ್ರಕಾರ, ಸೂಪರ್ 4 ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳು ಫೈನಲ್ಗೆ ಮುನ್ನಡೆಯುತ್ತವೆ. ಭಾರತ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ಯಾವುದೇ ರಾಜಿ ಮಾಡಿಕೊಳ್ಳದೆ ಭಾರತ ಫೈನಲ್ಗೆ ಮುನ್ನಡೆಯುತ್ತದೆ. ಕನಿಷ್ಠ ಒಂದು ಪಂದ್ಯ ಗೆದ್ದರೂ ಸಹ, ಭಾರತ ಅಂತಿಮ ರೇಸ್ನಲ್ಲಿರುತ್ತದೆ. ಆಗ ಉಳಿದ ತಂಡಗಳ ಗೆಲುವು-ಸೋಲು, ವಿಶೇಷವಾಗಿ ನಿವ್ವಳ ರನ್ ರೇಟ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಭಾರತ ವಿರುದ್ಧ ಸೋತರೂ ಪಾಕಿಸ್ತಾನ ತಂಡ ಫೈನಲ್ ತಲುಪುವ ಅವಕಾಶ ಇನ್ನೂ ಜೀವಂತವಾಗಿದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸೂಪರ್ 4ರಲ್ಲಿ ಆಡಲು ಪಾಕ್ ತಂಡಕ್ಕೆ ಇನ್ನೂ ಎರಡು ಪಂದ್ಯಗಳ ಅವಕಾಶವಿದೆ. ಈ ಎರಡೂ ಪಂದ್ಯಗಳನ್ನು ಪಾಕಿಸ್ತಾನ ಗೆಲ್ಲಲೇಬೇಕು. ಆಗ ಮಾತ್ರ ಫೈನಲ್ ತಲುಪುವ ಅವಕಾಶವಿರುತ್ತದೆ.
ಇದಲ್ಲದೆ, ಅವರು ಶ್ರೀಲಂಕಾ ವಿರುದ್ಧ ಸೋತು ಮತ್ತು ಬಾಂಗ್ಲಾದೇಶ ವಿರುದ್ಧ ಗೆದ್ದರೂ ಸಹ, ಫೈನಲ್ ತಲುಪುವ ಸಾಧ್ಯತೆಗಳು ಜಟಿಲವಾಗುತ್ತವೆ. ಆಗ ಭಾರತವು ಲಂಕಾ ಮತ್ತು ಬಾಂಗ್ಲಾದೇಶದ ವಿರುದ್ಧ ಗೆಲ್ಲಬೇಕಾಗುತ್ತದೆ. ಹಾಗಿದ್ದಲ್ಲಿ, ಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಲಾ ಒಂದು ಪಂದ್ಯವನ್ನು ಗೆಲ್ಲುತ್ತವೆ ಮತ್ತು ಎರಡು ಅಂಕಗಳನ್ನು ಹೊಂದಿರುತ್ತವೆ. ಉತ್ತಮ ರನ್ ರೇಟ್ ಹೊಂದಿರುವ ತಂಡವು ಭಾರತದ ಜೊತೆಗೆ ಫೈನಲ್ ತಲುಪುತ್ತದೆ. (ಏಜೆನ್ಸೀಸ್)