

Kantara Chapter 1 : ನವೆಂಬರ್ 2024 ರಲ್ಲಿ ಅಧಿಕೃತವಾಗಿ ಘೋಷಣೆ ಆದಾಗಿನಿಂದ, ಕಾಂತಾರ ಎ ಲೆಜೆಂಡ್: ಚಾಪ್ಟರ್ 1 ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕಾಂತಾರ ಸೀಕ್ವೆಲ್ ಸಿನಿಮಾ 2022ರಲ್ಲಿ ಆರಂಭದಲ್ಲಿ ಕೇವಲ ಕನ್ನಡದಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಆದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇದೇ ಯಶಸ್ಸಿನಲ್ಲಿ ಚಿತ್ರತಂಡ ಪ್ರೀಕ್ವೆಲ್ ಘೋಷಣೆ ಮಾಡಿತ್ತು. ಸಿನಿಮಾ ಬಿಡುಗಡೆಗೆ ಇನ್ನು ಎರಡು ವಾರಗಳ ಅಂತರದಲ್ಲಿ ಇಂದು ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದೆ.
ಸುಮಾರು ಮೂರು ನಿಮಿಷಗಳ ಟ್ರೈಲರ್ನಲ್ಲೇ ಭವ್ಯವಾದ ಕಥೆಯ ಸುಳಿವನ್ನು ನೀಡಲಾಗಿದೆ. ಅಲ್ಲದೆ, ಅದ್ಭುತ ದೃಶ್ಯಗಳು ನಮ್ಮ ಕಣ್ಣು ಕುಕ್ಕುತ್ತವೆ. ಶಿವನ ಮಗ ತನ್ನ ತಂದೆ ಕಾಡಿನೊಂದಿಗೆ ವಿಲೀನಗೊಂಡ ಅದೇ ಸ್ಥಳಕ್ಕೆ ಆಗಮಿಸುವುದರೊಂದಿಗೆ ಟ್ರೈಲರ್ ಪ್ರಾರಂಭವಾಗುತ್ತದೆ. ಕಾಂತಾರ ಚಾಪ್ಟರ್ 1ರ ಟ್ರೇಲರ್ ಒಳ್ಳೆಯದು-ಕೆಟ್ಟದ್ದು ಮತ್ತು ಒಳ್ಳೆಯವರು ಮತ್ತು ದುಷ್ಟರ ನಡುವಿನ ಸಂಘರ್ಷವನ್ನು ಸೂಚಿಸುತ್ತದೆ. ಇದು ದಬ್ಬಾಳಿಕೆ ಮಾಡುವವರ ವಿರುದ್ಧ ದಮನಿತರು ನಡೆಸುವ ಹೋರಾಟವನ್ನು ತೋರಿಸುತ್ತದೆ. ಹೆಚ್ಚುವರಿಯಾಗಿ, ದುರಾಸೆಯು ಎಲ್ಲವನ್ನೂ ಹೇಗೆ ನಾಶಪಡಿಸುತ್ತದೆ ಎಂಬುದರ ಎಚ್ಚರಿಕೆಯ ಸಂದೇಶವನ್ನು ಟ್ರೈಲರ್ನಲ್ಲಿ ತೋರಿಸಲಾಗಿದೆ. ಇದು ಪ್ರಕೃತಿ, ಜಾನಪದ ಮತ್ತು ದೈವಿಕತೆಯೊಂದಿಗೆ ಮಾನವ ಸಂಬಂಧಗಳನ್ನು ಒಟ್ಟಿಗೆ ಹೆಣೆಯುತ್ತದೆ ಎಂಬುದನ್ನು ತೋರಿಸಲಾಗಿದೆ.
ಟ್ರೇಲರ್ ನೋಡಿದರೆ, ಕಾಂತಾರ: ಚಾಪ್ಟರ್ 1 ಮೇಲೆ ಸೃಷ್ಟಿಯಾಗಿರುವ ಹೈಪ್ಗೆ ತಕ್ಕಂತೆ ಕಾಣುತ್ತಿದೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ ಈ ಚಿತ್ರವು, ಭೂತ ಕೋಲ ಆಚರಣೆಯ ಪ್ರಾಚೀನ ಮೂಲವನ್ನು ಅನ್ವೇಷಿಸಿದೆ. ಕತೆ-ಚಿತ್ರಕತೆ ಬರೆದು, ನಿರ್ದೇಶಿಸಿ ನಟಿಸಿರುವ ರಿಷಭ್ ಶೆಟ್ಟಿ ದಮನಿತರ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಇಲ್ಲಿಯೂ ಭೂತ ಕೋಲ ಆಚರಣೆಯ ದೃಶ್ಯಗಳಿವೆ. ಮತ್ತೊಮ್ಮೆ ಜಾನಪದ ವೈಭವವನ್ನು ರಿಷಭ್ ಶೆಟ್ಟಿಯವರು ಚೆನ್ನಾಗಿ ಚಿತ್ರಿಸಿದ್ದಾರೆ.
ರಿಷಭ್ ಜೊತೆ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಸಹ ಚಿತ್ರಕತೆ ಬರೆದಿದ್ದಾರೆ. ರಿಷಬ್ ಜೊತೆಗೆ ಜಯರಾಮ್, ಗುಲ್ಶನ್ ದೇವಯ್ಯ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಮತ್ತು ಸಂಪಾದಕ ಸುರೇಶ್ ಸಂಕಲನ ಈ ಚಿತ್ರಕ್ಕೆ ವಿಶೇಷ ಮೆರಗು ತಂದಿದೆ. ಕಾಂತರ ಸೀಕ್ವೆಲ್ನಲ್ಲಿ ತಮ್ಮ ಸಂಗೀತದ ಮೂಲಕವೇ ಮನೆ ಮಾತಾಗಿದ್ದ ಅಜನೀಶ್ ಲೋಕನಾಥ್ ಮತ್ತೊಮ್ಮೆ ಮ್ಯೂಸಿಕ್ ಮೂಲಕ ಮೋಡಿ ಮಾಡಲಿದ್ದಾರೆ. ಅಜನೀಶ್ ಮತ್ತು ಕಶ್ಯಪ್ ಇಬ್ಬರೂ ಸಹ ಮೂಲ ಚಿತ್ರದ ಭಾಗವಾಗಿದ್ದರು.