

Lapu Lapu festival: ಹಬ್ಬದ ಸಮಯದಲ್ಲಿ ಜನದಟ್ಟನೆಯ ಬೀದಿಯಲ್ಲಿ ವಾಹನ ಚಲಾಯಿಸುತ್ತಿದ್ದ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ ದುರಂತ ಕೆನಡಾದ ವ್ಯಾಂಕೋವರ್‌ನಲ್ಲಿ ನಡೆದಿದೆ.
ಶನಿವಾರ (ಏ.26) ರಾತ್ರಿ 8:14ಕ್ಕೆ ಅವೆನ್ಯೂ ಮತ್ತು ಫ್ರೇಸರ್ ಸ್ಟ್ರೀಟ್ ಬಳಿ ಲಾಪು ಲಾಪು ಡೇ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಜನರ ದೊಡ್ಡ ಗುಂಪಿನ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ವ್ಯಾಂಕೋವರ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಧಾನಿ ಪಣ
ಪೊಲೀಸರು ಶಂಕಿತ ಚಾಲಕ (30)ನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದ ಸ್ಥಳದ ದೃಶ್ಯ ರಸ್ತೆಯಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ತೋರಿಸಿವೆ. ದಕ್ಷಿಣ ವ್ಯಾಂಕೋವರ್‌ನಲ್ಲಿ ನಡೆದ ಸಾಮೂಹಿಕ ಸಾವುನೋವು ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಉತ್ಸವದ ಸ್ಥಳಕ್ಕೆ ಕಪ್ಪು ಬಣ್ಣದ SUV ಕಾರು ಅತಿ ವೇಗವಾಗಿ ಬಂದು, ಜನಸಂದಣಿಯ ಮೂಲಕ ನುಗ್ಗಿ ಹಲವಾರು ಜನರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಾಹನದ ಚಾಲಕ ಏಷ್ಯನ್ ಯುವಕನಾಗಿದ್ದು, ಆತ ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಿದ್ದ ಎಂದು ಹೇಳಿದ್ದಾರೆ. ಕಾರು ದಾಳಿಯ ನಂತರ ಮೃತದೇಹಗಳು ರಸ್ತೆಯಲ್ಲಿ ಬಿದ್ದಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ವ್ಯಾಂಕೋವರ್‌ನಲ್ಲಿ ಲಾಪು ಲಾಪು ಆಚರಣೆಯಲ್ಲಿ ನಡೆದ ಘಟನೆಯ ಬಗ್ಗೆ "ಮೃತರು ಮತ್ತು ಗಾಯಗೊಂಡವರ ಪ್ರೀತಿಪಾತ್ರರಿಗೆ, ಫಿಲಿಪಿನೋ ಕೆನಡಿಯನ್ ಸಮುದಾಯಕ್ಕೆ ಮತ್ತು ವ್ಯಾಂಕೋವರ್‌ನಲ್ಲಿರುವ ಎಲ್ಲರಿಗೂ ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ತಿಳಿಸಿದ್ದಾರೆ.
ಏನಿದು ಲಾಪು ಲಾಪು ಉತ್ಸವ
ಈ ಹಬ್ಬವು 16 ನೇ ಶತಮಾನದ ಫಿಲಿಪಿನೋ ವಸಾಹತುಶಾಹಿ ವಿರೋಧಿ ನಾಯಕ ದಾತು ಲಾಪು-ಲಾಪು ಅವರನ್ನು ಸ್ಮರಿಸುವ ಹಬ್ಬ. 1521ರಲ್ಲಿ ಮ್ಯಾಕ್ಟಾನ್ ಕದನದಲ್ಲಿ ಸ್ಪ್ಯಾನಿಷ್ ವಸಾಹತುಶಾಹಿಗಳ ವಿರುದ್ಧ ಪ್ರತಿರೋಧವನ್ನು ಮುನ್ನಡೆಸಿದ್ದಕ್ಕಾಗಿ ಹೆಸರುವಾಸಿಯಾದ ಲಾಪು-ಲಾಪು ಅವರನ್ನು ಫಿಲಿಪೈನ್ಸ್‌ನ ಮೊದಲ ರಾಷ್ಟ್ರೀಯ ನಾಯಕ ಎಂದು ಇಂದಿಗೂ ಆಚರಿಸಲಾಗುತ್ತದೆ.(ಏಜೆನ್ಸೀಸ್)