

ಹೊಳೆಹೊನ್ನೂರು: ಮೋದಿ ದೇಶದ ಶಕ್ತಿ ಹಾಗೂ ಯುವಜನತೆಯ ಚೈತನ್ಯ. ಜೀವನದಲ್ಲಿ ಸ್ವಾವಲಂಬಿಯಾಗಿ ಹೇಗೆ ಬದಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಮೂಲಕ ತಿಳಿಸಿದ್ದಾರೆ ಎಂದು ಎಂಎಲ್ಸಿ ಡಾ. ಧನಂಜಯ ಸರ್ಜಿ ಹೇಳಿದರು. ಎಮ್ಮೆಹಟ್ಟಿ ಗ್ರಾಮದಲ್ಲಿ ಮೋದಿ ಅವರ ಮನ್ ಕೀ ಬಾತ್ ವೀಕ್ಷಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರು ಯಾವುದೇ ರಾಜಕೀಯ ಭಾಷಣ ಮಾಡದೆ ದೇಶದ ಕೆಲವು ರೈತರು ಉತ್ತಮ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಿರುವ ಬಗ್ಗೆ ತಿಳಿಸಿದ್ದಾರೆ ಎಂದರು. ಪ್ರಧಾನಿ ದೇಶದ ಜನತೆಗೆ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಜತೆಗೆ ದೇಶದ ಆರ್ಥಿಕತೆ ಮುಂಚೂಣಿಗೆ ಬರಲಿದೆ. ದೇಶವು ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಘಟನೆಯಿಂದ ಹಿಂದೆ ಸರಿಯುವ ಮಾತಿಲ್ಲ. ಈಗಾಗಲೇ ಜನತೆಗೆ ಪ್ರಧಾನಿ ಮಾತು ನೀಡಿದ್ದಾರೆ. ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಉತ್ತರ ನೀಡಲಾಗಿದೆ. ಆದರೂ ಪಾಕಿಸ್ತಾನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಪ್ರಧಾನಿ ಅವರು ಒಬ್ಬ ಸಾಮಾನ್ಯನಿಗೂ ಅರಿವು ನೀಡುವ ಉದ್ದೇಶದಿಂದ ಮನ್ ಕೀ ಬಾತ್ ಆರಂಭಿಸಿದ್ದಾರೆ. ಇಡೀ ಭಾರತವನ್ನು ಒಟ್ಟಿಗೆ ಕೊಂಡ್ಯೊಯ್ಯುವ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಯುವ ಮೋರ್ಚಾ ಅಧ್ಯಕ್ಷ ಕಿರಣ್, ಬೂತ್ ಅಧ್ಯಕ್ಷ ರಂಗನಾಥ, ಪರಮೇಶ್ವರಪ್ಪ, ಮಂಜುನಾಥ, ಕಿರಣ್ಕುಮಾರ್, ನಾಗರಾಜ, ಶ್ರೀನಿವಾಸ್, ರಘು, ಕೃಷ್ಣಮೂರ್ತಿ, ನಂಜುಂಡಿ, ಶ್ರೀಧರ ಇತರರಿದ್ದರು.
ನಮ್ಮ ದೇಶದಲ್ಲಿ ಶೇ.60ರಷ್ಟು ಯುವಕರಿದ್ದಾರೆ. ದುಡಿಯುವ ಕೈಗಳಿಗೆ ಬೆಂಬಲ ನೀಡಿದರೆ ದೇಶ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ಏರ್ಪಟ್ಟಿದೆ. ಇದೀಗ ಜಾತಿ ಗಣತಿ ವರದಿ ಜಾರಿಗೆ ತರುವುದಕ್ಕೆ ಮುಂದಾಗಿದೆ. ಜಾರಿಯಾದರೆ ಸರ್ಕಾರ ಪತನ ಆರಂಭವಾದಂತೆ. ಡಾ. ಧನಂಜಯ ಸರ್ಜಿ ಎಂಎಲ್ಸಿ