

Car Accident : ವಾಹನ ನಿಬಿಡ ರಸ್ತೆಯನ್ನು ದಾಟುವಾಗ ಮೈಯೆಲ್ಲ ಕಣ್ಣಾಗಿರಬೇಕು. ಸಿಗ್ನಲ್ ನೋಡಿಕೊಂಡು ಹಸಿರು ಲೈಟ್ ಬೆಳಗಿದಾಗ ಮಾತ್ರ ರಸ್ತೆಯನ್ನು ದಾಟಬೇಕು. ಈ ವೇಳೆ ಮೊಬೈಲ್ ಬಳಸದೇ ಹಿಂದೆ-ಮುಂದೆ ಮತ್ತು ಅಕ್ಕ-ಪಕ್ಕ ನೋಡಿಕೊಂಡು ಹೋಗಬೇಕು. ಒಂದು ಕ್ಷಣ ಮೊಬೈಲ್ನಲ್ಲಿ ಮುಳುಗಿದರೆ ಏನಾಗುತ್ತದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ತಾಜಾ ಉದಾಹರಣೆಯಾಗಿದೆ.
ಯುವತಿಯೊಬ್ಬಳು ರೆಡ್ ಲೈಟ್ ಕೂಡ ನೋಡದೆ ಮೊಬೈಲ್ ನೋಡಿಕೊಂಡು ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಹೋಗಿ ಬೀಳುತ್ತಾಳೆ. ಕೆಲವೇ ಕ್ಷಣಗಳಲ್ಲಿ ಆಕೆ ಎದ್ದು ಕುಳಿತಾಗ ಅವಳ ವರ್ತನೆಯನ್ನು ಕಂಡು ಕಾರು ಚಾಲಕ ಒಂದು ಕ್ಷಣ ದಂಗಾಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಸಿಂಗಾಪುರದ ಆರ್ಚರ್ಡ್ ರಸ್ತೆಯಲ್ಲಿ.
ಕೆಂಪು ಲೈಟ್ ಇದ್ದರೂ ಅದನ್ನು ಗಮನಿಸಿದ ಯುವತಿ ಮೊಬೈಲ್ ನೋಡುತ್ತಾ ರಸ್ತೆ ದಾಟುತ್ತಿರುತ್ತಾಳೆ. ಇತ್ತ ಹಸಿರು ಲೈಟ್ ಇದ್ದ ಕಾರಣ ಕಾರು ಚಾಲಕವಾಗಿ ವೇಗವಾಗಿ ಸಿಗ್ನಲ್ ದಾಟಲು ಯತ್ನಿಸುತ್ತಾನೆ. ಈ ವೇಳೆ ರಸ್ತೆ ದಾಟುತ್ತಿದ್ದ ಯುವತಿಗೆ ಕಾರು ಡಿಕ್ಕಿಯಾಗುತ್ತದೆ. ಗುದ್ದಿದ ರಭಸಕ್ಕೆ ಯುವತಿ ಹಾರಿ ಹೋಗಿ ಬೀಳುತ್ತಾಳೆ. ಅಲ್ಲದೆ, ಕೈಯಲ್ಲಿ ಹಿಡಿದಿದ್ದ ಮೊಬೈಲ್ ಕೂಡ ಆಕೆಯಿಂದ ಬೇರ್ಪಟ್ಟು ದೂರ ಹೋಗಿ ಬೀಳುತ್ತದೆ. ಈ ವೇಳೆ ಕಾರು ನಿಲ್ಲಿಸುವ ಚಾಲಕ, ಕಾರಿನಿಂದ ಇಳಿದು ಯುವತಿಯ ಬಳಿ ಹೋಗಿ ಏನಾಯಿತು ಎಂದು ವಿಚಾರಿಸುತ್ತಾನೆ. ಈ ದೃಶ್ಯವೆಲ್ಲ ಕಾರಿನ ಒಳಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪಘಾತದ ಬಳಿಕ ಕಾರು ಚಾಲಕ ಯುವತಿಯ ಬಳಿ ಹೋಗಿ ನೋಡಿದಾಗ ಆಕೆಯ ವರ್ತನೆ ಕಂಡು ಒಂದು ಕ್ಷಣ ಆತ ಶಾಕ್ ಆಗುತ್ತಾನೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಎಲ್ಲೆಲ್ಲಿ ಗಾಯಗಳಾಗಿವೆ? ತನಗೆ ಎಷ್ಟೊಂದು ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲಿಸದೇ ಸಂತ್ರಸ್ತೆ ತನ್ನ ಫೋನ್ಗಾಗಿ ಹುಡುಕಾಡಿ, ಅದು ಡ್ಯಾಮೇಜ್ ಆಗಿದೆಯೋ? ಇಲ್ಲವೋ? ಎಂದು ಚೆಕ್ ಮಾಡಿದ್ದಾಳೆ. ಇದನ್ನು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ವರ್ತನೆಯ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಕಾರಿನಲ್ಲಿ ಕ್ಯಾಮೆರಾ ಇರುವುದು ಎಷ್ಟು ಒಳ್ಳೆಯದು ನೋಡಿ. ಒಂದು ವೇಳೆ ಕ್ಯಾಮೆರಾ ಇಲ್ಲದೇ ಇದ್ದಿದ್ದರೆ ಚಾಲಕನ ಮೇಲೆಯೇ ಗೂಬೆ ಕೂರಿಸುತ್ತಿದ್ದರು ಎಂದು ಕೆಲ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಮೊಬೈಲ್ ಫೋನ್ಗೆ ಜನರು ಎಷ್ಟೊಂದು ಅಡಿಕ್ಟ್ ಆಗಿದ್ದಾರೆ ನೋಡಿ. ಕಾರು ಡಿಕ್ಕಿ ಹೊಡೆದರು ತನಗೇನಾಯಿರತು ಎಂದು ನೋಡದೇ ಮೊಬೈಲ್ಗಾಗಿ ಹುಡುಕಾಡುತ್ತಿದ್ದಾಳೆ. ಇಷ್ಟೊಂದು ಮೊಬೈಲ್ ಹುಚ್ಚು ಇರಬಾರದು. ರಸ್ತೆಯಲ್ಲಿ ಓಡಾಡುವಾಗಿ ಮೊಬೈಲ್ ಅನ್ನು ಬದಿಗಿಟ್ಟು ಓಡಾಡಿ ಮತ್ತು ಪ್ರಾಣ ಹೋದರೆ ಮರಳಿ ಬರದು ಎಂದು ನೆಟ್ಟಿಗರು ಯುವತಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)