ಪುಷ್ಪ-3 ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ ಏನ್ ಮಾಡ್ತೀರಾ? ಸೂರ್ಯನ ಪ್ರಶ್ನೆಗೆ ತಿಲಕ್​ ಕೊಟ್ಟ ಉತ್ತರ ವೈರಲ್​ | Tilak Varma

Tilak Varma
Published on

Tilak Varma : ಟೀಮ್​​ ಇಂಡಿಯಾದ ಯುವ ಆಟಗಾರ ತಿಲಕ್​ ವರ್ಮ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಸತತ ಶತಕ ಬಾರಿಸಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಒಟ್ಟು ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾ 3-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಇದೇ ಖುಷಿಯಲ್ಲಿ ಕ್ಯಾಪ್ಟನ್​​ ಸೂರ್ಯಕುಮಾರ್ ಯಾದವ್ ಅವರು ತಿಲಕ್ ವರ್ಮ ಜತೆ ಹಾಸ್ಯಮಯ ಮಾತುಕತೆಯನ್ನು ನಡೆಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸೂರ್ಯಕುಮಾರ್​ ಮತ್ತು ತಿಲಕ್​ ನಡುವೆ ನಡೆದ ಸಂಭಾಷಣೆ ಈ ಕೆಳಕಂಡಂತಿದೆ...

ಸೂರ್ಯಕುಮಾರ್​: ತಿಲಕ್ ವರ್ಮ ನಾನೊಂದು ಪ್ರಶ್ನೆ ಕೇಳ್ತಾ ಇದ್ದೀನಿ... ನಿಮ್ಮ ಹೇರ್ ಸ್ಟೈಲ್ ಸೀಕ್ರೆಟ್ ಏನು? ನಿಮ್ಮ ಕೂದಲು ನೋಡಿ ಎಲ್ಲರೂ ನಿಮ್ಮನ್ನು ಅಲ್ಲು ಅರ್ಜುನ್.. ಅಲ್ಲು ಅರ್ಜುನ್ ಎಂದು ಕರೆಯುತ್ತಿದ್ದಾರೆ. ಇದೇನು, ಆ ತೆಲುಗು ಸೂಪರ್ ಸ್ಟಾರ್ ಮತ್ತು ನೀವು ಇಲ್ಲಿದ್ದೀರಿ.

ತಿಲಕ್​ ವರ್ಮ: ಇದರಲ್ಲಿ ಅಂಥದ್ದು ಏನು ಇಲ್ಲ. ಎಲ್ಲವೂ ಶುರುವಾಗಿದ್ದೇ ನಿಮ್ಮಿಂದ. ನನ್ನ ಉದ್ದನೆಯ ಕೂದಲು ನೋಡಿ ಅಲ್ಲು ಅರ್ಜುನ್​ ಅಂತ ಕರೆಯಲು ಶುರು ಮಾಡಿದ್ದೇ ನೀವು. ಸಹೋದರ ನೀವು ಅಲ್ಲು ಅರ್ಜುನ್​ ರೀತಿ ಕಾಣುತ್ತಿದ್ದೀರಿ ಎಂದು ಹೇಳಿದಿರಿ. ಒಂದು ಸಲ ನೀವು ಹೇಳಿದ್ದಕ್ಕೆ ಅದು ಎಲ್ಲೆಡೆ ಹಡಿದಾಡಿತು. ಉದ್ದನೆಯ ಕೂದಲು ನನಗೆ ತುಂಬಾ ಇಷ್ಟ. ಅಲ್ಲದೆ, ಉದ್ದನೆಯ ಕೂದಲಿನೊಂದಿಗೆ ಹೆಲ್ಮೆಟ್ ಧರಿಸುವುದು ಒಳ್ಳೆಯದು ಎಂದು ನಾನು ಭಾವಿಸಿದ್ದೇನೆ.

ಸೂರ್ಯಕುಮಾರ್​: ಹಾಗಾದರೆ ನೀವು ಪುಷ್ಪ-3 ಸಿನಿಮಾದಲ್ಲಿ ಕೆಲಸ ಮಾಡುತ್ತೀರಾ?

ತಿಲಕ್ ವರ್ಮ : ಹಾಗೇನಿಲ್ಲ... ಬಾಲ್​ ಮತ್ತು ಬ್ಯಾಟ್ ಹಿಡಿದು ಕ್ರಿಕೆಟ್​​ ಆಡೋದಷ್ಟೇ ನನ್ನ ಕೆಲಸ. ಮೈದಾನದಲ್ಲಿ ಆಡಬೇಕು ಮತ್ತು ಹೊರಗೆ ಹೋಗಿ ಎಂಜಾಯ್ ಮಾಡಬೇಕು. ಉಳಿದದ್ದನ್ನು ಆ ದೇವರು ನೋಡಿಕೊಳ್ಳುತ್ತಾನೆ.

ತಿಲಕ್​ ವರ್ಮಾ ಹೇಳಿದ ಉತ್ತರ ಕೇಳಿದ ಸೂರ್ಯ ಕೊನೆಯಲ್ಲಿ ಈ ಹುಡುಗ ಎಷ್ಟು ಪ್ರಾಮಾಣಿಕ ಮತ್ತು ಡೌನ್ ಟು ಅರ್ಥ್ ಎಂದು ಹೇಳುತ್ತಾರೆ. ಈ ಮಾತಿನೊಂದಿಗೆ ಸೂರ್ಯ ಮತ್ತು ತಿಲಕ ನಡುವಿನ ಹಾಸ್ಯಮಯ ಸಂಭಾಷಣೆ ಮುಗಿಯುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಹ ಆಟಗಾರರೊಂದಿಗೆ ನಾಯಕ ಸೂರ್ಯಕುಮಾರ್ ಅವರ ಒಡನಾಟ ಕಂಡು ನೆಟ್ಟಿಗರು ಮೆಚ್ಚಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಇನ್ನು ಪಂದ್ಯ ವಿಚಾರಕ್ಕೆ ಬರುವುದಾದರೆ, ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸರಣಿ ನಿರ್ಣಾಯಕ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ, ಎಡಗೈ ಬ್ಯಾಟರ್ ತಿಲಕ್ ವರ್ಮ (120* ರನ್, 47 ಎಸೆತ, 9 ಬೌಂಡರಿ,10 ಸಿಕ್ಸರ್) ಸತತ ಎರಡನೇ ಶತಕ ಹಾಗೂ ಆರಂಭಿಕ ಸಂಜು ಸ್ಯಾಮ್ಸನ್ (109* ರನ್, 56 ಎಸೆತ, 6 ಬೌಂಡರಿ, 9 ಸಿಕ್ಸರ್) ಬಿರುಸಿನ ಶತಕದಬ್ಬರದ ನೆರವಿನಿಂದ ರನ್‌ಪ್ರವಾಹ ಹರಿಸಿತು. 1 ವಿಕೆಟ್‌ ನಷ್ಟಕ್ಕೆ 283 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಪ್ರತಿಯಾಗಿ ವೇಗಿ ಅರ್ಷದೀಪ್ ಸಿಂಗ್ (20ಕ್ಕೆ3) ದಾಳಿಗೆ ತತ್ತರಿಸಿದ ದ.ಆಫ್ರಿಕಾ 10 ರನ್‌ಗಳಿಗೆ ಅಗ್ರ 4 ವಿಕೆಟ್ ಕಳೆದುಕೊಂಡಿತು. ಆಗ ಟ್ರಿಸ್ಟಾನ್ ಸ್ಟಬ್ಸ್ (43) ಹಾಗೂ ಡೇವಿಡ್ ಮಿಲ್ಲರ್ (36) ನಡೆಸಿದ ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಹರಿಣ ಪಡೆ 18.2 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಸೂರ್ಯಕುಮಾರ್ ಬಳಗ 4 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿತು. ಟಿ20 ವಿಶ್ವಚಾಂಪಿಯನ್ ತಂಡ 2024ರಲ್ಲಿ ಆಡಿದ ಕೊನೇ ಪಂದ್ಯ ಇದಾಗಿದ್ದು, ಹಾಲಿ ವರ್ಷ ಆಡಿದ 26 ಪಂದ್ಯಗಳಲ್ಲಿ 24ನೇ ಗೆಲುವು ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net