

ನವದೆಹಲಿ: ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ತಮ್ಮ ಒಡೆತನದ ಪ್ರತಿಯೊಂದು ಚರಾಸ್ತಿಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಏಪ್ರಿಲ್ 09) ಹೇಳಿದೆ.
ಅರುಣಾಚಲ ಪ್ರದೇಶದ ತೇಜು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಕರಿಖೋ ಕ್ರಿ ಅವರ 2019ರ ಚುನಾವಣಾ ಆಯ್ಕೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯ ಬಗ್ಗೆ ತಿಳಿದುಕೊಳ್ಳಲು ಮತದಾರರಿಗೆ ಸಂಪೂರ್ಣ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಚುನಾವಣಾ ಅಭ್ಯರ್ಥಿಯು ಅವನ/ಅವಳ ಉಮೇದುವಾರಿಕೆಗೆ ಸಂಬಂಧಿಸದ ವಿಷಯಗಳ ಬಗ್ಗೆ ಗೌಪ್ಯತೆಯ ಹಕ್ಕನ್ನು ಹೊಂದಿರುತ್ತಾನೆ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ಕರಿಖೋ ಕ್ರಿ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡಿದ್ದ ಗೌಹಾಟಿ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿತು.
ನಾಮಪತ್ರ ಸಲ್ಲಿಸುವಾಗ ಶಾಸಕರು ತಮ್ಮ ಪತ್ನಿ ಮತ್ತು ಮಗನ ಒಡೆತನದ ಮೂರು ವಾಹನಗಳನ್ನು ಬಹಿರಂಗಪಡಿಸದೆ ಅನಾವಶ್ಯಕ ಪ್ರಭಾವ ಬೀರಿದ್ದಾರೆ ಎಂದು ಕರಿಖೋ ಕ್ರಿ ವಿರುದ್ಧ ಅವರ ಪ್ರತಿಸ್ಪರ್ಧಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನಾಮಪತ್ರ ಸಲ್ಲಿಸುವ ಮೊದಲೇ ವಾಹನಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಅಥವಾ ಮಾರಾಟ ಮಾಡಲಾಗಿದೆ ಎಂಬುದನ್ನು ಗಮನಿಸಿದ್ದು, ವಾಹನಗಳು ಇನ್ನೂ ಕ್ರಿ ಅವರ ಕುಟುಂಬದ ಒಡೆತನದಲ್ಲಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮತದಾರರು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುವುದರಿಂದ ಕ್ರಿ ಅವರು ತಮ್ಮ ಆಸ್ತಿಯ ಎಲ್ಲ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಎಲ್ಲವನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)