

ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ವಿಚಾರ ಮತ್ತೆ ಗರಿಗೆದರಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲು ನವದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಅಮಿತ್ ಷಾ, ಸಂಪುಟ ಪುನರ್ರಚನೆ ಬಗ್ಗೆ ದೆಹಲಿಯಲ್ಲಿ ಚರ್ಚೆ ಮಾಡೋಣ ಎಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಬುಧವಾರ ಸಂಜೆ ವೇಳೆಗೆ ಅವರು ಗೃಹ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವರನ್ನು ಸಿಎಂ ಬೊಮ್ಮಾಯಿ ಭೇಟಿ ಮಾಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವುದರಿಂದ ಈ ಬಗ್ಗೆ ಚರ್ಚೆ ಆಗುತ್ತದೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಯಿರುವುದರಿಂದ ಸರ್ಕಾರ, ಸಚಿವರು ಮತ್ತಷ್ಟು ಆಕ್ರಮಣಕಾರಿ ಹಾಗೂ ಅಭಿವೃದ್ಧಿಶೀಲ ಕ್ರಮದಲ್ಲಿ ಸಾಗಬೇಕು. ನಾಯಕತ್ವದ ಬಗ್ಗೆ ಜನರಲ್ಲಿ ದೃಢ ವಿಶ್ವಾಸ ಮೂಡಬೇಕು ಎಂಬ ಸಂದೇಶವನ್ನೂ ಹೈಕಮಾಂಡ್ ನಾಯಕರು ರವಾನಿಸುವ ಉದ್ದೇಶ ಹೊಂದಿದ್ದಾರೆನ್ನಲಾಗಿದೆ.
ಈ ಮಧ್ಯೆ, ಸಂಪುಟ ಪುನರ್ ರಚನೆಯಾಗುತ್ತದೋ ಅಥವಾ ಖಾಲಿ ಇರುವ ಐದು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲಾಗುತ್ತದೋ ಎಂಬ ಬಗ್ಗೆಯೂ ಖಚಿತತೆ ಇಲ್ಲ. ಆದರೆ, ಸಂಪುಟ ಪುನರ್ ರಚನೆಯಾದಲ್ಲಿ ಯಾರನ್ನು ಸೇರಿಸಬೇಕು ಎಂಬ ಬಗ್ಗೆ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಧ್ಯೆ ಮಾತುಕತೆ ನಡೆದಿರಬಹುದು. ಇಬ್ಬರೂ ಅನೇಕ ಬಾರಿ ಪರಸ್ಪರ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ದೆಹಲ್ಲಿಯಲ್ಲೂ ಸಿಎಂ ಜೋಶಿ ಮಧ್ಯೆ ಮಾತುಕತೆ ನಡೆದಿದೆ ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಮಿತ್ ಷಾ ಭೇಟಿ ವೇಳೆ ಸಚಿವ ಜೋಶಿ ಅವರೂ ಹಾಜರಿರುವ ಸಾಧ್ಯತೆಯಿದೆ.
ಮೇಜರ್ ಸರ್ಜರಿ ಸಾಧ್ಯತೆ: ಗುಜರಾತ್ ಸರ್ಕಾರದಲ್ಲಿ ಸಚಿವರ ವೈಫಲ್ಯದಿಂದಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಇಡೀ ಸಂಪುಟವನ್ನು ಬದಲಿಸು ವಂತಹ ದಿಟ್ಟ ಕ್ರಮ ಕೈಗೊಂಡಿದ್ದರು. ರಾಜ್ಯದಲ್ಲೂ ಅನೇಕ ಸಚಿವರ ಕಾರ್ಯವೈಖರಿ ವರಿಷ್ಠರಿಗೆ ಸಮಾಧಾನ ತಂದಿಲ್ಲ. ಮೇಲಾಗಿ, ಸರ್ಕಾರದ ನೇಮಕಾತಿಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಆಗುತ್ತಿರುವ ಅಕ್ರಮದಲ್ಲಿ ಬಿಜೆಪಿ ನಾಯಕರ ಹೆಸರೂ ಕೇಳಿ ಬರುತ್ತಿರುವುದು ವರಿಷ್ಠರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯಾದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ಸಂಪುಟ ಸಭೆ 3ನೇ ಬಾರಿ ಮುಂದಕ್ಕೆ: ರಾಜ್ಯ ಸಚಿವ ಸಂಪುಟ ಸಭೆ ಮೂರನೇ ಬಾರಿ ಮುಂದೂಡಲ್ಪಟ್ಟಿದೆ. ಈ ಮೊದಲು ಮೇ 5ಕ್ಕೆ ಸಭೆ ನಿಗದಿಯಾಗಿತ್ತು. ಬಳಿಕ ಮೇ 11ರಂದು ಬೆಳಗ್ಗೆ 11ಕ್ಕೆ ಮುಂದೂಡಲಾಯಿತು. ನಂತರ ಮೇ 11ರ ಸಂಜೆ 4 ಗಂಟೆಗೆ ಬದಲಾವಣೆ ಮಾಡಲಾಯಿತು. ಇದೀಗ ಮೇ 12ರ ಮಧ್ಯಾಹ್ನ 12ಕ್ಕೆ ಮುಂದೂಡಲ್ಪಟ್ಟಿದೆ. ಯಾವ ಕಾರಣಕ್ಕೆ ಪದೇ ಪದೆ ಮುಂದೂಡಲ್ಪಡುತ್ತಿದೆ ಎಂಬುದು ನಿಗೂಢವಾಗಿದೆ.
ಪ್ರಧಾನಿ ಮೋದಿ ಭೇಟಿ ಆಗುತ್ತಾ?: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಉದ್ದೇಶವನ್ನು ಬೊಮ್ಮಾಯಿ ಹೊಂದಿದ್ದಾರೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ. ಮತ್ತೊಂದು ದಿನ ಕಾಯುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಪ್ರಧಾನಿ ಸಮಯ ನಿಗದಿಯಾದರೆ ಗುರುವಾರವೂ ಬೊಮ್ಮಾಯಿ ಅವರು ದೆಹಲಿಯಲ್ಲಿ ಉಳಿಯಬೇಕಾಗುತ್ತದೆ ಎಂದು ಮೂಲಗಳು ಹೇಳುತ್ತವೆ.