

ನವದೆಹಲಿ: ಕಾರ್ವಿುಕರ ಸಂಹಿತೆಗೆ ಮೂರು ಕಾನೂನು ಸೇರಿಸುವ ಪ್ರಸ್ತಾವನೆಗೆ ಪ್ರಧಾನಿ ನೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದು ಮುಂದಿನ ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಕಾರ್ವಿುಕರಿಗೆ ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಹಾಗೂ ಕೈಗಾರಿಕಾ ಸಂಬಂಧ ಕುರಿತ ಹೊಸ ಕಾನೂನುಗಳು ಇವಾಗಿವೆ. ಕಾರ್ವಿುಕರಿಗೆ ಸಂಬಂಧಿಸಿದ 44 ಕಾನೂನುಗಳನ್ನು ನಾಲ್ಕು ಸಂಹಿತೆ (ಕೋಡ್)ಗಳಲ್ಲಿ ಕ್ರೋಡೀಕರಿಸಿದ ಮಸೂದೆಯನ್ನು ಕಳೆದ ವರ್ಷ ಜೂನ್ನಲ್ಲಿ ಸರ್ಕಾರ ಮಂಡಿಸಿತ್ತು. ಆಗ ಈ ಮೂರು ಅಂಶಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಹೀಗಾಗಿ ಪರಿಷ್ಕರಿಸಲಾದ ಈ ಮೂರು ಸಂಹಿತೆಗಳನ್ನು ಸಂಪುಟ ಅನುಮೋದಿಸಿದೆ.
ಸಾಮಾಜಿಕ ಭದ್ರತೆ ಸಂಹಿತೆಯು ಭವಿಷ್ಯ ನಿಧಿ, ವಿಮೆ, ಮಹಿಳಾ ಉದ್ಯೋಗಿಗಳಿಗೆ ಮಾತೃತ್ವ ಸಮಯದ ಸೌಕರ್ಯಗಳನ್ನು ಒಳಗೊಂಡಿದೆ. ಔದ್ಯೋಗಿಕ ಸುರಕ್ಷತೆಯಲ್ಲಿ ಕಾರ್ಖಾನೆಯಲ್ಲಿ ಅಳವಡಿಸಬೇಕಾದ ಸುರಕ್ಷತೆ, ಕಾರ್ವಿುಕ ಕಲ್ಯಾಣ ಕಾನೂನುಗಳನ್ನು ವಿವರಿಸಲಾಗಿದೆ. ಕೈಗಾರಿಕಾ ಸಂಬಂಧದ ಸಂಹಿತೆಯಲ್ಲಿ ಕೈಗಾರಿಕಾ ವಿವಾದ, ಕಾರ್ವಿುಕ ಒಕ್ಕೂಟಕ್ಕೆ ಸಂಬಂಧಿಸಿ ಅಂಶಗಳು ಇವೆ.