ನಾಗರಿಕ ಸಮಾಜ ತಲೆತಗ್ಗಿಸುವ ಈ ದುರ್ವರ್ತನೆ ಸಹಿಕೊಳ್ಳುವ ಪ್ರಶ್ನೆಯೇ ಇಲ್ಲ: ಬಿವೈವಿ

ವಿಜಯವಾಣಿ - 2025-02-22T175050.129
Published on

ಬೆಂಗಳೂರು: ಬೆಳಗಾವಿಯಲ್ಲಿ ಎನ್​ಡಬ್ಲ್ಯೂಕೆಆರ್​ಟಿಸಿ ಬಸ್​ ನಿರ್ವಾಹಕ ಮಹದೇವಪ್ಪ ಹುಕ್ಕೇರಿಗೆ ಮರಾಠಿ ಮಾತನಾಡುವಂತೆ ಮರಾಠಿ ಪುಂಡರು ಅಮಾನುಷವಾಗಿ ಥಳಿಸಿದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆಯುತ್ತಿದೆ. ಕನ್ನಡಿಗ ನಿರ್ವಾಹಕನ ಮೇಲೆ ಹಲ್ಲೆಗೈದ ಪುಂಡರ ವಿರುದ್ಧ ಕರವೇ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಚಾರ ಗಡಿ ಭಾಗದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ದೌಡಾಯಿಸಿದ್ದಾರೆ.

ಇನ್ನು ಘಟನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಬೆಳಗಾವಿ ಗಡಿ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾಷಾ ಸೌಹಾರ್ದತೆ ವೃದ್ಧಿಸುತ್ತಿದೆ. ನಾಡ ಪ್ರೇಮ ಪಸರಿಸುತ್ತಿದೆ, ಗಡಿ ಸೌಹಾರ್ದತೆಯೂ ಇಮ್ಮಡಿಸುತ್ತಿದೆ. ಈ ನಡುವೆ ಸಮಾಜಘಾತುಕ ಕಿಡಿಗೇಡಿಗಳು ಭಾಷೆಯ ಹೆಸರಿನಲ್ಲಿ ಪುಂಡತನ ಮೆರೆಯುತ್ತಿರುವುದು ಅತ್ಯಂತ ಖಂಡನೀಯ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಮರಾಠಿ ಭಾಷೆಯ ಹೆಸರಿನಲ್ಲಿ ಕನ್ನಡಿಗ ನಿರ್ವಾಹಕರ ಮೇಲೆ ಹಲ್ಲೆ ನಡೆದಿರುವ ಘಟನೆ ಭಾಷಾ ದೌರ್ಜನ್ಯದ ಪರಮಾವಧಿಯಾಗಿದೆ. ನಾಗರಿಕ ಸಮಾಜ ತಲೆತಗ್ಗಿಸುವ ಈ ದುರ್ವರ್ತನೆಯನ್ನು ಸಹಿಕೊಳ್ಳುವ ಪ್ರಶ್ನೆಯೇ ಇಲ್ಲ. ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿ. ಮರಾಠಿ-ಕನ್ನಡದ ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಕನ್ನಡ ವಿರೋಧಿ ಮನಸ್ಥಿತಿಯ ದುರಾಕ್ರಮಣಗಳು ಪುನರಾವರ್ತನೆಯಾಗದ ರೀತಿಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಹಿಸಲಿ" ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net