ಆ ಗುಹೆಯಲ್ಲಿ ಮೊದಲಿಗೆ ಕಂಡಿದ್ದೇ ಭಯಾನಕ ದೃಶ್ಯ! ಶಾಕಿಂಗ್ ವಿಷಯ ಹಂಚಿಕೊಂಡ 'ಮಂಜುಮ್ಮೆಲ್​ ಬಾಯ್ಸ್' ನಿರ್ದೇಶಕ | Manjummel Boys

ವಿಜಯವಾಣಿ - 2025-02-22T171531.077
Published on

Manjummel Boys: 2024ರ ಫೆಬ್ರವರಿ 22ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಮಲಯಾಳಂ ಬ್ಲಾಕ್​ಬಸ್ಟರ್​ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’(Manjummel Boys), ಅಪಾರ ಜನಮನ್ನಣೆ ಗಳಿಸುವುದರ ಜತೆ ಬಾಕ್ಸ್ ಆಫೀಸ್ ದಾಖಲೆಗಳನ್ನು​ ಧೂಳಿಪಟ ಮಾಡಿತು. ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ ಈ ಚಿತ್ರವು ಮಾಲಿವುಡ್​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು. ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಸದ್ದು ಮಾಡಿದ ಮಂಜುಮ್ಮೆಲ್ ಬಾಯ್ಸ್​, ಮಲಯಾಳಂ ಚಿತ್ರರಂಗಕ್ಕೆ ಗಳಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಹೊಸ ಆಯಾಮವನ್ನೇ ತಂದುಕೊಟ್ಟಿತು.

ದಾಖಲೆಗಳು ಪುಡಿ ಪುಡಿ

ಈ ಹಿಂದಿನ ದಾಖಲೆಗಳನ್ನು ಪುಡಿ ಪುಡಿ ಮಾಡುವ ಮೂಲಕ ಮಾಲಿವುಡ್​ನಲ್ಲಿ ತನ್ನದೇ ಹೊಸ ದಾಖಲೆ ಬರೆದು, ‘ಇಂಡಸ್ಟ್ರಿ ಹಿಟ್’ ಎಂಬ ಪಟ್ಟ ಪಡೆದ ‘ಮಂಜುಮ್ಮೆಲ್​ ಬಾಯ್ಸ್’ ಚಿತ್ರವನ್ನು ತಮಿಳು ನಟ ಕಮಲ್ ಹಾಸನ್ ನಟಿಸಿದ್ದ ಸೂಪರ್​ಹಿಟ್​ ‘ಗುಣ’ ಚಿತ್ರ ಶೂಟ್​ ಆದ ಗುಹೆಯಲ್ಲೇ ಚಿತ್ರೀಕರಿಸಲಾಯಿತು. ಬಾಕ್ಸ್​ ಆಫೀಸ್​ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಮಂಜುಮ್ಮೆಲ್ ಬಾಯ್ಸ್​, ಅತೀ ಕಡಿಮೆ ಬಜೆಟ್​ನಲ್ಲಿ ನಿರ್ಮಾಣಗೊಂಡು, ಬ್ಲಾಕ್​​ಬಸ್ಟರ್​ ಹಿಟ್​ ಸಾಲಿಗೆ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ವಿ ಚಿತ್ರವನ್ನು ನಿರ್ದೇಶಿಸಿರುವ ಚಿದಂಬರಂ, ಚಿತ್ರದ ತೆರೆಮರೆಯ ದೃಶ್ಯಗಳನ್ನು ಇದೀಗ ನೋಡುಗರೊಂದಿಗೆ ಹಂಚಿಕೊಂಡಿದ್ದಾರೆ.

ಅಸಲಿ ಗುಣೆ ಗುಹೆಯ ಕಥೆ

ಸಿನಿಪ್ರೇಕ್ಷಕರ ಮನಗೆದ್ದು, ಅಪಾರ ಮೆಚ್ಚುಗೆಯನ್ನು ಗಳಿಸಿದ ಮಂಜುಮ್ಮೆಲ್​ ಬಾಯ್ಸ್​ ಹಿಂದೆ ಹಲವರ ಶ್ರಮವಿದೆ. ಕಡಿಮೆ ಬಜೆಟ್​ನಲ್ಲಿ ಅತ್ಯುತ್ತಮ ಸಿನಿಮಾ ಕೊಡಲು ತೆರೆಹಿಂದೆ ಬ್ಲಾಕ್​ಬಸ್ಟರ್​ ಹಿಟ್​ ಚಿತ್ರದ ನಿರ್ದೇಶಕ ಚಿದಂಬರಂ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಸಿನಿಮಾ ಪ್ರಾರಂಭಿಸುವ ಮುನ್ನ ಅಸಲಿ ಗುಣ ಗುಹೆಗೆ ತೆರಳಿ, ಅಲ್ಲಿನ ಸ್ಥಿತಿ-ಗತಿಗಳನ್ನು ಪರಿಶೀಲಿಸಿದ ನಿರ್ದೇಶಕರು, ತಮ್ಮ ಚಿತ್ರಕ್ಕೆ ಯಾವ ಸ್ಥಳಗಳು ಸೂಕ್ತ ಎಂಬುದನ್ನು ಗಮನಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಿರ್ಮಾಪಕರು ಇತ್ತೀಚೆಗೆ ನಿರ್ಮಾಣ ವಿನ್ಯಾಸದ ಮೇಲೆ ಕೇಂದ್ರೀಕರಿಸುವ ತೆರೆಮರೆಯ ವೀಡಿಯೊವನ್ನು ಬಿಡುಗಡೆಗೊಳಿಸಿ, ಅದರ ಕುರಿತು ಒಂದಷ್ಟು ಅನುಭವಗಳನ್ನು ಬಹಿರಂಗಪಡಿಸಿದ್ದಾರೆ.

ತೆರೆಮರೆಯ ಅನ್ವೇಷಣೆ

'ಬಿಹೈಂಡ್ ದಿ ಪ್ರೊಡಕ್ಷನ್ ಡಿಸೈನ್' ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಮಂಜುಮ್ಮೆಲ್​ ಬಾಯ್ಸ್​ ಚಿತ್ರದಲ್ಲಿ ತೋರಿಸಿರುವ 'ಗುಣ ಗುಹೆ'ಯನ್ನು ಮರುಸೃಷ್ಟಿಸಲು ತಯಾರಕರು ತೆಗೆದುಕೊಂಡ ಪ್ರಯತ್ನಗಳು ದೃಶ್ಯದಲ್ಲಿ ಸೆರೆಯಾಗಿವೆ. ಚಿತ್ರಕ್ಕೆ ಸಂಬಂಧಿಸಿದಂತೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿರುವ ನಿರ್ದೇಶಕರು, "ಈ ಸಿನಿಮಾವನ್ನು ಕೇರಳದ ಪ್ರಮುಖ ಸ್ಥಳವಾದ ಕೊಡೈಕೆನಾಲ್​ನಲ್ಲಿ ಚಿತ್ರೀಕರಿಸಿದ್ದೆವು. ಅಲ್ಲಿಗೆ ಹಲವಾರು ಬಾರಿ ನಾನು ಭೇಟಿ ನೀಡಿದ್ದೇನೆ. ಆದಾಗ್ಯೂ, ನಾನು ಮೊದಲು ಗುಣ ಗುಹೆಯನ್ನು ನೋಡಿರಲಿಲ್ಲ. ಆರಂಭದಲ್ಲಿ, ಸುಲಭವಾಗಿ ಗುಹೆ ನೋಡಬಹುದು ಎಂದೇ ಆಗಮಿಸಿದೆ. ಆದರೆ, ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು, ಅದು ಲಾಕ್ ಆಗಿತ್ತು ಎಂಬುದು. ಈ ಬಳಿಕ ಮಾಡಿದ ಪ್ರಯತ್ನ ಫಲಿಸಿತು" ಎಂದರು.

ಮಂಗನ ಬುರುಡೆ

"ಆರಂಭದಲ್ಲಿ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ, ಸ್ವಲ್ಪ ಸಮಯದ ನಂತರ ಸತತ ಪ್ರಯತ್ನಗಳಿಂದ, ನಾನು ಅರಣ್ಯ ಸಿಬ್ಬಂದಿಯವರ ಅನುಮತಿ ಪಡೆಯುವಲ್ಲಿ ಯಶಸ್ವಿಯಾದೆ. ಪ್ರವಾಸಿಗರು ಬರುವ ಮೊದಲೇ ನಾನು ಮತ್ತು ನನ್ನ ತಂಡ ಗುಹೆಯ ಸ್ಥಳವನ್ನು ಪ್ರವೇಶಿಸಿ, ಅನ್ವೇಷಿಸಲು ಸಾಧ್ಯವಾಯಿತು. ಈ ವೇಳೆ ನಾನು, ನಿರ್ಮಾಪಕ ಶಾನ್, ಛಾಯಾಗ್ರಾಹಕ ಶಿಜು ಖಾಲಿದ್ ಮತ್ತು ಅಜಯನ್ ಚಾಲಿಸ್ಸೆರಿ ಗುಹೆಯೊಳಗೆ ಪ್ರವೇಶಿಸಿದೆವು. ಆಗ ಅಲ್ಲಿರುವ ಆಳವಾದ ಗುಂಡಿಯನ್ನು ನೋಡಿದೆ. ಅಲ್ಲಿ ನನ್ನ ಕಣ್ಣಿಗೆ ಬಿದ್ದ ಮೊದಲ ಭಯಾನಕ ದೃಶ್ಯವೇ ಮಂಗನ ತಲೆಬುರುಡೆ. ಒಂದು ನಿಮಿಷ ಸಾವು ನಮ್ಮನ್ನು ಅಲ್ಲಿ ಸ್ವಾಗತಿಸುವಂತೆ ತೋರಿದ್ದು ಮರೆಯಲಾಗದು" ಎಂದಿದ್ದಾರೆ.

"ಕೊಳೆತ ವಾಸನೆ ವಿಪರೀತವಾಗಿತ್ತು. ಶತಮಾನಗಳಿಂದ ಸೂರ್ಯನ ಬೆಳಕು ಮುಟ್ಟದ ಬಂಡೆಗಳು ಮತ್ತು ಗುಹೆಯ ಒಳಗಿನಿಂದ ಬರುವ ವಾಸನೆಗಳು ನಮಗೆ ಚಿತ್ರೀಕರಿಸಲು ಅನುವು ಮಾಡಿಕೊಡುವುದೇ ಎಂಬ ಪ್ರಶ್ನೆ ನಮ್ಮಲ್ಲಿ ಎದುರಾಯಿತು. ಒಂದಷ್ಟು ಚರ್ಚೆಗಳ ಬಳಿಕ ಇಲ್ಲಿ ಚಿತ್ರೀಕರಣ ಅಸಾಧ್ಯವೆಂದು ನಾವು ನಿರ್ಧರಿಸಿದೆವು. ಇಂದಿನ ಹಗುರವಾದ ಕ್ಯಾಮೆರಾಗಳು ಮತ್ತು ಮುಂದುವರಿದ ಆಧುನಿಕ ತಂತ್ರಜ್ಞಾನವಿದ್ದರೂ ಚಿತ್ರೀಕರಣವು ದೊಡ್ಡ ಸವಾಲಾಗಿತ್ತು. ನನಗೆ ನನ್ನ ಸಿಬ್ಬಂದಿಯ ಬಗ್ಗೆ ಅಪಾರ ಗೌರವವಿದೆ" ಎಂದು ನಿರ್ದೇಶಕರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net