90 ನಿಮಿಷಕ್ಕೂ ಮುಂಚೆಯೇ ಹಾಜರ್​... ಪಾಕಿಸ್ತಾನಕ್ಕೆ ಸೋಲಿನ ಸುಳಿವು ಕೊಟ್ಟ ರನ್​ ಮೆಷಿನ್​ ವಿರಾಟ್​ ಕೊಹ್ಲಿ! Virat Kohli

Virat Kohli
Published on

Virat Kohli : ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಹೈವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿತವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್​ ಟ್ರೋಫಿಯ ಗ್ರೂಪ್​ ಹಂತದ ಪಂದ್ಯ ನಾಳೆ (ಫೆ.23) ದುಬೈನಲ್ಲಿ ನಡೆಯಲಿದೆ. ಉಭಯ ತಂಡಗಳಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿರುವುದರಿಂದ ಆಟಗಾರರು ಕಠಿಣ ತರಬೇತಿಯಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಟೀಮ್​ ಇಂಡಿಯಾದ ರನ್​ ಮೆಷಿನ್​, ದಾಖಲೆಗಳ ಸರದಾರ ಹಾಗೂ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಕೊಹ್ಲಿಯ ಬದ್ಧತೆ ಎಷ್ಟರಮಟ್ಟಿಗೆ ಇದೆ ಅಂದರೆ, ತರಬೇತಿಗೆ ನಿಗದಿತ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿಯೇ ಹಾಜಾರಾಗಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯವೆಂದರೆ ಭಾರತಕ್ಕೆ ಒಂದು ಪ್ರತಿಷ್ಠೆಯ ಪಂದ್ಯ. ಇದನ್ನು ಕೇಲವ ಒಂದು ಪಂದ್ಯವನ್ನಾಗಿ ನೋಡುವುದಿಲ್ಲ. ಈ ಪಂದ್ಯದ ಮೇಲೆ ಸಾಕಷ್ಟು ಭಾವನೆ ಇರುತ್ತದೆ. ಈ ಪಂದ್ಯದಲ್ಲಿ ಗೆದ್ದರೆ ಇಡೀ ಭಾರತವೇ ಸಂಭ್ರಮಿಸುತ್ತದೆ. ಒಂದು ವೇಳೆ ಸೋತರೆ ಇಡೀ ಭಾರತವೇ ನೊಂದುಕೊಳ್ಳುತ್ತದೆ. ಹೀಗಾಗಿ ಭಾರತೀಯ ಆಟಗಾರರಿಗೆ ಪಾಕ್​ ವಿರುದ್ಧದ ಪಂದ್ಯ ಅಂದಾಗ ಜವಾಬ್ದಾರಿಯ ಜತೆಗೆ ತುಸು ಒತ್ತಡವೂ ಹೆಚ್ಚಾಗುತ್ತದೆ. ಗೆಲ್ಲಲೇಬೇಕಾದ ಅನಿವಾರ್ಯತೆ ಇರುವುದರಿಂದ ಕಠಿಣ ತರಬೇತಿಯಲ್ಲಿ ಆಟಗಾರರು ತೊಡಗಿಕೊಂಡಿದ್ದಾರೆ. ಅದರಲ್ಲೂ ವಿರಾಟ್​ ಕೊಹ್ಲಿ ಅವರು ಸಹಾಯಕ ಕೋಚ್​ ಅಭಿಷೇಕ್​ ನಾಯರ್​ ಅವರೊಂದಿಗೆ ದುಬೈನ ಐಸಿಸಿ ಕ್ರಿಕೆಟ್​ ಅಕಾಡೆಮಿಗೆ ತರಬೇತಿಗಾಗಿ 90 ನಿಮಿಷ ಮುಂಚಿತವಾಗಿಯೇ ಆಗಮಿಸಿದರು.

ಈ ಸಂಬಂಧ ಚಾಂಪಿಯನ್ಸ್​ ಟ್ರೋಫಿ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಕೊಹ್ಲಿ ತೀವ್ರ ತರಬೇತಿ ಮಾಡುತ್ತಿರುವ ದೃಶ್ಯವಿದೆ. ಸ್ಥಳೀಯ ನೆಟ್ ಬೌಲರ್‌ಗಳು ಕೊಹ್ಲಿಗೆ ಬೌಲಿಂಗ್ ಮಾಡಿದ್ದಾರೆ.

ಈ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​ ಸಂಜಯ್​ ಮಂಜ್ರೇಕರ್​ ಮಾತನಾಡಿದ್ದು, ಕೊಹ್ಲಿ ತುಂಬಾ ಪ್ರಯತ್ನಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ತರಬೇತಿಗಾಗಿ 90 ನಿಮಿಷ ಮುಂಚಿತವಾಗಿ ಬರುವುದು ಒಂದು ಸೂಚನೆಯಾಗಿದೆ. ಬಹುಶಃ ಅವರು ಪಂದ್ಯಕ್ಕೆ ಎರಡು ನಿಮಿಷ ಮುಂಚಿತವಾಗಿ ಬಂದು ಆಟ ಆರಂಭಿಸಬಹುದು. ಕೊಹ್ಲಿ ಸ್ವಲ್ಪ ಹೆಚ್ಚು ಪ್ರಯತ್ನಿಸುತ್ತಿದ್ದಾರೆ ಎಂದು ಮಂಜ್ರೇಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ಮತ್ತೊಂದೆಡೆ, ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್​ ಮಾತನಾಡಿ, ವಿರಾಟ್ ಅವರು ಇಂತಹ ಮೆಗಾ ಟೂರ್ನಮೆಂಟ್​ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರಮುಖ ಆಟಗಾರರಲ್ಲಿ ಒಬ್ಬರೆಂದು ನಾನು ಭಾವಿಸುತ್ತೇನೆ. ಸದ್ಯ ಕೊಹ್ಲಿ ಅವರು ಉತ್ತಮ ಫಾರ್ಮ್‌ನಲ್ಲಿಲ್ಲ, ಅದಕ್ಕಾಗಿಯೇ ಅವರು ಒಂದೂವರೆ ಗಂಟೆ ಮುಂಚಿತವಾಗಿ ತರಬೇತಿ ಪಡೆಯುತ್ತಿದ್ದಾರೆ. ಶ್ರೇಷ್ಠ ಆಟಗಾರರು ಅದನ್ನೇ ಮಾಡುತ್ತಾರೆ. ನನ್ನಲ್ಲಿ ಏನಾದರೂ ಸರಿಯಿಲ್ಲ ಎಂದು ಭಾವಿಸಿದಾಗ, ಮೈದಾನಕ್ಕೆ ಇಳಿಯುವ ಮೊದಲೇ ಅದನ್ನು ಸರಿಪಡಿಸಲು ಸಮಯ ತೆಗೆದುಕೊಳ್ಳುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಕ್ಲಾರ್ಕ್​ ತಿಳಿಸಿದರು.

ಅಂದಹಾಗೆ ಫೆ.20ರಂದು ಬಾಂಗ್ಲಾದೇಶದ ವಿರುದ್ಧ ನಡೆದ ತಮ್ಮ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಜಯ ದಾಖಲಿಸಿತು. ಆದರೆ, ಕೊಹ್ಲಿ ಅವರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. 38 ಬಾಲ್​ ಎದುರಿಸಿದ ಕೊಹ್ಲಿ ಕೇವಲ 22 ರನ್​ ಗಳಿಸಿದರು. ತೀವ್ರ ಫಾರ್ಮ್​ ಕೊರತೆ ಎದುರಿಸುತ್ತಿರುವ ಕೊಹ್ಲಿ, ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಹೇಗಾದರೂ ಮಾಡಿ ಫಾರ್ಮ್ ಮರಳಿ ಪಡೆಯಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಕೊಹ್ಲಿ ಫಾರ್ಮ್​ಗೆ ಮರಳಿದರೆ ರನ್​ ಮಳೆ ಹರಿಯುವುದಂತೂ ಖಚಿತ.

ಇನ್ನು ಪಾಕಿಸ್ತಾನ ವಿರುದ್ಧ ಕೊಹ್ಲಿ ಉತ್ತಮ ಏಕದಿನ ದಾಖಲೆಯನ್ನು ಹೊಂದಿದ್ದಾರೆ. 16 ಇನ್ನಿಂಗ್ಸ್‌ಗಳಿಂದ 52.15 ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಪಾಕಿಸ್ತಾನ ವಿರುದ್ಧ ಕೊಹ್ಲಿ ಅವರ ಅತ್ಯಧಿಕ ಏಕದಿನ ಸ್ಕೋರ್ 183. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net