

ನ್ಯೂಯಾರ್ಕ್: ಎಲ್ಲರಿಗೂ ಡೆಡ್ಲಿ ಕರೊನಾ ಭೀತಿ ಚಿಂತೆಯಾದರೆ ಇಲ್ಲೊಬ್ಬಳಿಗೆ ತನ್ನ ಮದುವೆಯದ್ದೇ ಯೋಚನೆಯಾಗಿದೆ. ಒಂದು ವೇಳೆ ಕರೊನಾ ವೈರಸ್ ಪೆಡಂಭೂತದ ಹೆಸರೇಳಿ ನನ್ನ ಮದುವೆಯನ್ನು ತಪ್ಪಿಸಿಕೊಂಡರೆ ಅಂತಹ ಅತಿಥಿಗಳು ನನ್ನ ಪಾಲಿಗೆ ಸತ್ತಂತೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಳ್ಳುವ ಮೂಲಕ ವಧುವೊಬ್ಬಳು ಅನಾವಶ್ಯಕವಾಗಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.
ಅಮೆರಿಕ ಮೂಲಕ ವಧು ರೆಡ್ಡಿಟ್ ತನ್ನ ಮದುವೆ ಕಥೆಯನ್ನು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಇನ್ನು 37 ದಿನಗಳಲ್ಲಿ ನನ್ನ ಮದುವೆ ನಡೆಯಲಿದೆ. ಆ ಒಂದು ದಿನಕ್ಕಾಗಿ ಸಾಕಷ್ಟು ಡಾಲರ್ ಅನ್ನು ವ್ಯಯಿಸಿದ್ದೇವೆ. ಮದುವೆಗಾಗಿ ತುಂಬಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ನನ್ನ ಅತಿಥಿಗಳಿಗೆ ನಾನೊಂದನ್ನು ನೆನಪು ಮಾಡಲು ಇಚ್ಛಿಸುತ್ತೇನೆ. ಕರೊನಾ ವೈರಸ್ ನೆಪ ಹೇಳಿ ನನ್ನ ಮದುವೆಯನ್ನು ತಪ್ಪಿಸಿಕೊಂಡರೆ ನನಗೇನು ತೊಂದರೆಯಿಲ್ಲ. ಆದರೆ, ನೀವೆಲ್ಲಾ ನನ್ನ ಪಾಲಿಗೆ ಸತ್ತಂತೆ ಸಮವೆಂದು ಎಚ್ಚರಿಸಿದ್ದಾಳೆ.
ಇನ್ನು ವಧುವಿನ ಫೋಸ್ಟ್ ನೋಡುತ್ತಿದ್ದಂತೆ ಕೆಂಡಾಮಂಡಲರಾದ ನೆಟ್ಟಿಗರು ವಧುವಿನ ಬೇಡಿಕೆಯನ್ನು ಧಿಕ್ಕರಿಸುತ್ತಿದ್ದಾರೆ. ಇದು ಸ್ವಾರ್ಥದಿಂದ ಕೂಡಿದೆ. ಒಂದು ವೇಳೆ ಮದುವೆಗೆ ಬಂದವರಲ್ಲಿ ಯಾರಿಗಾದರೂ ಸೋಂಕಿದ್ದರೆ, ಅದು ಇತರರಲ್ಲದೆ, ನಿಮ್ಮ ಜೀವಕ್ಕೂ ಅಪಾಯ ತರಲಿದೆ ಎಂದು ವಧುವಿನ ವಿರುದ್ಧ ಕಿಡಿಕಾರಿದ್ದಾರೆ. ಮದುವೆಯನ್ನು ಮುಂದೂಡುವುದೇ ಚಾಣಾಕ್ಷತನ ಎಂತಲೂ ಸಲಹೆ ನೀಡಿದ್ದಾರೆ.
ನಿಮ್ಮ ಮದುವೆಗೆ ಬರೆದೇ ಹೋದರೆ ಕ್ಷಮೆ ಇರಲಿ. ಆದರೆ ನನ್ನ ಕುಟುಂಬದ ಆರೋಗ್ಯವನ್ನು ತೊಂದರೆಗೆ ಸಿಲುಕಿಸಲು ನನೆಗೆ ಇಷ್ಟವಿಲ್ಲ. ಆ ಸಾಹಸವನ್ನು ನಾನು ಮಾಡಲಾರೆ ಎಂದೆಲ್ಲಾ ವಧುವಿನ ಪೋಸ್ಟ್ಗೆ ಉತ್ತರಗಳ ಸುರಿಮಳೆ ಹರಿದುಬಂದಿದೆ. (ಏಜೆನ್ಸೀಸ್)