VIDEO| ಟಿಕ್​ಟಾಕ್​ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿರುವ ಅಜ್ಜಿ-ಮೊಮ್ಮಗನ ಭಾವನಾತ್ಮಕ ಕತೆ ಇದು...!

Tiktok granny grandson
Published on

ಚೆನ್ನೈ: ವಯಸ್ಸಿನ ಮಿತಿಯಿಲ್ಲದೇ ಎಲ್ಲರನ್ನೂ ತನ್ನ ಮಾಯಾಜಾಲಕ್ಕೆ ಕೆಡವಿಕೊಂಡಿರುವ ವಿಡಿಯೋ ಶೇರಿಂಗ್​ ಟಿಕ್​ಟಾಕ್​ ಆ್ಯಪ್​ನಿಂದ ಅನೇಕ ಪ್ರತಿಭೆಗಳು ಹೊರಜಗತ್ತಿಗೆ ತೆರೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇಳಿವಯಸ್ಸಿನಲ್ಲಿಯೂ ಯುವ ಜನಾಂಗ ನಾಚುವಂತೆ ಅದ್ಭುತ ಅಭಿನಯ ಮಾಡುವ ಕೆಲವೇ ಮಹಿಳೆಯರಲ್ಲಿ ತಮಿಳುನಾಡಿನ ರಾಜಮಣಿ(72) ಅವರು ವಿಶೇಷ ಎನಿಸಿಕೊಂಡಿದ್ದಾರೆ.

ನಿವೃತ್ತ ಶಾಲಾ ಶಿಕ್ಷಕಿಯಾಗಿರುವ ರಾಜಮಣಿ ಹಾಗೂ ಮೊಮ್ಮಗ ಮೊಹಮ್ಮದ್​ ತೌಫಿಕ್​ ಸದ್ಯ ಟಿಕ್​ಟಾಕ್​ ವಿಡಿಯೋಗಳ ಮೂಲಕ ಎಲ್ಲರ ಮನೆ ಮಾತಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.

ಈರೋಡ್​ ಜಿಲ್ಲೆಯ ಕುಮಾರಪಾಳ್ಯಂನಲ್ಲಿ ಜನಿಸಿರುವ ರಾಜಮಣಿ, ಅಧ್ಯಯನ ಬಳಿಕ ಶಾಲಾ ಶಿಕ್ಷಕಿಯಾಗಿ ವೃತ್ತಿಯನ್ನ ಆರಂಭಿಸಿ ಇದೀಗ ನಿವೃತ್ತಿಯಾಗಿದ್ದು, ತಮ್ಮ ಮಗಳು ಅಮೀನಾ ಪರ್ವೀನ್​ ಮನೆಯಲ್ಲಿ ಇಬ್ಬರು ಮೊಮ್ಮಕ್ಕಳಾದ ಜುಬೇರ್​ ಮತ್ತು ಮೊಹಮ್ಮದ್​ ತೌಫಿಕ್​ ಜತೆ ವಾಸವಿದ್ದಾರೆ. ನನಗೆ ಒಬ್ಬಳೇ ಮಗಳು. ಅವಳ ನಂತರ ನನ್ನ ಇಬ್ಬರು ಮೊಮ್ಮಕ್ಕಳಿಗಾಗಿ ಹಾಗೂ ಅವರ ಸಂತೋಷಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ಎನ್ನುತ್ತಾರೆ ರಾಜಮಣಿ.

ರಾಜಮಣಿ ಅವರ ಕಿರಿಯ ಮೊಮ್ಮಗ ತೌಫಿಕ್​ ತನ್ನೊಂದಿಗೆ ಟಿಕ್​ಟಾಕ್ ವಿಡಿಯೋ ಮಾಡುವಂತೆ ಕೇಳಿಕೊಂಡಾಗ ಯಾವುದೇ ಹಿಂಜರಿಕೆ ಇಲ್ಲದೆ ಒಪ್ಪಿಕೊಂಡರಂತೆ.​ ಅಂದಹಾಗೆ ತೌಫಿಕ್​, ವಿಸ್ಯುವಲ್​ ಕಮ್ಯುನಿಕೇಶನ್​ ಪದವಿಧರರಾಗಿದ್ದಾರೆ. ಅಜ್ಜಿ ಮತ್ತು ಮೊಮ್ಮಗನ ಟಿಕ್​ಟಾಕ್​ ವಿಡಿಯೋಗಳು ತಮಿಳುನಾಡು ಮಾತ್ರವಲ್ಲದೆ ಎಲ್ಲೆಡೆ ಪ್ರಖ್ಯಾತಿಯಾಗಿವೆ.

ತಮಿಳು ಚಿತ್ರಗಳ ಕಾಮಿಡಿ ಡೈಲಾಗ್​ ಸೇರಿದಂತೆ ವೇಷಭೂಷಣದೊಂದಿಗೆ ಅನೇಕ ದೃಶ್ಯಗಳಿಗೆ ಅಭಿನಯಿಸಿದ್ದಾರೆ. ಕೆಲವೊಮ್ಮೆ ಸಲ್ವಾರ್​ ಕಮೀಜ್​ ಹಾಗೂ ಶಾಲಾ ಬಾಲಕಿಯ ಯೂನಿಫಾರ್ಮ್​ನಲ್ಲಿಯೂ ರಾಜಮಣಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಕಾಮಿಡಿ ಸ್ಟಾರ್​ ಸಂತಾನಮ್​ ಅವರ ಕಾಮಿಡಿ ದೃಶ್ಯಗಳ ಮೇಲೆ ಟಿಕ್​ಟಾಕ್​ ಮಾಡಿದ್ದಾರೆ.

ರಾಜಮಣಿ ಮತ್ತು ಮೊಮ್ಮಗನ ಟಿಕ್​ಟಾಕ್​ ವಿಡಿಯೋಗಳು ಎಷ್ಟು ಪ್ರಸಿದ್ಧಿಯಾಗಿವೆ ಅಂದರೆ, ಸದ್ಯ 22 ಮಿಲಿಯನ್​ ಫಾಲೋವರ್ಸ್​ ಅನ್ನು ಹೊಂದಿದ್ದಾರೆ. ಒಟ್ಟಿಗೆ ಅಭಿನಯಿಸಿದ ಮೊದಲ ಟಿಕ್​ಟಾಕ್ ವಿಡಿಯೋವನ್ನು ಕಳೆದ ಅಕ್ಟೋಬರ್​ 12ರಂದು ಅಪ್​ಲೋಡ್​ ಮಾಡಿದ್ದು, ಈವರೆಗೂ 15 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ.​

ರಾಜಮಣಿ ಅವರು ದೇವಸ್ಥಾನ, ಮಾರುಕಟ್ಟೆಯಂತಹ ಸ್ಥಳಗಳಿಗೆ ಭೇಟಿ ನೀಡಿದಾಗ ಅವರನ್ನು ನಿಲ್ಲಿಸಿ ಅನೇಕ ಜನರು ಮಾತನಾಡಿಸುತ್ತಾರಂತೆ. ನಿಮ್ಮ ಇತ್ತೀಚಿನ ವಿಡಿಯೋ ಯಾವುದು ಎಂದು ಆಗಾಗ ಕೇಳುತ್ತಾರೆ ಎನ್ನುವ ಮೂಲಕ ಟಿಕ್​ಟಾಕ್​ನಿಂದ ಬಂದ ಗೌರವನ್ನು ರಾಜಮಣಿ ನೆನೆಯುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net