

ಶಿವಮೊಗ್ಗ: ಬ್ರಾಹ್ಮಣರು ಜಾಗತಿಕವಾಗಿ ಯಹೂದಿಗಳಂತೆ ಎದ್ದು ನಿಲ್ಲಬೇಕು. ಬ್ರಾಹ್ಮಣರು ಆರ್ಥಿಕವಾಗಿ ಬೆಳೆಯಲು ಉಪ ಜೀವನದಲ್ಲಿ ಯಾವ ಕೆಲಸವನ್ನಾದರೂ ಮಾಡಬೇಕು. ಯಾವುದೇ ಕೆಲಸಕ್ಕೂ ಅಸಹ್ಯ ಪಡಬಾರದು ಎಂಬುದಾಗಿ ಲೇಖಕ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಇಂದು ಶಿವಮೊಗ್ಗದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ ಈ ಹೇಳಿಕೆ ನೀಡಿದರು. ಬ್ರಾಹ್ಮಣರು ಸಿದ್ಧಾಂತಗಳನ್ನು ಒಪ್ಪಿಕೊಂಡವರು. ಕಮ್ಯುನಿಸ್ಟ್ ಪಾರ್ಟಿಯಲ್ಲೂ ಬ್ರಾಹ್ಮಣರು ಹೆಚ್ಚಿದ್ದಾರೆ. ಬ್ರಾಹ್ಮಣರಿಗೆ ಬ್ರಾಹ್ಮಣರೇ ಶತ್ರುಗಳು ಎಂದೂ ಅವರು ಅಭಿಪ್ರಾಯಪಟ್ಟರು.
ಬ್ರಾಹ್ಮಣರು ಬ್ರಹ್ಮಕ್ಷತ್ರಿಯರಾಗಿ ಬದುಕಬೇಕಿದೆ. ಎಲ್ಲಾ ರಂಗದಲ್ಲೂ ಇದ್ದು ಬದುಕುವಂತಾಗಬೇಕಿದೆ. ಬ್ರಾಹ್ಮಣರನ್ನು ದೇಶದ ವ್ಯವಸ್ಥೆಯಲ್ಲಿ ತುಚ್ಛವಾಗಿ ಕಾಣಲಾಗುತ್ತಿದೆ. ಯಹೂದಿಗಳಿಗೆ 2,500 ವರ್ಷಗಳವರೆಗೆ ಜಗತ್ತಿನಲ್ಲಿ ನೆಲೆಯೇ ಇರಲಿಲ್ಲ. ಆದರೂ ಜ್ಞಾನಾರ್ಥಿಗಳಾಗಿ ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತ ಬದುಕಿದರು ಎಂದು ಚಕ್ರತೀರ್ಥ ಹೇಳಿದರು.
ಯಹೂದಿಗಳು ವಿಶ್ವದಾದ್ಯಂತ ಶೇ.5ರಷ್ಟು ಇದ್ದಾರೆ. ಆದರೆ ಎಲ್ಲರೂ ಅವರನ್ನು ಒಪ್ಪಿಕೊಂಡು ಬದುಕುವಂತೆ ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಕಸಗುಡಿಸುವ ಕೆಲಸವನ್ನೂ ಅವರು ಶ್ರದ್ಧೆಯಿಂದ ಮಾಡುತ್ತಾರೆ. ಜಗತ್ತಿನಲ್ಲಿ ಬೌದ್ಧಿಕ ಶಕ್ತಿಯಾಗಿ ಬದುಕುವುದು ಅವರ ಗುರಿಯಾಗಿತ್ತು. ಇಂದು ಯಾವುದೇ ರಂಗದಲ್ಲೂ ಯಹೂದಿಗಳಿದ್ದಾರೆ. ಬ್ರಾಹ್ಮಣರು ಅವರನ್ನು ಅನುಸರಿಸುವ ಅನಿವಾರ್ಯತೆ ಎದುರಾಗಿದೆ. ಆರ್ಥಿಕವಾಗಿ ನಾವೂ ಪ್ರಬಲರಾಗಬೇಕು. ಆಗ ಯಾರ ಮುಂದೆಯೂ ತಲೆ ತಗ್ಗಿಸಬೇಕಾಗಿರುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.