ಪಟಾಕಿ ಹೊಡೆದು ಪೊಲೀಸರ ಗಮನ ಸೆಳೆದರು, ನಂತರ ಏನಾಯಿತು ಗೊತ್ತೆ..?!

cracker
Published on

ಪುಣೆ: ಜೈಲಿನಲ್ಲಿದ್ದ ಸ್ನೇಹಿತನ ಹುಟ್ಟಿದಹಬ್ಬ ಆಚರಿಸೋಕೆ ಹೋಗಿ ತಾವೂ ಜೈಲು ತಲುಪಿದ ಇಬ್ಬರು ಹುಡುಗರ ಕತೆ ಇದು. ಜೈಲಿನ ಹೊರಗೆ ಪಟಾಕಿ ಹೊಡೆದು ಗದ್ದಲ ಎಬ್ಬಿಸಿದ ಹುಡುಗರನ್ನು ಅರಸುತ್ತಾ ಹೋದ ಪೊಲೀಸರಿಗೆ ಮತ್ತೊಂದು ಕೇಸಿನ ವಾಂಟೆಡ್​ ಆರೋಪಿಗಳು ಸಿಕ್ಕ ಕುತೂಹಲಕಾರಿ ಘಟನೆ!

ಆಕಾಶ್ ಕಂಚಿಲೆ ಎಂಬ 20 ವರ್ಷದ ಯುವಕನನ್ನು ಪುಣೆ ಪೊಲೀಸರು ಕೊಲೆ ಕೇಸಿನಲ್ಲಿ ಬಂಧಿಸಿದ್ದರು. ಅವನು ಹಾಲಿ ಎರವಾಡ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ. ಫೆಬ್ರವರಿ 5 ರಂದು ಅವನ ಕೆಲವು ಸ್ನೇಹಿತರು ಜೈಲಿನ ಹೊರಗಡೆ ಪಟಾಕಿ ಹೊಡೆದು ಅವನ ಹುಟ್ಟಿದಹಬ್ಬವನ್ನು ಆಚರಿಸಿದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.

ಈ ಬಗ್ಗೆ ಪ್ರತ್ಯೇಕ ಕೇಸು ದಾಖಲಿಸಿದ ಪೊಲೀಸರು ಈ ಕೃತ್ಯ ಎಸಗಿದವರನ್ನು ಹುಡುಕಲು ಶುರು ಮಾಡಿದರು. ಆಗ ತಿಳಿದ ವಿಷಯವೆಂದರೆ, ಪಟಾಕಿ ಹೊಡೆದ ಹುಡುಗರ ಗುಂಪಲ್ಲಿ ಇಬ್ಬರು ಎರವಾಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಮತ್ತೊಂದು ಕೊಲೆ ಪ್ರಯತ್ನದ ಕೇಸಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು! ಇದೀಗ ಜೈಲಿನ ಬಳಿ ಪಟಾಕಿ ಹೊಡೆದು ಪೊಲೀಸರ ಗಮನ ಸೆಳೆದಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳಾದ 20 ವರ್ಷದ ಪ್ರಜ್ವಲ್ ಬರಾಟೆ ಮತ್ತು ಒಬ್ಬ ಅಪ್ರಾಪ್ತ ವಯಸ್ಕನನ್ನು ಪುಣೆಯ ಕಳೆವಾಡಿ ಪ್ರದೇಶದಿಂದ ಅಪರಾಧ ವಿಭಾಗದ ಪೊಲೀಸರು ಬುಧವಾರ ಬಂಧಿಸಿದರು. ಆ ಕೇಸಿನಲ್ಲಿ ಇಬ್ಬರು ಯುವಕರನ್ನು ಈ ಮುನ್ನವೇ ಬಂಧಿಸಲಾಗಿತ್ತು ಎನ್ನಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net