

ಮುಂಬೈ: ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸರ ಮನೋಬಲ ಹೆಚ್ಚಿಸಲು ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾ ಬಂದಿದೆ. ಈ ರೀತಿಯಾಗಿ ಆಕರ್ಷಕವಾದ ಟ್ವೀಟ್ಗಳನ್ನು ಮಾಡುವುದರಲ್ಲಿ ಮುಂಬೈ ಪೊಲೀಸರು ಎತ್ತಿದ ಕೈ ಎಂದೇ ಹೇಳಬೇಕು.
ಮುಂಬೈ ಪೊಲೀಸರ ಹೊಸ ಟ್ವೀಟ್ ಒಂದು ನೆಟ್ಟಿಗರ ಗಮನ ಸೆಳೆದಿದೆ. ಇತ್ತೀಚೆಗೆ ತಾವು ದರೋಡೆ ಯೋಜನೆಯಲ್ಲಿದ್ದ ಹಿಸ್ಟರಿ ಶೀಟರ್ನನ್ನು ಬಂಧಿಸಿದ ಫೋಟೋ ಹಾಕಿ "ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೇ ಪೊಲೀಸರನ್ನು ಮಾಡಿದ್ದಾನೆ" ಎಂಬ ಮೀಮ್ ಬರೆದು ಮುಂಬೈ ಪೊಲೀಸರು ಪೋಸ್ಟ್ ಮಾಡಿದ್ದಾರೆ!
"ದೇವರು ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಪೋಲೀಸರು ಏನು ಹಿಡಿಯುತ್ತಾರೆ" ಎಂದು 26 ವರ್ಷದ ಹಿಸ್ಟರಿ ಶೀಟರ್ ಒಬ್ಬ ಪೊಲೀಸ್ ಇನ್ಫಾರ್ಮರ್ಗೆ ಹೇಳಿದ್ದನಂತೆ! ಅವನು ಯೋಜಿಸಿದ್ದ ದರೋಡೆಯ ಮುನ್ನವೇ ಆತನನ್ನು ಬಂಧಿಸಿ ಅವನ ಮಾತಿಗೆ ಕ್ರಿಯೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ, ಮುಂಬೈನ ಆರೇ ಠಾಣೆ ಪೊಲೀಸರು. ಈ ರೀತಿಯಾಗಿ ಬಂಧಿಸಿ ಅವನ ದರೋಡೆಯ ಯೋಜನೆಯನ್ನು ವಿಫಲಗೊಳಿಸಿದ್ದರಿಂದ ಅವನಿಗೆ ದೇವರಲ್ಲಿ ಮತ್ತು ಪೊಲೀಸರ ಸಾಮರ್ಥ್ಯದಲ್ಲಿ ಮತ್ತೆ ವಿಶ್ವಾಸ ಮೂಡಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ ಬಂಧನದ ಸಮಯದ ಫೋಟೋವಿನೊಂದಿಗೆ ಸ್ವಲ್ಪ ಹೆಚ್ಚು ಆತ್ಮವಿಶ್ವಾಸದೊಂದಿಗೇ ಹಾಕಿರುವ ಮೀಮ್ ಹಲವರ ಹುಬ್ಬೇರಿಸಿದೆ. ಈ ಮೀಮ್ನಲ್ಲಿ "ಅವನು: ದೇವರೂ ನನ್ನನ್ನು ಹಿಡಿಯಲು ಸಾಧ್ಯವಿಲ್ಲ. ನಾವು: ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೆ ಪೊಲೀಸರನ್ನು ಮಾಡಿದ್ದಾನೆ" ಎಂಬ ಕಾಮೆಂಟಿದೆ!(ಏಜೆನ್ಸೀಸ್)