VIDEO| 150 ಅಡಿ ಎತ್ತರದ ವಿದ್ಯುತ್​​ ಟವರ್ ಏರಿದ ಗೆಳತಿಯಿಂದ ರಂಪಾಟ, ಪ್ರೇಮಿಗಳ ಕಿತ್ತಾಟಕ್ಕೆ ಗ್ರಾಮಸ್ಥರ ಪರದಾಟ

electric pole
ಸಾಂದರ್ಭಿಕ ಚಿತ್ರ
Published on

ರಾಯ್ಪುರ: ಪ್ರೇಮಿಗಳಿಬ್ಬರು ಜಗಳಾಡುವುದು, ಒಂದಾಗುವುದು ಸಹಜ. ಆದರೆ ಇಲ್ಲೊಬ್ಬ ಪ್ರಿಯತಮೆಯು ಪ್ರಿಯಕರನೊಂದಿಗೆ ಜಗಳವಾಡಿ 150 ಅಡಿ ಎತ್ತರದ ಹೈಟೆನ್ಷನ್ ಟವರ್ ಹತ್ತಿದ್ದು, ಆಕೆಯ ಮನವೊಲಿಸಲು ಆಕೆಯ ಪ್ರಿಯಕರ ಕೂಡ ಟವರ್ ಹತ್ತಿರುವ ವಿಚಿತ್ರ ಘಟನೆ ನಡೆದಿದೆ.

ಪ್ರೇಮಿಗಳಿಬ್ಬರ ಹೈ ವೋಲ್ಟೇಜ್ ನಾಟಕ ಛತ್ತಿಸ್​ಗಢದ ಗೌರೇಲಾ-ಪೇಂದ್ರ-ಮಾರ್ವಾಹಿ (ಜಿಪಿಎಂ) ಜಿಲ್ಲೆಯಲ್ಲಿ ಕಂಡು ಬಂದಿದ್ದು, ನೇವ್ರಿ ನವಪರ ಗ್ರಾಮದ ನಿವಾಸಿ ಅನಿತಾ ಭೈನಾ ಎಂಬುವಳು ಕೊಡಗರ ಗ್ರಾಮದ ಮುಖೇಶ್ ಭೈನಾ ಎಂಬಾತನ್ನು ಪ್ರೀತಿಸುತ್ತಿದ್ದಳು. ಅನಿತಾಗೆ ಈಗಾಗಲೇ ಮದುವೆಯಾಗಿ 6 ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟಿದ್ದಳು.

ಕಳೆದ ಒಂದು ವರ್ಷದಿಂದ ಮುಖೇಶ್​ನನ್ನು ಪ್ರೀತಿಸುತ್ತಿದ್ದ ಅನಿತಾ. ಕೆಲ ದಿನಗಳ ಹಿಂದೆ ತನ್ನ ಗೆಳೆಯನೊಂದಿಗೆ ಇರಲು ಕೊಡಗರ ಗ್ರಾಮಕ್ಕೆ ಬಂದಿದ್ದಳು. ಇಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಗುರುವಾರ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮಹಿಳೆ ಮನೆಯಿಂದ ಹೊರಬಂದು ಗದ್ದೆಯಲ್ಲಿರುವ ಹೈಟೆನ್ಷನ್ ಟವರ್ ಏರಿ ಗೋಪುರದ ತುದಿಯಲ್ಲಿ ಕುಳಿತಿದ್ದಾಳೆ.

ಆ ಬಳಿಕ ಕೆಲವು ಗ್ರಾಮಸ್ಥರು ದೂರದಿಂದ ಗೋಪುರವನ್ನು ನೋಡಿದರೂ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಅವರು, ಅಳನ್ನು ಕೆಳಗೆ ಬರುವಂತೆ ಹೇಳಿದ್ದರು. ಇತ್ತ, ಮಹಿಳೆ ಹೈಟೆನ್ಷನ್ ಟವರ್ ಹತ್ತಿದ್ದಾಳೆ ಎಂಬ ಮಾತು ಗ್ರಾಮದಲ್ಲಿ ಹಬ್ಬಿದ್ದು, ಕ್ರಮೇಣ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ.

ಅಷ್ಟರಲ್ಲಿ ಪ್ರೇಮಿ ಮುಖೇಶ್ ಭೈನಾ ಸುದ್ದಿಯನ್ನು ತಿಳಿದು ಕೂಡ ಟವರ್ ಬಳಿ ತಲುಪಿದ್ದು, ಕೂಡಲೇ ಅನಿತಾಳನ್ನು ಗುರುತಿಸಿ ಮನವೊಲಿಸುವ ಸಲುವಾಗಿ ತಾನೂ ಕೂಡ ಹೈ ಟೆನ್ಶನ್ ಟವರ್ ಹತ್ತಿದ್ದಾನೆ. ಮಹಿಳೆಯನ್ನು ಕೆಳಗಿಳಿಸಲು ಆತ ಆಕೆಯ ಮನವೊಲಿಸುತ್ತಲೇ ಸುಮಾರು 2 ಘಂಟ ಇಬ್ಬರೂ ಅಲ್ಲೇ ಕಳೆದಿದ್ದಾರೆ. ಕೊನೆಗೆ ಸತತ ಪ್ರಯತ್ನದ ಬಳಿಕ ಗೆಳತಿ ಸ್ವಲ್ಪ ಕೆಳಗೆ ಬಂದ್ದಿದ್ದು, ಪ್ರೇಮಿಗಳಿಬ್ಬರೂ ಗೋಪುರದ ಮಧ್ಯದಲ್ಲಿ ಬಂದು ಕುಳಿತಿದ್ದಾರೆ.

ಈ ವೇಳೆ ಕೆಳಗಿದ್ದ ಜನರು ಪೊಲೀಸರಿಗೂ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮನವೊಲಿಸಿ ಪ್ರೇಮಿಗಳಿಬ್ಬರನ್ನೂ ಹೈಟೆನ್ಷನ್ ಟವರ್ ನಿಂದ ಕೆಳಗಿಳಿಸಿದ್ದಾರೆ. ಈ ಕುರಿತು ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದ್ದು, ಇದಾದ ಬಳಿಕ ಗೆಳತಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಲಾಗಿದೆ. ಹೈಟೆನ್ಷನ್ ಟವರ್‌ನಲ್ಲಿ ನಿರಂತರವಾಗಿ ವಿದ್ಯುತ್ ಹರಿಯುತ್ತಿದ್ದರೂ ಯಾವುದೇ ಅವಘಡ ಸಂಭವಿಸದಿರುವುದು ಸಮಾಧಾನದ ಸಂಗತಿ ಎಂದು ಪೆಂಡ್ರಾ ಪೊಲೀಸ್ ಠಾಣೆ ಪ್ರಭಾರಿ ಧರ್ಮನಾರಾಯಣ ತಿವಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net