

ಗದಗ: ಆಟ ಆಡುತ್ತಿರುವಾಗ ವಿದ್ಯುತ್ ಶಾಕ್ ತಗುಲಿ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ. ಗದಗ ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿ ಈ ಪ್ರಕರಣ ನಡೆದಿದೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಜನತಾ ಪ್ಲಾಟ್ ಬಳಿ ಈ ದುರಂತ ನಡೆದಿದೆ.
ಪಂಕಜ್ ರಾಮು ಕಲಾಲ್ (12) ಎಂಬಾತ ಸಾವಿಗೀಡಾದ ಬಾಲಕ. 367 ರಾಷ್ಟ್ರೀಯ ಹೆದ್ದಾರಿಯ ಗಜೇಂದ್ರಗಡ ಹಾಗೂ ಯಲಬುರ್ಗಾ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಆಟ ಆಡುತ್ತಿದ್ದ ಈತ ಅಕಸ್ಮಾತ್ ಆಗಿ ಹೆದ್ದಾರಿ ಪಕ್ಕದ ವಿದ್ಯುತ್ ಕಂಬವನ್ನು ಸ್ಪರ್ಶಿಸಿದ್ದು, ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾನೆ.
ಬಾಲಕ ಕಂಬದಲ್ಲಿನ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.