

ಲಂಡನ್: ಶ್ರೀ ರಾಮನ ನಾಮ ಹಾಡದವರುಂಟೇ? ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಶ್ರೀರಾಮನ ಭಕ್ತರಿದ್ದಾರೆ. ಅಷ್ಟೇ ಏಕೆ, ಬ್ರಿಟನ್ನ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ರಾಮನ ಬಗ್ಗೆ ಅರಿತಿದ್ದಾರೆ, ರಾಮನ ಕಥೆಯನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದರೆ ನೀವು ನಂಬಲೇ ಬೇಕು.
ಬ್ರಿಟನ್ನಲ್ಲಿ ಸದ್ಯ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ದೇಶದಲ್ಲಿರುವ ಭಾರತೀಯರಿಗಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು 'ಐ ಗ್ಲೋಬಲ್ ದಿವಾಳಿ ಫೆಸ್ಟ್'ಗೆ ಚಾಲನೆ ನೀಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಅವರು, "ಬ್ರಿಟನ್ನಲ್ಲಿರುವ ಭಾರತೀಯರು ಈ ಬಾರಿ ದೀಪಾವಳಿಗೆ ತಮ್ಮೂರಿಗೆ ತೆರಳಲು ಆಗುತ್ತಿಲ್ಲ. ಅವರ ತ್ಯಾಗವನ್ನು ನಾವು ಸ್ಮರಿಸಲೇಬೇಕು. ಸಾಕಷ್ಟು ದೊಡ್ಡ ಸವಾಲುಗಳು ನಮ್ಮ ಮುಂದಿವೆ. ಆದರೆ ನಮ್ಮಲ್ಲಿರುವ ಉತ್ತಮ ಪ್ರಜ್ಞೆಯಿಂದ ನಾವು ಸೋಂಕಿನ ವಿರುದ್ಧ ಜಯ ಸಾಧಿಸಲಿದ್ದೇವೆ. ದೀಪಾವಳಿ ಹಬ್ಬ ನಮಗೆ ಕತ್ತಲಿನಿಂದ ಬೆಳಕಿಗೆ ಬರುವುದನ್ನು ಕಲಿಸುತ್ತದೆ. ಕೆಟ್ಟದ್ದರಿಂದ ಒಳ್ಳೆಯದರತ್ತ, ಅಜ್ಞಾನದಿಂದ ಜ್ಞಾನದತ್ತ ಸಾಗುವುದು ಈ ಹಬ್ಬದ ಸಂದೇಶ" ಎಂದು ಹೇಳಿದ್ದಾರೆ.
ಇದೇ ಸಮದಯಲ್ಲಿ ಶ್ರೀರಾಮನನ್ನೂ ಅವರು ಸ್ಮರಿಸಿದ್ದಾರೆ. "ಸೀತೆಯನ್ನು ಅಪಹರಿಸಿದ್ದ ರಾವಣನ ವಿರುದ್ಧ ಹೋರಾಡುವುದಕ್ಕೆ ರಾಮ ತೆರಳಿದರು. ಆಗ ಅವರಿಗೆ ಲಕ್ಷಾಂತರ ದೀಪಗಳು ಬೆಳಕು ತೋರಿತ್ತು. ಈಗ ಕರೊನಾ ಎನ್ನುವ ರಾವಣನನ್ನು ನಾವು ರಾಮನಂತೆ ಸೋಲಿಸಬೇಕು. ಈ ದೀಪಾವಳಿಯಲ್ಲಿ ದೀಪ ಬೆಳಗಿಸಿ ಹೋರಾಟದ ಮಾರ್ಗದಲ್ಲಿ ಸಾಗೋಣ" ಎಂದು ಹೇಳಿದ್ದಾರೆ.
ಮೂರು ದಿನಗಳ ಕಾಲ ಬ್ರಿಟನ್ನಲ್ಲಿ ದೀಪಾವಳಿ ವರ್ಚುವಲ್ ಫೆಸ್ಟ್ ನಡೆಯಲಿದೆ. ಅಲ್ಲಿನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, ಪ್ರತಿಪಕ್ಷ ನಾಯಕ ಕೀರ್ ಸ್ಟಾರ್ಮರ್ ಸೇರಿ ಅನೇಕ ನಾಯಕರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದರಲ್ಲಿ ಸಂಗೀತ, ನೃತ್ಯ ಪ್ರದರ್ಶನಗಳು ನಡೆಯಲಿವೆ. (ಏಜೆನ್ಸೀಸ್)