15ರ ಬಾಲಕಿಯನ್ನು ಗರ್ಭಿಣಿ ಮಾಡಿದ 85ರ ವೃದ್ಧ; ಸರ್ಕಾರಿ ಹಿರಿಯ ಅಧಿಕಾರಿಯ ಮಾವನಿಂದ ಮಾನಗೇಡಿ ಕೆಲಸ

Rape
Published on

ಭುವನೇಶ್ವರ: 85 ವರ್ಷದ ವೃದ್ಧನೊಬ್ಬ ಮನೆ ಕೆಲಸ ಮಾಡುವ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಆರೋಪಿತ ವೃದ್ಧನು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರ ಮಾವ ಎನ್ನಲಾಗಿದೆ.

ಜಜ್ಪುರ ಜಿಲ್ಲೆ ಮೂಲದ 15 ವರ್ಷದ ಬಾಲಕಿಯನ್ನು ಭುವನೇಶ್ವರದ ನಗರ ಪಾಲಿಕೆ ಉಪ ಆಯುಕ್ತ ಸೈಲಶ್ರೀ ವಿಹಾರ್​ ಅವರು ಮನೆಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಕಳೆದ ಆರು ತಿಂಗಳಿನಿಂದ ಬಾಲಕಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸೈಲಶ್ರೀ ಅವರ ಮಾವ ಮನೆಯಲ್ಲೇ ಇರುತ್ತಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆರು ತಿಂಗಳಲ್ಲಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತ್ತೀಚೆಗೆ ಬಾಲಕಿ ತನ್ನೂರಿಗೆ ತೆರಳಿದ್ದು, ಆ ವೇಳೆ ಆಕೆ ಗರ್ಭಿಣಿಯಾಗಿರುವುದನ್ನು ಆಕೆಯ ತಾಯಿ ಗುರುತಿಸಿದ್ದಾಳೆ. ನಂತರ ಪೊಲೀಸ್​ ದೂರು ಕೊಡಲಾಗಿದೆ. ಒಂದು ವೇಳೆ ಅತ್ಯಾಚಾರದ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನಗೆ ತೊಂದರೆ ಕೊಡುತ್ತೇನೆ ಎಂದು ವೃದ್ಧ ಹೆದರಿಸುತ್ತಿದ್ದ ಎಂದು ಬಾಲಕಿ ಬಾಯ್ಬಿಟ್ಟಿದ್ದಾಳೆ.

ವೃದ್ಧನ ವಿರುದ್ಧ ಐಪಿಸಿ ಸೆಕ್ಷನ್​ 376ರ (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಸೆಕ್ಷನ್​ 6ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲೂ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರಿಂದಾಗಿ ಅಧಿಕಾರಿಯ ವಿರುದ್ಧ ಬಾಲ ಕಾರ್ಮಿಕ ನಿಯಂತ್ರಣ ಕಾಯ್ದೆ 1986ರ ಸೆಕ್ಷನ್​ 14ರ ಅಡಿಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ನಾಯಕ ದಿಲೀಪ್​ ಮೊಹಂತಿ ಅವರು ಪ್ರತಿಭಟನೆ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net