ಸದ್ಯಕ್ಕೆ ಶಾಲೆ ಆರಂಭ ಬೇಡ: ಮಕ್ಕಳ ಹಕ್ಕುಗಳ ನಿಗಾ ಕೇಂದ್ರ

2020_2$largeimg_1395482891
Published on

ಬೆಂಗಳೂರು: ಶಾಲೆ ತೆರೆಯುವಂತೆ ಶಿಕ್ಷಣ ತಜ್ಞರು ಆಗ್ರಹಿಸುತ್ತಿರುವ ಮಧ್ಯೆ ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಶಾಲೆಗಳನ್ನು ತೆರೆಯುವುದಕ್ಕೆ ಅವಸರ ಇಲ್ಲ. ಕರೊನಾ ಸೋಂಕು ಇಳಿಮುಖವಾದ ನಂತರ ಅಥವಾ ಕನಿಷ್ಠ ಒಂದು ತಿಂಗಳ ನಂತರ ಶಾಲೆ ತೆರೆಯುವುದು ಸೂಕ್ತ. ಹಂತ-ಹಂತವಾಗಿ ಶಾಲೆ ಪ್ರಾರಂಭಿಸಿ ಮತ್ತು ಮುಂದಿನ ಪರಿಸ್ಥಿತಿ ನೋಡಿ ಮುಂದುವರಿಸಲಿ ಮಕ್ಕಳ ಮೇಲೆ ಪ್ರಯೋಗ ಬೇಡ.

ಶಾಲೆ ಆರಂಭಿಸುವ ಮುನ್ನ ಶಾಲೆಯಲ್ಲಿ ಮಕ್ಕಳು ಕರೊನಾ ಸೋಂಕಿಗೆ ತುತ್ತಾಗದಂತೆ ಸುರಕ್ಷತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೈಪಿಡಿ ರೂಪಿಸಿ ಮಕ್ಕಳು ಮತ್ತು ಪಾಲಕರಿಗೆ ನೀಡಬೇಕು. ಶಾಲಾ ಪಠ್ಯ ಕಡಿತಗೊಳಿಸುವ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಶಿಕ್ಷಣ ತಜ್ಞರ ಸಲಹೆಗಳನ್ನು ಪಡೆಯಬೇಕು. ಆನ್‌ಲೈನ್ ಶಿಕ್ಷಣ ಪರ್ಯಾಯ ಮಾರ್ಗವಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಹಂತಗಳಲ್ಲಿ ಆನ್‌ಲೈನ್ ಶಿಕ್ಷಣ ಬೋಧಿಸುವುದು ನಿಲ್ಲಿಸಬೇಕು. ಶಾಲೆ ಆರಂಭವಾಗುವ ಮೊದಲ ಎರಡು ದಿನ ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಬೇಕು. ಕರೊನಾ ಬಗ್ಗೆ ಪಾಲಕರಲ್ಲಿ ಭಯ ಹೋಗಲಾಡಿಸಲು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

ತಜ್ಞ ವೈದ್ಯರೊಡನೆ ಸಮಾಲೋಚನೆ, ರೇಡಿಯೋ ಕಾರ್ಯಕ್ರಮ, ಟಿವಿ ಮಾಧ್ಯಮಗಳಲ್ಲಿ ಸಂದೇಶ ನೀಡಬೇಕು. ಶಾಲೆಗೆ ಹಾಜರಾಗುವ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಉಚಿತವಾಗಿ ನೀಡಬೇಕು. ರಾಜ್ಯದಲ್ಲಿರುವ ಎಲ್ಲ ವಸತಿಯುತ ಶಾಲೆಗಳು, ಎಲ್ಲ ಇಲಾಖೆಯ ಹಂತದ ಮಕ್ಕಳ ವಸತಿ ನಿಲಯಗಳನ್ನು ಕೂಡ ಪೂರ್ಣ ಸಿದ್ಧತೆಗಳೊಂದಿಗೆ ವಿಶೇಷ ಸಂರಕ್ಷಣೆ ನಿಯಮದ ಪ್ರಕಾರ ಶಾಲೆ ಪ್ರಾರಂಭದ 3 ಅಥವಾ 4 ದಿನಗಳಿಗೆ ಮೊದಲೇ ಸಿದ್ಧಪಡಿಸಿ ಮಕ್ಕಳನ್ನು ಸ್ವಾಗತಿಸಿ ದಾಖಲಿಸಲು ತಕ್ಷಣವೇ ಕಾರ್ಯ ಪ್ರಾರಂಭಿಸಬೇಕು ಎಂಬ ಶಿಾರಸುಗಳನ್ನು ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ರಾಜ್ಯ ಸಂಚಾಲಕ ವಾಸುದೇವ ಶರ್ಮಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಸಲ್ಲಿಕೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net