ಗರ್ಭದಲ್ಲಿದ್ದಾಗಲೇ ತಾಯಿ ಜೀವ ಉಳಿಸಿ ಪ್ರಾಣ ಬಿಟ್ಟ ಮಗುವಿನ ಕತೆ ಮನಕಲಕುವಂತಿದೆ..!

Child
Published on

ಲಂಡನ್​: ಮಗುವೊಂದು ಗರ್ಭದಲ್ಲಿದ್ದಾಗಲೇ ತಾಯಿಯ ಪ್ರಾಣ ಉಳಿಸಿದ ಅಪರೂಪದ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದ್ದು, ತನ್ನ ಮಗುವಿಗೆ ಋಣಿಯಾಗಿರುವ ತಾಯಿ ಇಂದಿಗೂ ಆ ಘಟನೆಯನ್ನು ನೆನೆದು ಮಗುವಿಗೆ ಕೃತಜ್ಞತೆ ಸಲ್ಲಿಸುವುದು ಮನಮುಟ್ಟುವಂತಿದೆ.

ಡ್ಯಾನಿಯಲ್​ ರೈಟ್ (39) ಎಂಬಾಕೆಗೆ ಜೋಸೆಫ್​ ಎಂಬ 7 ವರ್ಷದ ಮಗನಿದ್ದಾನೆ. ಡ್ಯಾನಿಯಲ್​ ಎರಡನೇ ಬಾರಿ ಗರ್ಭಿಣಿಯಾದಾಗ ಈ ಮನಕಲಕುವ ಘಟನೆ ನಡೆದಿದೆ. ತಾಯಿಯ ಜೀವ ಉಳಿಸಿದ ಮಗು ಗರ್ಭದಲ್ಲಿದ್ದಾಗಲೇ ಮೃತಪಟ್ಟಿತ್ತು. ತನ್ನ ಜೀವನದಲ್ಲೇ ಅತಿ ನೋವಿನ ಘಟನೆಯನ್ನು ಆಕೆಯೇ ವಿವರಿಸಿದ್ದಾಳೆ ಮುಂದೆ ಓದಿ.

ಒಂದು ದಿನ ನಾನು ಅಡುಗೆ ಮನೆಯಲ್ಲಿ ನಡೆದಾಡುತ್ತಿದ್ದೆ. ನನ್ನ ದೇಹದಲ್ಲಿ ಏನೋ ಮುರಿದಂತೆ ಶಬ್ಧವಾಯಿತು. ಆದರೂ ಹೇಗೋ ನಿರ್ವಹಿಸಿಕೊಂಡು ಸುಮ್ಮನಿದ್ದೆ. ಆದರೆ, ಏನೋ ಸರಿಯಿಲ್ಲ ಎಂಬುದು ತಿಳಿದಿತ್ತು. ಹೀಗಿರುವಾಗ ರಜಾ ದಿನದಲ್ಲಿ ಪತಿ ಜೇಮ್ಸ್​ ಮತ್ತು ಮಗ ಜೋಸೆಫ್​ ಜತೆ ತೆರಳುವಾಗ ತಡೆಯಲಾರದಷ್ಟು ತಲೆ ನೋವು ಉಂಟಾಯಿತು. ಆಗ ನಾನು 20 ವಾರಗಳ ಗರ್ಭಿಣಿಯಾಗಿದ್ದೆ. ಇದೇ ವೇಳೆ ನೋವಾಗಿದ್ದರಿಂದ ಆಸ್ಪತ್ರೆಗೆ ಹೋಗೋಣ ಎಂದು ಜೇಮ್ಸ್​ ಕೇಳಿದೆ. ಆಸ್ಪತ್ರೆಗೆ ಹೋಗುವಾಗಲೂ ಏನಾಗುತ್ತಿದೆ ಎಂಬ ಅರಿವು ಸಹ ಇರಲಿಲ್ಲ.

ಕೊನೆಗೂ ಆಸ್ಪತ್ರೆ ಸೇರಿದೆವು. ನನ್ನನ್ನು ಪರಿಶೀಲಿಸಿದ ವೈದ್ಯರು ಸ್ತನ ಕ್ಯಾನ್ಸರ್​ ಇರುವುದಾಗಿ ಹಾಗೂ ಮೆದುಳು, ಲಿವರ್​, ಕುತ್ತಿಗೆ, ಬೆನ್ನು ಹುರಿ ಮತ್ತು ಪೆಲ್ವೀಸ್​ ಸೇರಿದಂತೆ ದೇಹದ ಬಹುತೇಕ ಭಾಗಕ್ಕೆ ರೋಗ ಹರಡಿರುವುದಾಗಿ ಹೇಳಿದರು. ಜೀವ ಉಳಿಯಬೇಕಾದರೆ ಮೆದುಳು ಶಸ್ತ್ರಚಿಕಿತ್ಸೆ ಮತ್ತು ಇಂಟೆನ್ಸ್​ ರೆಡಿಯೋಥೆರಪಿ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ವೈದ್ಯರು ಎಚ್ಚರಿಸಿದರು.

ದುರಾದೃಷ್ಟಕರ ಮಗು 22 ವಾರವಿದ್ದಾಗಲೇ ಮೃತಪಟ್ಟಿತ್ತು. ನನಗೇಕೆ ಇಷ್ಟೊಂದು ನೋವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರೇರಣೆ ನೀಡಿದ್ದೇ ನನ್ನ ಮಗು. ಒಂದು ವೇಳೆ ನಾನು ಗರ್ಭಿಣಿ ಆಗಿರದಿದ್ದರೆ ನಾನು ಪ್ರವಾಸದ ಕಡೆ ಗಮನ ಕೊಡುತ್ತಿದ್ದೆ. ಆರೋಗ್ಯದ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಏನಾದರೂ ಔಷಧಿ ತೆಗೆದುಕೊಂಡು ಸುಮ್ಮನಿದ್ದುಬಿಡುತ್ತಿದ್ದೆ. ಇಂದಿಗೂ ನನ್ನ ಮಗುವಿಗೆ ನಾನು ಋಣಿಯಾಗಿದ್ದೇನೆ. ಆದರೆ ಆತನಿಂದು ನಮ್ಮೊಂದಿಗಿಲ್ಲ ಎಂದು ನೆನೆದು ಡ್ಯಾನಿಯಲ್ ಭಾವುಕರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net