

ನವದೆಹಲಿ: ಆಯ್ದ ವಿಭಾಗಗಳಿಗೆ ಕೋವಿಡ್ ಲಸಿಕೆಯ ಮುಂಜಾಗೃತೆ (ಪ್ರಿಕಾಶನರಿ) ಡೋಸ್ ನೀಡುವ ಅಭಿಯಾನ ಸೋಮವಾರ ದೇಶದಾದ್ಯಂತ ಆರಂಭವಾಗಲಿದೆ. ಈಗಾಗಲೇ ಎರಡೂ ಡೋಸ್ ಪಡೆದಿರುವ ವೈದ್ಯರು ಮುಂತಾದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಅನ್ಯವ್ಯಾಧಿಗಳಿರುವ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚುವರಿ ಡೋಸ್ ನೀಡಲು ನಿರ್ಧರಿಸಲಾಗಿದೆ. ಭಾರತದಲ್ಲಿ ಕರೊನಾ ಸೋಂಕಿನ ನಾಗಾಲೋಟ ಮುಂದುವರಿದಿದ್ದು ಭಾನುವಾರ 1,59,632 ಹೊಸ ಕೇಸ್ಗಳು ದಾಖಲಾಗಿವೆ. ಇದರೊಂದಿಗೆ ಕೋವಿಡ್ ಒಟ್ಟು ಪ್ರಕರಣಗಳು 3,55,28,004ಕ್ಕೆ ಏರಿದೆ. ಇದರಲ್ಲಿ ಒಮಿಕ್ರಾನ್ನ 3,623 ಕೇಸ್ಗಳೂ ಸೇರಿವೆ. ಸಕ್ರಿಯ ಕೇಸ್ಗಳ ಸಂಖ್ಯೆ 1,18,442ಕ್ಕೆ ಏರಿದ್ದು ಚೇತರಿಕೆ ದರ ಶೇಕಡ 96.98ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಿಕ ಪಾಸಿಟಿವಿಟಿ ದರ ಶೇಕಡ 10.21 ಹಾಗೂ ಸಾಪ್ತಾಹಿಕ ದರ ಶೇ. 6.77 ಆಗಿದೆ. ಇದುವರೆಗೆ ದೇಶದಲ್ಲಿ 151.58 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಮಕ್ಕಳ ಲಸಿಕೆ ಅಭಿಯಾನ ಆರಂಭಿಸಿದ ಒಂದು ವಾರದೊಳಗೆ 15-18 ವಯೋಮಿತಿಯ 2 ಕೋಟಿಗೂ ಅಧಿಕ ಎಳೆಯರಿಗೆ ಲಸಿಕೆಯ ಮೊದಲ ಡೋಸ್ ಹಾಕಲಾಗಿದೆ. ಒಂದೇ ದಿನ ಮಾರಕ ಒಮಿಕ್ರಾನ್ ಪ್ರಭೇದದ 616 ಪ್ರಕರಣ ವರದಿಯಾಗಿದ್ದು ಹೊಸ ರೂಪಾಂತರಿಯ ಕೇಸ್ ಸಂಖ್ಯೆ 3,623ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1,009 ಒಮಿಕ್ರಾನ್ ಸೋಂಕಿತರಿದ್ದಾರೆ. ದೆಹಲಿಯಲ್ಲಿ 513 ಕೇಸ್ಗಳಿವೆ. 1,409 ರೋಗಿಗಳು ಒಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಪ್ರಧಾನಿ ಮೋದಿ ಸೂಚನೆ: ದೇಶದಲ್ಲಿ ಕರೊನಾ ಆಸ್ಪೋಟದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಹತ್ವದ ಸಭೆ ನಡೆಸಿ ಮಹಾಮಾರಿ ಕಟ್ಟಿ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದರು. ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಷಾ, ಮನಸುಖ್ ಮಾಂಡವೀಯ, ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯ ಖಾತರಿ ಹಾಗೂ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆ ಮೋದಿ ಸೂಚಿಸಿದರು. ಕೋವಿಡೇತರ ಆರೋಗ್ಯ ಸೇವಾ ಸೌಲಭ್ಯಗಳನ್ನು ಮುಂದುವರಿಕೆ ಹಾಗೂ ಟೆಲಿಮೆಡಿಸಿನ್ ಸೌಲಭ್ಯ ಹೆಚ್ಚಳಕ್ಕೆ ಕರೆ ನೀಡಿದರು. ನಿಯಂತ್ರಣ ಕ್ರಮಗಳ ಕಟ್ಟುನಿಟ್ಟಿನ ಜಾರಿಗೂ ಪ್ರಧಾನಿ ಸೂಚಿಸಿದರು.
11 ಡೋಸ್ ಪಡೆದವನ ವಿರುದ್ಧ ಕೇಸ್: ಕೋವಿಡ್ ಲಸಿಕೆಯ 11 ಡೋಸ್ ಪಡೆದ ಬಿಹಾರದ 84 ವರ್ಷದ ಬ್ರಹ್ಮದೇವ್ ಮಂಡಲ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಪುರೈಣಿ ಠಾಣೆಯ ಪೊಲೀಸರು ಆತನನ್ನು ಬಂಧಿಸಲು ಸಜ್ಜಾಗಿದ್ದಾರೆ. ತಾನು 11 ಬಾರಿ ವ್ಯಾಕ್ಸಿನ್ ಪಡೆದಿರುವುದಾಗಿ ಮಾಧೇಪುರ ಜಿಲ್ಲೆಯ ಮಂಡಲ್ ಹೇಳಿದ್ದು ಸಂಚಲನ ಮೂಡಿಸಿತ್ತು.
ದೆಹಲಿ ಲಾಕ್ ಇಲ್ಲ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿನ ಪ್ರಕರಣಗಳ ಏರಿಕೆಯಾಗುತ್ತಿದ್ದರೂ ಲಾಕ್ಡೌನ್ ಹೇರುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ಭಾನುವಾರ ದೆಹಲಿಯಲ್ಲಿ ಸುಮಾರು 22,000 ಪ್ರಕರಣಗಳು ದೃಢಪಟ್ಟಿವೆ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಮಾರ್ಗಸೂಚಿಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಿದರೆ ಲಾಕ್ಡೌನ್ ಹೇರುವ ಅವಶ್ಯಕತೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಗಾಬರಿ ಪಡಬೇಡಿ. ಜವಾಬ್ದಾರಿಯಿಂದ ವರ್ತಿಸಿ’ ಎಂದಿದ್ದಾರೆ. ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಕಳೆದ ವಾರವೂ ಕೇಜ್ರಿವಾಲ್ ಇದೇ ರೀತಿ ಹೇಳಿದ್ದರು. ಸೋಮವಾರ ನಡೆಯುವ ದೆಹಲಿ ವಿಪತ್ತು ನಿರ್ವಹಣೆ ಸಂಸ್ಥೆಯ (ಡಿಡಿಎಂಎ) ಸಭೆಯಲ್ಲಿ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
400 ಸಂಸತ್ ಸಿಬ್ಬಂದಿಗೆ ಸೋಂಕು: ಸಂಸತ್ತಿನ ಬಜೆಟ್ ಅಧಿವೇಶನ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು ಈ ಹಂತದಲ್ಲಿ 400ಕ್ಕೂ ಅಧಿಕ ಸಂಸತ್ ಸಿಬ್ಬಂದಿ ಕರೊನಾ ಪಾಸಿಟಿವ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಂಸತ್ ಭವನದ 1,409 ಸಿಬ್ಬಂದಿ ಪೈಕಿ 402 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜನವರಿ 4ರಿಂದ 8ರ ನಡುವೆ ಪರೀಕ್ಷೆಗೆ ಒಳಪಟ್ಟ ಸಿಬ್ಬಂದಿ ಸದಸ್ಯರಲ್ಲಿ ಸೋಂಕು ದೃಢಪಟ್ಟಿದ್ದು ಯಾವ ತಳಿ ಎಂಬುದನ್ನು ತಿಳಿಯಲು ಸ್ಯಾಂಪಲ್ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಸಂಸತ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಆಕ್ಸಿಜನ್ ಬೇಡಿಕೆ ಶೇ. 264 ಏರಿಕೆ: ಪಂಜಾಬ್ನಲ್ಲಿ ಆಕ್ಸಿಜನ್ ಬೆಡ್ ಅಗತ್ಯವಿರುವ ಕರೊನಾ ಸೋಂಕಿತರ ಪ್ರಮಾಣ ಶೇಕಡ 264ರಷ್ಟು ಏರಿಕೆಯಾಗಿದ್ದು ಕಳವಳ ಮೂಡಿಸಿದೆ. ಸೋಂಕಿತರ ಸಂಖ್ಯೆಯ ಏರಿಕೆಯೊಂದಿಗೆ ವೈದ್ಯಕೀಯ ಆಮ್ಲಜನಕ ಅಗತ್ಯವಾದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಆತಂಕ ಹೆಚ್ಚಲು ಕಾರಣವಾಗಿದೆ. ಶನಿವಾರ ಬಿಡುಗಡೆಯಾದ ರಾಜ್ಯ ಆರೋಗ್ಯ ಬುಲೆಟಿನ್ ಪ್ರಕಾರ 226 ರೋಗಿಗಳು ಆಕ್ಸಿಜನ್ ಬೆಡ್ನಲ್ಲಿದ್ದಾರೆ. ಶುಕ್ರವಾರ 62 ಇದ್ದದ್ದು ಕೇವಲ 24 ಗಂಟೆಯಲ್ಲಿ ಶೇಕಡ 264ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ವೆಂಟಿಲೇಟರ್ನಲ್ಲಿರುವ ರೋಗಿಗಳ ಸಂಖ್ಯೆ 6ರಿಂದ 11ಕ್ಕೇರಿದೆ.
3 ತಿಂಗಳಲ್ಲಿ ಕೋವಿಡ್ ಇಳಿಮುಖ: ದೇಶದಲ್ಲಿ ಕೋವಿಡ್ ಅಲೆ ಶೀಘ್ರವೇ ಉತ್ತುಂಗಕ್ಕೆ ತಲುಪಿದರೂ ಮೂರು ತಿಂಗಳೊಳಗೆ ಇಳಿಮುಖವಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೆಚ್ಚುವರಿ ನಿರ್ದೇಶಕ ಸಮೀರನ್ ಪಾಂಡಾ ಹೇಳಿದ್ದಾರೆ. ಒಮಿಕ್ರಾನ್ ರೂಪಾಂತರಿಯಿಂದ ಪ್ರಸಕ್ತ ಅಲೆ ಜಾಗತಿಕ ಅಲೆಯಷ್ಟೇ ವೇಗವಾಗಿ ಹರಡಿದರೂ ಕಳೆದ ಐದು ವಾರಗಳ ವಿಶ್ವದ ಹಾಗೂ ದೇಶದ್ದೇ ಅಂಕಿಸಂಖ್ಯೆ ಗಮನಿಸಿದರೆ ಒಮಿಕ್ರಾನ್ನಿಂದ ಉಂಟಾಗುವ ಸೋಂಕು ಒಂದೋ ಲಕ್ಷಣ-ರಹಿತವಾಗಿರುತ್ತದೆ ಅಥವಾ ಸೌಮ್ಯವಾಗಿರುತ್ತದೆ ಎಂಬುದು ಸಾಬೀತಾಗಿದೆ. ಗಂಭೀರ ರೋಗಗ್ರಸ್ಥರಾಗಿ ಆಸ್ಪತ್ರೆಗೆ ಸೇರಿದ ಕೆಲವೇ ಜನರಲ್ಲಿ ಅನ್ಯ ವ್ಯಾಧಿಗಳಿವೆ ಅಥವಾ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಒಮಿಕ್ರಾನ್ ಸೋಂಕಿತರ ಆಸ್ಪತ್ರೆ ದಾಖಲಾತಿ ಪ್ರಮಾಣ ಒಟ್ಟಾರೆಯಾಗಿ ಶೇಕಡ 1-2 ಆಗಿದೆ. ಡೆಲ್ಟಾಕ್ಕೆ ಹೋಲಿಸಿದರೆ ಇದು ಕಡಿಮೆ ಎಂದು ರಾಷ್ಟ್ರೀಯ ಲಸಿಕೆ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಎನ್.ಕೆ. ಅರೋರಾ ಕೂಡ ಹೇಳಿದ್ದಾರೆ.