

ಅಪಾರ ಖನಿಜ ಸಂಪತ್ತು, ಕಚ್ಚಾ ವಸ್ತುಗಳು, ಸೂಕ್ತ ವಾಯುಗುಣ, ನೀರಿನ ಪೂರೈಕೆ, ಸಾರಿಗೆ ವ್ಯವಸ್ಥೆ. ನುರಿತ ಮಾನವ ಸಂಪನ್ಮೂಲದ ಲಭ್ಯತೆ, ವಿಶಾಲ ಮಾರುಕಟ್ಟೆ ಹಾಗೂ ತಂತ್ರಜ್ಞಾನ ಇರುವುದರಿಂದ ಕರ್ನಾಟಕವು ಅನೇಕ ವೈವಿಧ್ಯಮಯ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ಕೃಷಿ ಆಧಾರಿತ ಗುಡಿ ಕೈಗಾರಿಕೆಗಳಿಂದ ಆಧುನಿಕ ಕೈಗಾರಿಕೋದ್ಯಮದೆಡೆಗೆ ದಾಪುಗಾಲು ಹಾಕಿದೆ.
ಹುಬ್ಬಳ್ಳಿ ವಾಲ್ವ್ ಉತ್ಪಾದನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಗಟ್ಟಿತನ, ಹೊಳಪು, ವಿನ್ಯಾಸ, ನಿಖರತೆ, ಬಾಳಿಕೆ ಸೇರಿದಂತೆ ನಾನಾ ರೀತಿಯ ಮಾನದಂಡ ಆಧರಿತ ಪರೀಕ್ಷೆಯಲ್ಲಿ ಇಲ್ಲಿ ತಯಾರಾದ ವಾಲ್ವ್ ಗಳು ಶೇ. ನೂರು ಅಂಕದೊಂದಿಗೆ ಪಾಸ್ ಆಗುತ್ತವೆ. ಹೀಗಾಗಿ ದಶಕಗಳಿಂದ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ಮೈಕ್ರೋಫಿನಿಷ್ ವಾಲ್ವ್ ಪ್ರೖೆವೇಟ್ ಲಿಮಿಟೆಡ್, 2ಎಲ್ ಇಂಜಿನಿಯರಿಂಗ್, ಎಸ್ಎಂಕೆ ಇನ್ಸ್ಟ್ರುಮೆಂಟ್ಸ್ ಹಾಗೂ ಕಂಟ್ರೋಲ್ಸ್, ಪಾಲಿ ವಾಲ್ವ್ ಟೆಕ್, ಮೈಕಾನ್ ವಾಲ್ವ್, ಬಿಡಿಕೆ ವಾಲ್ವ್, ನಿಯೋ ವಾಲ್ವಸ್ ಸೇರಿದಂತೆ ಹಲವು ಕಂಪನಿಗಳು ಇಲ್ಲಿ ವಾಲ್ವ್ ಉತ್ಪಾದನೆಯಲ್ಲಿ ತೊಡಗಿವೆ.
ಉತ್ತರ ಕರ್ನಾಟಕದ ವಿದ್ಯಾಕಾಶಿ ಧಾರವಾಡದಲ್ಲಿ ಟಾಟಾ ಇಂಡಸ್ಟ್ರೀಸ್ ಸ್ಥಾಪನೆಯಾಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು 1998ರಲ್ಲಿ ಟಾಟಾ ಹಿಟಾಚಿ ಘಟಕ ಆರಂಭಿಸಿತು. 2008ರಲ್ಲಿ ಟಾಟಾ ಮಾಕೋಪೋಲೊ ಘಟಕ ಆರಂಭಗೊಂಡಿತು. ಟಾಟಾ ಬಸ್, ಮಿನಿ ಬಸ್, ಇವಿ ಬಸ್ಗಳ ಉತ್ಪಾದನಾ ಘಟಕದಲ್ಲಿ 2,000 ಉದ್ಯೋಗಿಗಳು ಇದ್ದಾರೆ. ಬಸ್ ತಯಾರಿಕೆಯಲ್ಲಿ ಟಾಟಾ ಮಾಕೋಪೋಲೊ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಕೈಗಾರಿಕೆ ವಿಸ್ತರಣೆಯ ಭಾಗವಾಗಿ 2012ರಲ್ಲಿ ಟಾಟಾ ಮೋಟಾರ್ಸ್ ಘಟಕ ಕಾರ್ಯಾರಂಭಿಸಿತು. ಇಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಟಾಟಾ ಕಂಪನಿಯ ವಾಹನಗಳಿಗೆ ಚೆಸ್ಸಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಸುಂದರ, ಸುಭದ್ರ, ಆಧುನಿಕ, ಅನುಕೂಲಕರ ಬಸ್ಗಳು ಇಲ್ಲಿ ನಿರ್ವಣಗೊಳ್ಳುತ್ತಿವೆ.
ಪ್ರತಿ ತಿಂಗಳು ಅಂದಾಜು 2 ಸಾವಿರ ಇಲೆಕ್ಟ್ರಿಕಲ್ ಇಂಡಕ್ಷನ್ ಮೋಟರ್ಗಳು, ಸಾವಿರ ಟ್ರಾನ್ಸಫಾರ್ಮರ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಸರ್ಕಾರಿ ಸ್ವಾಮ್ಯದ ಹುಬ್ಬಳ್ಳಿಯ ನ್ಯೂ ಗವರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ (ಎನ್ಜಿಇಎಫ್) 1986ರಲ್ಲಿ ಹುಬ್ಬಳ್ಳಿ ಕೆಎಸ್ಆರ್ಟಿಸಿ ಶೆಡ್ನಲ್ಲಿ ಪ್ರಾರಂಭಗೊಂಡ ಎನ್ಜಿಇಎಫ್, ನಂತರ ಧಾರವಾಡದ ರಾಯಾಪುರದಲ್ಲಿ ಕಾರ್ಯಾರಂಭ ಮಾಡಿತು. ಇಲ್ಲಿ ತಯಾರಾದ ಇಲೆಕ್ಟ್ರಿಕ್ ಇಂಡಕ್ಷನ್ ಮೋಟರ್ಸ್, ಟ್ರಾನ್ಸಫಾರ್ಮರ್ಗಳಿಗೆ ಹೊರ ದೇಶ ದಲ್ಲಿಯೂ ಬೇಡಿಕೆ ಇದೆ. ಐಎಸ್ಒ: 9000 ಹಾಗೂ ಬಿಐಎಸ್ ಪ್ರಮಾಣಪತ್ರ ಹೊಂದಿರುವ ಉತ್ಪನ್ನಗಳು ಇವು.
ಹುಬ್ಬಳ್ಳಿಯಲ್ಲಿರುವ ಕರ್ನಾಟಕದ ಪ್ರಮುಖ ರೈಲ್ವೆ ವರ್ಕ್ಶಾಪ್ ಶತಮಾನದ ಇತಿಹಾಸದೊಂದಿಗೆ ವರ್ತಮಾನದಲ್ಲೂ ಪ್ರಾಮುಖ್ಯ ಪಡೆದು ಗಮನ ಸೆಳೆಯುತ್ತಿದೆ. ಬಿವಿಝುಡ್ಐ ಬ್ರೇಕ್ ವ್ಯಾನ್ಸ್ ಉತ್ಪಾದನೆ, ಲೋಕೋಮೋಟಿವ್ ದುರಸ್ತಿ ಸೇರಿದಂತೆ ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತ ಇಡೀ ಭಾರತೀಯ ರೈಲ್ವೆಯಲ್ಲಿ ಪ್ರಮುಖ ಸೇವೆ ಒದಗಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮೆಮು, ಡೆಮು ಮತ್ತು ಎಲ್ಎಚ್ಬಿ ಬೋಗಿಗಳನ್ನು ನಿರ್ವಿುಸುವ ಮತ್ತು ನಿರ್ವಹಿಸುವ ಮೂಲಕ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ. ಬಿಒಎಕ್ಸ್ ಎನ್ (ಬ್ರಾಡ್ಗೇಜ್ ಓಪನ್ ಎಕ್ಸ್ಟೆಂಡೆಡ್ ನೆಟ್ವರ್ಕ್ ಸೌತ್ ವ್ಯಾಗನ್) ಬೋಗಿಯಿಂದ ಬಿಒಎಕ್ಸ್ ಎನ್ಆರ್ (ಬೋಗಿ ಓಪನ್ ಹೈ ಸೈಡೆಡ್ ವಿಥ್ ಏರ್ ಬ್ರೇಕ್) ಗುಣಮಟ್ಟದ ಬೋಗಿಗಳ ನಿರ್ವಣದತ್ತ ಮುಂದುವರಿದಿದೆ. ಇಲ್ಲಿ 4ಸಾವಿರಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದಾರೆ.
ಕರ್ನಾಟಕವನ್ನು ಐದು ಕೈಗಾರಿಕಾ ವಲಯಗಳನ್ನಾಗಿ ವಿಂಗಡಿಸಲಾಗಿದೆ.