

ಬೆಂಗಳೂರು: ಕರೊನಾ, ಲಾಕ್ಡೌನ್ ಹಾಗೂ ರಫ್ತಿಗೆ ತಡೆಯಾಗಿದ್ದರಿಂದ ಬಳ್ಳಾರಿ ಜೀನ್ಸ್ ಉದ್ಯಮ ಕಂಗೆಟ್ಟಿದ್ದು, ಇದಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಉದ್ಯಮ ಹಾಗೂ ಸರ್ಕಾರದ ನಡುವೆ ವಿಜಯವಾಣಿ ಹಾಗೂ ದಿಗ್ವಿಜಯ ಸಂಪರ್ಕ ಸೇತುವೆಯಾಗಿದೆ. ತಕ್ಷಣದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಆಸಕ್ತಿ ತೋರಿಸಿದ್ದಾರೆ. ‘ಮುಚ್ಚುವ ಹಾದಿಯಲ್ಲಿ ಜೀನ್ಸೋದ್ಯಮ’ ಶೀರ್ಷಿಕೆಯಲ್ಲಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು, ಈ ಉದ್ಯಮ ನಂಬಿಕೊಂಡ ಉದ್ಯಮಿ, ಕಾರ್ವಿುಕರ ಕಷ್ಟಗಳನ್ನು ವಿವರವಾಗಿ ವರದಿ ಮಾಡಿತ್ತು. ಭಾನುವಾರ ದಿಗ್ವಿಜಯ ವೇದಿಕೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕರೊನಾ ತಗ್ಗುತ್ತಿದ್ದಂತೆ ಗಾರ್ವೆಂಟ್ ಉದ್ಯಮಕ್ಕೆ ಉತ್ತೇಜನ ಸಿಗುತ್ತಿದೆ, ಅಲ್ಲಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಇನ್ನುಮುಂದೆ ಹೆಚ್ಚು ಲಕ್ಷ್ಯ ಕೊಡುತ್ತೇವೆ ಎಂದರು. ಕೂಡಲೇ ಹಿರಿಯ ಅಧಿಕಾರಿಗಳನ್ನು ಬಳ್ಳಾರಿಗೆ ಕಳಿಸಿ ವರದಿ ಪಡೆದುಕೊಳ್ಳುವೆ. ಜತೆಗೆ ಕೆಎಸ್ಎಫ್ಸಿಯವರನ್ನು ಸಹ ಕಳುಹಿಸಿ ಉದ್ಯಮಿಗಳಿಗೆ ಸಾಲದ ರೂಪದಲ್ಲಿ ನೆರವು ನೀಡುವ ಕುರಿತು ಪರಿಶೀಲಿಸಲಾಗುತ್ತದೆ. ಸಬ್ಸಿಡಿ ಕೊಡಿಸುವುದು, ಕಡಿಮೆ ಬಡ್ಡಿಯಲ್ಲಿ ಸಹಾಯ ಮಾಡಲು ಸಾಧ್ಯತೆ ಬಗ್ಗೆ ಪರಿಶೀಲಿಸ ಲಾಗುತ್ತದೆ. ಅಧಿಕಾರಿಗಳು ವರದಿ ಕೊಟ್ಟ ಕೂಡಲೇ ಕ್ರಮಕೈಗೊಳ್ಳುತ್ತೇನೆ ಎಂದು ಅಭಯ ನೀಡಿದರು.
ಸಿಎಂ ಎಂದರೆ ಕಾಮನ್ ಮ್ಯಾನ್, ನಾನೂ ಒಬ್ಬ ಸಾಮಾನ್ಯ ಮನುಷ್ಯ ಎಂದು ಕರೆಸಿಕೊಳ್ಳುವುದೇ ಇಷ್ಟ ಎಂದು ಹೇಳಿದ್ದ ಬಸವರಾಜ ಬೊಮ್ಮಾಯಿ ಅವರ ಮಾತು ಜನರಿಗೆ ಎಷ್ಟು ಇಷ್ಟವಾಗಿದೆ ಎಂಬುದು ದಿಗ್ವಿಜಯ ವೇದಿಕೆಯಲ್ಲಿ ಕಾಣಿಸಿತು. ತಮ್ಮ ಊರಿನ, ತಮ್ಮ ವೃತ್ತಿಯ ಮತ್ತು ಸಮಾಜದ ಸಮಸ್ಯೆಗಳನ್ನು ಸಿಎಂಗೆ ತಲುಪಿಸಲು ದಿಗ್ವಿಜಯ ವೇದಿಕೆ ಕಲ್ಪಿಸಿತ್ತು. ಸಾವಿರಕ್ಕೂ ಅಧಿಕ ಮಂದಿ ಸಮಸ್ಯೆಗಳ ವಿವರಣೆಯ ವಿಡಿಯೋ ಕಳಿಸಿದ್ದರು. ಅದರಲ್ಲಿ ಆಯ್ದ ಕೆಲವನ್ನು ಸಿಎಂ ವೀಕ್ಷಿಸಿದರು. ಜತೆಗೆ ಈ ರೀತಿ ಅವಕಾಶ ಮಾಡಿದ್ದಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಹುಬ್ಬಳ್ಳಿ- ಬೆಳಗಾವಿ ರೈಲ್ವೆ ಕಾಮಗಾರಿ ವಿಚಾರ, ಕೊಡಗಿಗೆ ಸುಸಜ್ಜಿತ ಆಸ್ಪತ್ರೆ, ಉತ್ತರ ಕನ್ನಡದಲ್ಲಿ ಹೊಸ ಆಸ್ಪತ್ರೆ ನಿರ್ವಣ, ಮಲೆನಾಡಿದ ರಸ್ತೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.
ಲಾಬಿಗಾಗಿ ದೆಹಲಿಗೇಕೆ ಹೋಗಲಿಲ್ಲ?: ನಾಯಕತ್ವ ಬದಲಾವಣೆ ಸಂದರ್ಭ ನನ್ನ ಹೆಸರು ರೇಸ್ನಲ್ಲಿರಲಿಲ್ಲ. ಹೀಗಾಗಿ ನಾನೇಕೆ ದೆಹಲಿಗೆ ಹೋಗಬೇಕಿತ್ತು? ಹಿಂದೆ ನನಗೆ ಸಚಿವ ಸ್ಥಾನ ಕೊಟ್ಟು ಜಲಸಂಪನ್ಮೂಲ ಖಾತೆ ಕೊಟ್ಟಿದ್ದರು. ಈಗಲೂ ಹಾಗೇ, ನಾನು ಸಿಎಂ ಆಗುತ್ತೇನೆಂದು ನಿರೀಕ್ಷೆ ಮಾಡಿರಲಿಲ್ಲ. ಹತ್ತು ಬಾರಿ ಯೋಚಿಸಿ ಅವಕಾಶ ಕೊಟ್ಟಿದ್ದಾರೆ. ವರಿಷ್ಠರ ನಿರೀಕ್ಷೆಯಂತೆಯೇ ಕೆಲಸ ಮಾಡಿ ತೋರಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಶೀಘ್ರವೇ ಚಾಮರಾಜನಗರಕ್ಕೆ: ನನಗೆ ಮೂಢನಂಬಿಕೆ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಶೀಘ್ರವೇ ಚಾಮರಾಜ ನಗರಕ್ಕೆ ಹೋಗುತ್ತೇನೆ ಎಂದು ಬೊಮ್ಮಾಯಿ ಹೇಳಿದರು. ವೀಕ್ಷಕರೊಬ್ಬರು ಮೂಢನಂಬಿಕೆಯಿಂದ ಚಾಮರಾಜನಗರ ಕಡೆಗಣಿಸಬೇಡಿ ಎಂದು ಕೋರಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿ, ಚಾಮರಾಜನಗರ ಆಸ್ಪತ್ರೆ ಉದ್ಘಾಟನೆ ಸೇರಿ ವಿವಿಧ ಕಾಮಗಾರಿಗೆ ಚಾಲನೆ ಕೊಡುವುದು, ಜಿಲ್ಲೆಯ ಅಭಿವೃದ್ಧಿ ಕುರಿತು ಸಭೆ ನಡೆಸುವ ಸಂಬಂಧ ಶೀಘ್ರವೇ ಅಲ್ಲಿಗೆ ತೆರಳುತ್ತೇನೆ ಎಂದರು.
ಪತ್ರಿಕಾ ವಿತರಕರ ಬೇಡಿಕೆಗೆ ಸ್ಪಂದನೆ: ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ವಿುಕರೆಂಬ ಬೇಡಿಕೆಯನ್ನು ಪರಿಗಣಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದರು. ಜತೆಗೆ ಕೇಬಲ್ ಆಪರೇಟರ್ಗಳ ಬೇಡಿಕೆ ಆಲಿಸಿ ಪರಿಹಾರ ನೀಡುವ ಭರವಸೆಯಿತ್ತರು.
ಮನೆಯವರು ಬರಲ್ಲ: ಮುಖ್ಯಮಂತ್ರಿಯಾದ ಬಳಿಕ ಆರ್.ಟಿ. ನಗರದಲ್ಲಿರುವ ಸ್ವಂತ ಮನೆಗೆ ಜನರು ಬರುವುದು ಹೆಚ್ಚಾಗಿದೆ. ಅವರಿಗೂ ಅಲ್ಲಿ ತೊಂದರೆ. ಹೀಗಾಗಿ ರೇಸ್ಕೋರ್ಸ್ ರಸ್ತೆಯ ಸರ್ಕಾರಿ ವಸತಿ ಗೃಹದಿಂದ ಕಾರ್ಯನಿರ್ವಹಣೆ ಮಾಡುತ್ತೇನೆ. ನನ್ನ ಕುಟುಂಬದವರು ಬರಲ್ಲ ಎಂದು ನಿರ್ಣಯ ಮಾಡಿದ್ದಾರೆ. ಅವರಿಗೆ ಆರ್.ಟಿ.ನಗರದ ಮನೆಯೇ ಕಂಫರ್ಟ್ ಎಂದು ಬೊಮ್ಮಾಯಿ ಹೇಳಿದರು.
ಕೈಗೊಂಬೆ ಎಂಬ ವಿಶ್ಲೇಷಣೆ ಇದ್ದಿದ್ದೇ: ನನ್ನನು ಬಿಎಸ್ವೈ ಕೈಗೊಂಬೆ ಅನ್ನೋದು ಸಹಜ. ಇಂತಹ ವಿಶ್ಲೇಷಣೆ ಇದ್ದಿದ್ದೇ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಯಡಿಯೂರಪ್ಪ ನಮ್ಮ ನಾಯಕರು. ಅವರ ಮಾರ್ಗದರ್ಶನ ಪಡೆದುಕೊಳ್ಳುತ್ತೇನೆ. ಜನರ ಮನಸ್ಸಿನಲ್ಲಿ ಛಾಪು ಮೂಡುವಂತೆ ಆಡಳಿತದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಕೆನ್ನೆ ಹಿಂಡಬೇಕಂತೆ: ಬಸವರಾಜ ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆಯಾಗುತ್ತದೆ. ಮುಖ್ಯಮಂತ್ರಿಯಾಗಿ ಉನ್ನತ ಸ್ಥಾನಕ್ಕೇರಿದ ನಿಮ್ಮನ್ನು ಭೇಟಿ ಮಾಡಬೇಕು, ನಿಮ್ಮನ್ನೊಮ್ಮೆ ತಬ್ಬಿಕೊಂಡು ಕೆನ್ನೆ ಹಿಂಡಬೇಕು ಎಂದು ಅವರ ಇಂಗ್ಲಿಷ್ ಶಿಕ್ಷಕಿ ಸಿಂಥಿಯಾ ಪೆರೇರಾ ದಿಗ್ವಿಜಯ ವೇದಿಕೆಯಲ್ಲಿ ಹೇಳಿಕೊಂಡರು. ಸಿಎಂ ಕೂಡ ಶೀಘ್ರವೇ ಭೇಟಿ ಮಾಡುವುದಾಗಿ ಹೇಳಿದರಲ್ಲದೆ, ತಮ್ಮ ಮನೆಗೆ ಆಹ್ವಾನಿಸಿದರು. ನೃಪತುಂಗ ಬೆಟ್ಟಕ್ಕೆ ಹೋಗುವ ಪ್ರಸ್ತಾಪಕ್ಕೂ ಒಪ್ಪಿದರು. ಗಣಿತ ಶಿಕ್ಷಕ ಜೋಶಿ, ಕಾಲೇಜು ಹಂತದಲ್ಲಿದ ಉಪನ್ಯಾಸಕರನ್ನು ನೆನಪಿಸಿಕೊಂಡ ಸಿಎಂ, ಎರಡು ಬಾರಿ ಪೆಟ್ಟು ತಿಂದಿದ್ದು ಸ್ಮರಿಸಿದರು. ಜತೆಗೆ ತಮಗೆ ಮೊದಲ ಸಾಲಿನ ವಿದ್ಯಾರ್ಥಿಯೂ ಸ್ನೇಹಿತರಾಗಿದ್ದರು. ಕೊನೇ ಸಾಲಿನವರೂ ಸ್ನೇಹಿತರಾಗಿದ್ದರು ಎಂದರು.