

ಹುಬ್ಬಳ್ಳಿ: ಪ್ರಧಾನಿ ಮೋದಿ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಕೊಟ್ಟ ವಿವಾದಾತ್ಮಕ ಹೇಳಿಕೆಗೆ ಇದೀಗ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, ಇನ್ನು ಸ್ವಲ್ಪ ದಿನ ಕಾದು ನೋಡಿ, ಮತಗಳ ಮೂಲಕ ಜನರೇ ಅವರ ಕಪಾಳಕ್ಕೆ ಹೊಡೀತಾರೆ ಎಂದಿದ್ದಾರೆ.
"ಮೋದಿ..ಮೋದಿ ಅನ್ನೋ ಯುವಕರಿಗೆ ಕಪಾಳಕ್ಕೆ ಹೊಡಿರಿ ಅನ್ನೋ ತಂಗಡಗಿ ಹೇಳಿಕೆಗೆ ಇನ್ನು ಕೆಲವೇ ದಿನಗಳಲ್ಲಿ ಮತಗಳ ಮುಖಾಂತರ ಜನರೇ ಇವರ ಕಪಾಳಕ್ಕೆ ಹೊಡೀತಾರೆ. ರಾಜ್ಯದಲ್ಲಿ ವಾತಾವರಣ ಉತ್ತಮವಾಗಿದೆ. ಎಲ್ಲೆಡೆ ಮೋದಿ ಪರ ಅಲೆ ಇದೆ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನವಾಗಿದೆ. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ, ವಿಜಯೇಂದ್ರ ಪ್ರಚಾರಕ್ಕೆ ಬರ್ತಾರೆ. ರಾಷ್ಟ್ರೀಯ ನಾಯಕರು ಸಹ ಪ್ರಚಾರಕ್ಕೆ ಬರ್ತಾರೆ" ಎಂದರು.
"ರಾಷ್ಟ್ರೀಯ ನಾಯಕರ ಜತೆ ಸೆಲೆಬ್ರಿಟಿಗಳು ಕೂಡಾ ಪ್ರಚಾರಕ್ಕೆ ಸಾಥ್ ನೀಡುತ್ತಾರೆ. ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಟೂರ್ ಫಿಕ್ಸ್ ಆಗತ್ತದೆ. ಸಂಗಣ್ಣ ಕರಡಿ ಅವರು ಸಮಾಧಾನ ಆಗಿದ್ದಾರೆ. ಧಾರವಾಡ ಹಾಗೂ ನಮ್ಮ ಕ್ಷೇತ್ರಕ್ಕೂ ಪ್ರಚಾರಕ್ಕೆ ಬರಲಿದ್ದಾರೆ. ಪಕ್ಷಕ್ಕೆ ಜನಾರ್ದನ ರೆಡ್ಡಿ ಬಂದಿರೋದು ಮತ್ತಷ್ಟು ಬಲ ಬಂದಂತಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದೆ" ಎಂದು ಹೇಳಿದರು.
"ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. .ಸುಪ್ರೀಂಗೆ ಹೋಗಿರೋದು ರಾಜಕೀಯ ತಂತ್ರಗಾರಿಕೆ ಅಷ್ಟೇ. ಯುಪಿಎ ಕಾಲದಲ್ಲಿ ಎಷ್ಟು ಹಣ ಬಂದಿದೆ ಎನ್ಡಿಎ ಕಾಲದಲ್ಲಿ ಎಷ್ಟು ಎನ್ಡಿಆರ್ಎಫ್ ಹಣ ಬಂದಿದೆ ಅನ್ನೋದು ಬಹಿರಂಗ ಪಡಿಸಲಿ" ಎಂದು ಬಸವರಾಜ್ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ನೇರ ಸವಾಲು ಎಸಗಿದ್ದಾರೆ.