

ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದಿನ ಬಜೆಟ್ನಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಸೇವಾ ವಲಯಕ್ಕೆ ಆದ್ಯತೆಯ ಮೂಲಕ ಮತ ಕ್ರೋಡೀಕರಣಕ್ಕೆ ತಂತ್ರ ರೂಪಿಸಿದ್ದಾರೆ.
ಹಣಕಾಸು ಖಾತೆಯನ್ನು ನಿರ್ವಹಿಸುತ್ತಿರುವ ಬೊಮ್ಮಾಯಿ ಫೆಬ್ರವರಿ ಎರಡನೇ ವಾರದಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣೆಗೆ ಹೋಗಲು ನಾಲ್ಕು ತಿಂಗಳಷ್ಟೇ ಇರುವುದರಿಂದ ಇದು ಸಂಪೂರ್ಣ ಚುನಾವಣೆಯನ್ನೇ ಕೇಂದ್ರೀಕರಿಸಿದ ಬಜೆಟ್ ಆಗಿರಲಿದೆ. ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿಯೇ ಎದುರಿಸುವುದಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಿಸಿದ್ದರು. ಆದ್ದರಿಂದಲೇ ಎಲ್ಲ ಮೂಲಗಳಿಂದಲೂ ಸಿಎಂ ಬಿಜೆಪಿ ಕಡೆ ಮತ ಸೆಳೆಯಲು ಯತ್ನಿಸುತ್ತಿದ್ದು, ಅದರಲ್ಲಿ ಬಜೆಟ್ ಸಹ ಒಂದಾಗಿದೆ.
ಸರ್ಕಸ್ ಮುಖ್ಯ: ಉಚಿತ ಕೊಡುಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಡೆಯಿಂದಲೂ ಸ್ವಲ್ಪಮಟ್ಟಿನ ವಿರೋಧವಿದೆ. ಆದರೆ, ರಾಜ್ಯದಲ್ಲಿ ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ಘೋಷಣೆ ಮಾಡಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿಯೂ ಬೊಮ್ಮಾಯಿ ಇದ್ದಾರೆ. ಆದರೂ, ಜನಾಕರ್ಷಣೆಯ ಬಜೆಟ್ ಮಾಡಬೇಕೆಂದು ಈಗಾಗಲೇ ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.
ಆದ್ಯತೆ ಹೇಗೆ?: ಮುಂದಿನ ಬಜೆಟ್ನಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸೇವಾ ವಲಯಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ, ಶಿಕ್ಷಣಕ್ಕೆ, ಸಾಮಾಜಿಕ ಹಾಗೂ ಪ್ರಾದೇಶಿಕ ಬದಲಾವಣೆಗೆ ಬೊಮ್ಮಾಯಿ ಪ್ರಾಮುಖ್ಯತೆ ನೀಡಲಿದ್ದಾರೆ.
ಮಾಮೂಲಿಯಾಗಿ ಬಜೆಟ್ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣದಂತಹ ಆದ್ಯತಾ ವಲಯಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಈ ಬಾರಿ ವಿಶೇಷವಾಗಿ ಕೆಲ ಹೊಸ ಕ್ಷೇತ್ರಗಳನ್ನು ಗುರುತಿಸಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಸೋಷಿಯಲ್ ಇಂಜಿನಿಯರಿಂಗ್: ಸಾಮಾಜಿಕ ಬದಲಾವಣೆ ಮಾಡುವುದಕ್ಕೆ ಬೇಕಾದ ರೀತಿಯಲ್ಲಿ ಕೆಲ ಯೋಜನೆಗಳನ್ನು ರೂಪಿಸಲಾಗುತ್ತದೆ. ಅತ್ಯಂತ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಅವಕಾಶಗಳನ್ನು ಸೃಷ್ಟಿಸುವುದು ಬೊಮ್ಮಾಯಿ ಉದ್ದೇಶವಾಗಿದೆ. ಸಣ್ಣಸಣ್ಣ ಸಮುದಾಯಗಳನ್ನು ಗುರುತಿಸಿ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಮೀಸಲಾತಿ ಯೊಂದರಿಂದಲೇ ‘ಸೋಷಿಯಲ್ ಇಂಜಿನಿಯರಿಂಗ್’ ಸಾಧ್ಯವಾಗದು, ಹೀಗಾಗಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಕುಲಕಸುಬು ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಆದ್ಯತೆ ನೀಡುವ ಉದ್ದೇಶವಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಉತ್ತರ ಕರ್ನಾಟಕಕ್ಕೆ ಆದ್ಯತೆ: ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿನ ನೀರಾವರಿ ಯೋಜನೆಗಳಿಗೆ ವಿಶೇಷ ನೆರವು ನೀಡಲಾಗುತ್ತಿದೆ. ಅದರ ಜತೆಗೆ, ಬೆಂಗಳೂರು ಹೊರಗಡೆ ಕೈಗಾರಿಕೆಗಳ ಸ್ಥಾಪನೆ ಸರ್ಕಾರದ ಮೂಲ ಉದ್ದೇಶವಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅನೇಕ ಯೋಜನೆ ಅನುಮೋದನೆ ನೀಡಲಾಗಿದೆ. ಅದರಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಕೈಗಾರಿಕೆಗಳು ಬರಲಿವೆ. ಅವುಗಳನ್ನು ಆದಷ್ಟು ಬೇಗ ಸ್ಥಾಪನೆಯಾಗುವಂತೆ ನೋಡಿಕೊಳ್ಳುವುದು, ಅದಕ್ಕೆ ಪೂರಕವಾಗಿ ಬೇಕಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಆದ್ಯತೆ ಸಿಗಲಿದೆ. ಸಮಾವೇಶದಲ್ಲಿ ಅಂದಾಜು 10 ಲಕ್ಷ ಕೋಟಿ ರೂ.ಗಳ ಬಂಡವಾಳ ಹರಿದು ಬರಲು ಒಡಂಬಡಿಕೆಗಳಾಗಿವೆ. ಅದರಲ್ಲಿ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಬಂಡವಾಳ ಉತ್ತರ ಕರ್ನಾಟಕಕ್ಕೆ ಬರುವಂತಾಗಲು ಬಜೆಟ್ನಲ್ಲಿ ಯೋಜನೆಗಳಿರಲಿವೆ ಎಂದು ಮೂಲಗಳು ಹೇಳುತ್ತವೆ.
ಆರ್ಥಿಕ ಕ್ಷೇತ್ರದ ಆದ್ಯತೆ
ಬಜೆಟ್ನಲ್ಲಿ ಆರ್ಥಿಕ ಕ್ಷೇತ್ರದ ಆದ್ಯತೆ ನೀಡಲಾಗುತ್ತದೆ. ಅಂದರೆ ಸಾಲ, ತೆರಿಗೆ ಸಂಗ್ರಹದಂತಹ ಕ್ಷೇತ್ರಗಳನ್ನು ಬಿಟ್ಟು ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವಂತೆ ಮಾಡುವುದು ಬೊಮ್ಮಾಯಿ ಉದ್ದೇಶವಾಗಿದೆ. ಆರ್ಥಿಕ ಚಟುವಟಿಕೆಗಳು ನಡೆದರೆ ಅದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಆರ್ಥಿಕ ಕ್ಷೇತ್ರಕ್ಕೆ ಅವಕಾಶ ಹೆಚ್ಚಿಸಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.