ಪಾಕ್​​ನಲ್ಲಿ ಮಕ್ಕಳ ಕೈನಲ್ಲಿದ್ದ ರಾಕೆಟ್ ಲಾಂಚರ್ ಶೆಲ್ ಸ್ಫೋಟ; 8 ಸಾವು!

Untitled design - 2023-09-27T211647.977
Published on

ಇಸ್ಲಾಮಾಬಾದ್​: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಜಾಂಗಿ ಸಬ್ ಜ್ವಾಯ್ ಗೋಥ್ ಗ್ರಾಮದ ಮನೆಯೊಂದರಲ್ಲಿ ಬುಧವಾರ ರಾಕೆಟ್ ಲಾಂಚರ್ ಶೆಲ್ ಸ್ಫೋಟಗೊಂಡು 4 ಮಕ್ಕಳು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ತಿಳಿಸಿದ್ದಾರೆ.

ಮೃತರಲ್ಲಿ ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಸೇರಿದ್ದಾರೆ ಎಂದು ಕಾಶ್ಮೋರ್​ -ಕಂಧ್‌ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹೈಲ್ ಖೋಸೊ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಮಕ್ಕಳು ಆಡುತ್ತಿದ್ದಾಗ ರಾಕೆಟ್ ಶೆಲ್ ಕಂಡಿದೆ. ಬಳಿಕ ಅವರು ಅದನ್ನು ಮನೆಗೆ ತಂದಿದ್ದಾರೆ. ಅಲ್ಲಿ ಅದು ಸ್ಫೋಟಗೊಂಡಿದೆ.

ಈ ನಡುವೆ ಸಿಂಧ್ ಮುಖ್ಯಮಂತ್ರಿ ನ್ಯಾ.ಮಕ್ಬೂಲ್ ಬಕರ್ ಅವರು ಹೇಳಿಕೆಯಲ್ಲಿ, ರಾಕೆಟ್ ಲಾಂಚರ್ ಆ ಹಳ್ಳಿಗೆ ಹೇಗೆ ತಲುಪಿತು ಎಂಬ ಬಗ್ಗೆ ಪ್ರಾಂತೀಯ ಇನ್ಸ್‌ಪೆಕ್ಟರ್ ಜನರಲ್ ಅವರಿಂದ ಈಗಾಗಲೇ ವರದಿಯನ್ನು ಕೇಳಲಾಗಿದೆ ಎಂದು ಹೇಳಿದ್ದಾರೆ.

ದೇಶದ ವಿವಿಧೆಡೆ ಶಸ್ತ್ರಾಸ್ತ್ರಗಳು ಕಳ್ಳಸಾಗಣೆಯಾಗುತ್ತಿದೆಯೇ? ಗೋಥ್ ಗ್ರಾಮದಲ್ಲಿ ಡಕಾಯಿತರನ್ನು ಸಕ್ರಿಯಗೊಳಿಸುವವರು ಇದ್ದಾರೆಯೇ? ಘಟನೆ ಆಶ್ಚರ್ಯ ಮತ್ತು ಆಘಾತ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಅಪಾಯಕಾರಿ ವಸ್ತುಗಳ ಸ್ಫೋಟ ಪಾಕ್​ನಲ್ಲಿ ಇದೇ ಮೊದಲಲ್ಲ. ಈ ವರ್ಷದ ಎಪ್ರಿಲ್‌ನಲ್ಲಿ ಚಮನ್‌ ನಗರದಲ್ಲಿ ಗ್ರೆನೇಡ್ ಸ್ಫೋಟಿಸಿ ಕುರಿಗಾಹಿ ಮೃತಪಟ್ಟಿದ್ದ. ಇತ್ತೀಚೆಗೆ ಪಾಳುಬಿದ್ದ ಮನೆಯಲ್ಲಿ ಸಿಕ್ಕ ವಸ್ತುವಿನೊಂದಿಗೆ ಆಟವಾಡುತ್ತಿದ್ದಾಗ ಅದು ಸ್ಫೋಟಿಸಿ ಮೂವರು ಮಕ್ಕಳು ಅಸುನೀಗಿದ್ದನ್ನು ಸ್ಮರಿಸಬಹುದು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net