

ಕಾರವಾರ:ಎಂಡೋಸಲ್ಫಾನ್ ಪೀಡಿತರಿಗೆ ಜಿಲ್ಲೆಯಲ್ಲಿ ಪ್ರತ್ಯೇಕ ಆಸ್ಪತ್ರೆ ತೆರೆಯುವುದು ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಆದಷ್ಟು ಶೀಘ್ರ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗಳ ಕುರಿತು ಸ್ಕೋಡ್‌ವೇಸ್ ಸ್ವಯಂಸೇವಾ ಸಂಸ್ಥೆ ನಡೆಸಿದ ಅಧ್ಯಯನ ವರದಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿ 1741 ಎಂಡೋಸಲ್ಫಾನ್ ಪೀಡಿತರು ಇದ್ದಾರೆ. 2014 ರ ನಂತರ ಅವರ ಮರು ಸಮೀಕ್ಷೆ ನಡೆದಿಲ್ಲ. ಅವರಿಗೆ ಈ ಹಿಂದೆ ಇದ್ದ ಸಂಚಾರಿ ಆಸ್ಪತ್ರೆ ಸೌಲಭ್ಯ ಸ್ಥಗಿತವಾಗಿದೆ. ನ್ಯಾಯಾಲಯದ ಆದೇಶವಿದ್ದರೂ ಅಂಕವಿಕಲ ವೇತನ ಬಿಟ್ಟರೆ ಬೇರೆ ಸೌಲಭ್ಯ ಸಿಗುತ್ತಿಲ್ಲ. ಅವರು ಕಟ್ಟಕಡೆಯ ವ್ಯಕ್ತಿಗಳಾಗಿದ್ದು, ಅವರಿಗೆ ಸೌಲಭ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದರು.
ವರದಿಯಲ್ಲೇನಿದೆ..? ಒಟ್ಟು ಸಮೀಕ್ಷೆಗೆ 1690 ಜನರಿದ್ದು, ಅವರಲ್ಲಿ 980 ಜನರು ಶೇ. 60 ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ ಹೊಂದಿದ್ದಾರೆ. 618 ಜನರು ಶೇ. 25 ರಿಂದ 59 ರಷ್ಟು ಅಂಗವೈಕಲ್ಯ ಹೊಂದಿದ್ದಾರೆ. ಒಟ್ಟಾರೆ ಪೀಡಿತದಲ್ಲಿ ಶೇ. 59.4 ರಷ್ಟು ಮಹಿಳೆಯರು, ಶೇ. 40.6 ರಷ್ಟು ಪುರುಷರಿದ್ದಾರೆ. ಪೀಡಿತರಲ್ಲಿ ಮಾನಸಿಕ ಕಾಯಿಲೆ ಇರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನೀರ್ನಾಳ ಗೃಂಥಿ, ಮಕ್ಕಳ ಹೃದಯ ಸಂಬಂಧಿ ಕಾಯಿಲೆಗಳು, ಕಣ್ಣು, ಮೂಳೆ ಸಂಬಂಧಿ ಕಾಯಿಲೆ ಇರುವವರು ಇದ್ದಾರೆ.
ಜಿಲ್ಲೆಯ ಶೇ. 80 ರಷ್ಟು ಎಂಡೊ ಪೀಡಿತರು ಚಿಕಿತ್ಸೆಗೆ ಉಡುಪಿ, ದಕ್ಷಿಣ ಕನ್ನಡಕ್ಕೆ ತೆರಳುತ್ತಿದ್ದಾರೆ. ಬಹುತೇಕ ಕುಟುಂಬಗಳು ತಮ್ಮ ಆದಾಯದ ಶೇ. 65 ಷ್ಟನ್ನು ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಶೇ. 60 ರಷ್ಟು ಜನ ಅತಂತ್ರ ಉದ್ಯೋಗಸ್ಥರಾಗಿದ್ದು, ನಿರ್ದಿಷ್ಟ ದುಡಿಮೆ ಇಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಸಲಹೆಗಳು: 60 ಕ್ಕಿಂತ ಹೆಚ್ಚು ಬಾಧೆಪಟ್ಟವರಿಗೆ ಶೇ. 24*6 ಮಾದರಿಯ ನಿಗಾ ಕೇಂದ್ರ ತೆರೆಯಬೇಕು. ಎಂಡೋಸಲ್ಫಾನ್ ದಿಂದ ಉಂಟಾದ ಸಮಸ್ಯೆ ವಂಶಪಾರಂಪರ‍್ಯವಾಗಿ ಮುಂದುವರಿಯುತ್ತಿದ್ದು. ಬಾಧಿತ ಪ್ರದೇಶಗಳಲ್ಲಿ ಗರ್ಭಧಾರಣೆಗೂ ಪೂರ್ವ ದಂಪತಿಗೆ ಅಗತ್ಯ ಮುಂಜಾಗೃತೆ ಸಮಾಲೋಚನೆ ನಡೆಸುವ ವ್ಯವಸ್ಥೆಯಾಗಬೇಕು. ಎಂಡೋಸಲ್ಫಾನ್ ಬಾಧಿತರಿಗೆ ಜನಿಸುವ ಮಕ್ಕಳ ಮಾಹಿತಿಯನ್ನು ಇಲಾಖೆಯಲ್ಲಿ ಪ್ರತ್ಯೇಕವಾಗಿ ನಿರ್ವಹಿಸಬೇಕು. ಎಂಡೋಸಲ್ಫಾನ್ ಪೀಡಿತರ ಕುಟುಂಬಕ್ಕೆ ನಿರಂತರ ವೈದ್ಯಕೀಯ ತಪಾಸಣೆ ನಡೆಸಬೇಕು. ಅವರಿಗೆ ಅಗತ್ಯವಿರುವ ಎಲ್ಲ ಅಂಗವಿಕಲ ಸ್ನೇಹಿ ಸಲಕರಣೆಗಳನ್ನು ವಿತರಿಸಬೇಕು. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿಯೇ ಹೆಚ್ಚಿನ ಪಾಲಕರು ಇರುತ್ತಿದ್ದು, ಅವರ ಆದಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸೇರಿ ಹಲವು ಸಲಹೆಗಳನ್ನು ವರದಿಯಲ್ಲಿ ನೀಡಲಾಗಿದೆ.
ಕುವೆಂಪು ವಿವಿ ವಿಶ್ರಾಂತ ಕುಲಪತಿ ಹಿ.ಚಿ.ಬೋರಲಿಂಗಯ್ಯ ಸಚಿವರಿಗೆ ವರದಿ ಸಲ್ಲಿಸಿದರು. ಕೆ.ಎನ್.ಹೊಸಮನಿ, ಶ್ರೀನಿವಾಸಮೂರ್ತಿ, ಡಾ.ವೆಂಕಟೇಶ ನಾಯ್ಕ, ಎ.ಎಸ್.ಪ್ರಭಾಕರ ಈ ಸಂದರ್ಭದಲ್ಲಿದ್ದರು.
ಏನಿದು ಎಂಡೋಸಲ್ಫಾನ್ ಸಮಸ್ಯೆ
1954 ರ ಹೊತ್ತಿಗೆ ಜರ್ಮನಿಯಲ್ಲಿ ಬೆಳೆಗಳಿಗೆ ಬಳಕೆಯಾಗುತ್ತಿದ್ದ ಎಂಡೋಸಲ್ಫಾನ್ ಎಂಬ ಕ್ರಿಮಿನಾಶಕ 1960 ರ ಹೊತ್ತಿಗೆ ಭಾರತ ಪ್ರವೇಶಿಸಿತು. ಕೇರಳ, ಹಾಗೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗೋಡಂಬಿ ಗಿಡಗಳಿಗೆ 1980 ರಿಂದ 2000 ವರೆಗೂ ಹೆಲಿಕಾಫ್ಟರ್ ಮೂಲಕ ಹಾಗೂ ಕೈ ಮೂಲಕ ಎಂಡೋಸಲ್ಫಾನ್ ಕ್ರಿಮಿನಾಶಕ ಸಿಂಪಡಿಸಲಾಯಿತು. ಆದರೆ, ಅದರಿಂದ ಹಲವು ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವುದು ಅರಿವಿಗೆ ಬರಲು 40 ವರ್ಷ ಕಳೆದವು. ಕೇರಳವೊಂದರಲ್ಲೇ 779 ಜನ ಇದಕ್ಕೆ ಬಲಿಯಾಗಿದ್ದು ಗಮನಕ್ಕೆ ಬಂದ ನಂತರ 2006 ರಲ್ಲಿ ಕೇರಳ ಸರ್ಕಾರ ಎಂಡೋಸಲ್ಫಾನ್ ನಿಷೇಧಿಸಿತು. 2011 ರಲ್ಲಿ ಕರ್ನಾಟಕ ಸರ್ಕಾರ ಇದನ್ನು ನಿಷೇಧಿಸಿತು. ಆದರೆ, ಆಗಲೇ ಸಮಯ ಮಿಂಚಿತ್ತು. ಎಂಡೋಸಲ್ಫಾನ್ ಕೀಟನಾಶಕದ ನೇರ ಪರಿಣಾಮಕ್ಕೆ ಒಳಗಾದವರು ಮಾತ್ರವಲ್ಲ ಅವರ ಮಕ್ಕಳು, ಮೊಮ್ಮಕಳೂ ಅಂಗವಿಕಲರಾಗಿ ಹುಟ್ಟುತ್ತಿದ್ದಾರೆ. ನಿತ್ಯ ನರಕ ಅನುಭವಿಸುತ್ತಿದ್ದಾರೆ. ಉತ್ತರ ಕನ್ನಡದಲ್ಲೇ ಅಂಥ 2 ಸಾವಿರ ಜನರಿದ್ದಾರೆ.