ಲೋಕಸಭೆಯಲ್ಲಿ ಮಹಿಳಾ ಸಂಸದೆಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್? ಸ್ಪೀಕರ್​ಗೆ ದೂರು

https://www.vijayavani.net/tamil-nadu-teacher-assaulted-thrashed-with-slippers-after-hitting-student
Published on

ದೆಹಲಿ: ಲೋಕಸಭೆಯೊಳಗೆ ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ನೀಡಿ ಮಹಿಳಾ ಸಂಸದರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಇತರ ಬಿಜೆಪಿ ಮಹಿಳಾ ಸಂಸದರು ಗುರುವಾರ ಸ್ಪೀಕರ್ ಓಂ ಬಿರ್ಲಾ ಅವರಿಗೆ ಔಪಚಾರಿಕ ದೂರು ನೀಡಿದ್ದಾರೆ.

139 ದಿನಗಳ ನಂತರ ಇಂದು ಸದನದಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಿದ ರಾಹುಲ್ ಭಾಷಣ ಮುಗಿಸಿ ಸಂಸತ್ತಿನಿಂದ ನಿರ್ಗಮಿಸಿದ್ದ, ಬಳಿಕ ಮಾತನಾಡಲು ಅವಕಾಶ ಪಡೆದ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ವಿರುದ್ಧ ಆರೋಪ ಮಾಡಿದ್ದಾರೆ.

ರಾಹುಲ್​ ಸದನದಿಂದ ಹೊರನಡೆಯುವ ವೇಳೆ ಫ್ಲೈಯಿಂಗ್ ಕಿಸ್ ನೀಡಿದ್ದು, ಅನೇಕ ಮಹಿಳಾ ಸಂಸದರು ಆ ಕಡೆ ಕುಳಿತಿದ್ದರು. ರಾಹುಲ್ ಅನುಚಿತವಾಗಿ ವರ್ತಿಸಿದ್ದು, ಸ್ತ್ರೀದ್ವೇಷಿ ಪುರುಷ ಮಾತ್ರ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಮಹಿಳೆಯರ ಬಗೆಗಿನ ಭಾವನೆಯನ್ನು  ರಾಹುಲ್ ಇಂದು ತೋರಿಸಿಕೊಟ್ಟಿದ್ದಾರೆ. ಇಂತಹ ಉದಾಹರಣೆಯನ್ನು ತಾವು ಹಿಂದೆಂದೂ ನೋಡಿರಲಿಲ್ಲ. ಈ ಘಟನೆಯು ಮಹಿಳೆಯರ ಬಗ್ಗೆ ರಾಹುಲ್​ ಏನು ಯೋಚಿಸುತ್ತಾರೆ ಎಂಬುದನ್ನು ತೋರಿಸುತ್ತಿದ್ದು, ಇದು ಅಶ್ಲೀಲವಾದದ್ದಾಗಿದೆ ಎಂದು ಸಚಿವೆ ಇರಾನಿ ಹೇಳಿದ್ದಾರೆ.

ರಾಹುಲ್ ವಿರುದ್ಧ ಮಹಿಳಾ ಸಂಸದರ ದೂರು:
ಫ್ಲೈಯಿಂಗ್ ಕಿಸ್ ಬಗ್ಗೆ ಸದ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಬಿಜೆಪಿ ಮಹಿಳಾ ಸಂಸದರು ರಾಹುಲ್ ವಿರುದ್ಧ ಸ್ಪೀಕರ್‌ಗೆ ದೂರು ನೀಡಿದ್ದಾರೆ. ಕೇರಳದ ವಯನಾಡಿನ ಸಂಸದರಾದ ಶ್ರೀ ರಾಹುಲ್ ಗಾಂಧಿಯವರು ಸದನದಲ್ಲಿ ಸದನದಲ್ಲಿ ಘನತೆವೆತ್ತ ಮಹಿಳಾ ಸದಸ್ಯೆಯರಿಗೆ ಅವಮಾನ ಮಾಡಿದ್ದಲ್ಲದೆ, ಈ ಮಹಾ ಸದನದ ಘನತೆಗೆ ಕುಂದು ತಂದಿರುವ ಇಂತಹ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸದನದ ಎಲ್ಲಾ ಮಹಿಳಾ ಸದಸ್ಯೆಯರಿಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿ ಹೊರ ನಡೆದಿದ್ದು, ಅಸಭ್ಯ ಮತ್ತು ಅನುಚಿತ ವರ್ತನೆಯಾಗಿದೆ. ಭಾರತ ಲೋಕಸಭೆಯ ಇತಿಹಾಸದಲ್ಲಿ ಈ ರೀತಿ ನಡೆದಿಲ್ಲ, ಇದು ಯಾವ ರೀತಿಯ ವರ್ತನೆ?, ಅವರು ಎಂತಹ ನಾಯಕ?, ಅದಕ್ಕಾಗಿಯೇ ನಾವು ಸಿಸಿಟಿವಿ ದೃಶ್ಯಗಳನ್ನು ತೆಗೆದುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಸಭಾ ಸ್ಪೀಕರ್‌ಗೆ ದೂರು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net