ದಕ್ಷಿಣದಲ್ಲಿ ಬಲಿಷ್ಠರಿಗೆ ಶೋಧ: ಸಮೀಕ್ಷಾ ವರದಿ ಎತ್ತಿ ತೋರಿಸಿದ ಕೊರತೆ ಸರಿದೂಗಿಸುವ ತಂತ್ರಗಾರಿಕೆ

BJP
Published on

ಬೆಂಗಳೂರು: ದಕ್ಷಿಣ ಕರ್ನಾಟಕದಲ್ಲಿ ಪಕ್ಷದ ಸಂಘಟನೆ ಬಲವರ್ಧನೆ, ವರ್ಚಸ್ಸು ವೃದ್ಧಿ ಜತೆಗೆ ಈ ಪರಿಶ್ರಮದ ಫಲ ಪಡೆಯಲು ಶಕ್ತ, ಬಲಿಷ್ಠ ಅಭ್ಯರ್ಥಿಗಳಿಗಾಗಿ ಆಡಳಿತರೂಢ ಬಿಜೆಪಿ ಶೋಧ ನಡೆಸಿದೆ. ಸ್ವಕ್ಷೇತ್ರದ ಜತೆಗೆ ಆಸುಪಾಸಿನ ಕ್ಷೇತ್ರಗಳ ಮೇಲೂ ಪ್ರಭಾವಬೀರಿ ಹಲವು ಮುಖಂಡರನ್ನು ಕರೆತರುವ, ವೋಟುಗಳ ಗೊಂಚಲು ಪಕ್ಷಕ್ಕೆ ಖಾತರಿಪಡಿಸುವವರ ಮೇಲೆ ಕಣ್ಣಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಮೊದಲ ಸುತ್ತಿನ ಕಾರ್ಯಕ್ರಮದ ಬಳಿಕ ಹಳೇ ಮೈಸೂರು ಪ್ರಾಂತದಲ್ಲಿ ಸೆಳೆಯುವ ಕಸರತ್ತಿಗೆ ಇನ್ನಷ್ಟು ಕಸುವು ತುಂಬಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಕೆಲವು ಪ್ರಭಾವಿ ಮುಖಂಡರೊಂದಿಗೆ ಒಂದೆರಡು ಸುತ್ತಿನ ಮಾತುಕತೆಗಳಾಗಿವೆ. ಕಾದು ನೋಡಲು ಬಯಸಿದವರ ಜತೆಗೆ ಹಿರಿಯ ನಾಯಕರ ಹಂತದಲ್ಲಿ ಮತ್ತೊಮ್ಮೆ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತಿದ್ದು, ಪಕ್ಷಕ್ಕೆ ಸೇರಬಯಸಿದವರ ಪಟ್ಟಿಯೂ ಸಿದ್ಧವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದು ಮತ್ತೆ ಅಧಿಕಾರದ ಗದ್ದುಗೆ ಏರುವುದಕ್ಕೆ ಬೇಕಾದ ತಯಾರಿ ಭಾಗವಾಗಿ ಕ್ಷೇತ್ರಗಳನ್ನು ವಿಂಗಡಿಸ ಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಕಾರ್ಯಕರ್ತರ ಪಡೆಯಿದ್ದರೂ ಮುನ್ನಡೆಸುವ ಮುಖಂಡರ ಅಭಾವದ ಕಾರಣಕ್ಕೆ ಪಕ್ಷದ ಸಾಧನೆ ಸುಮಾರಾಗಿರುವುದು ಹಿಂದಿನ ಚುನಾವಣಾ ಫಲಿತಾಂಶಗಳು ಸಾರುತ್ತವೆ.

ಸರಿದೂಗಿಸುವ ತಂತ್ರಗಾರಿಕೆ: ಅಲ್ಲದೆ, ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ ಪಕ್ಷದ ದುರ್ಬಲವಾಗಿರುವ ಕ್ಷೇತ್ರಗಳ ಸಂಖ್ಯೆಯೂ ಇದೇ ಭಾಗದಲ್ಲಿ ಹೆಚ್ಚಿದ್ದು, ಕೊರತೆ ಪ್ರಮುಖಾಂಶಗಳನ್ನು ವಿವರಿಸಿದೆ. ಹಿನ್ನಡೆಗೆ ಕಾರ್ಯ-ಕಾರಣಗಳ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ದುಡಿಯುವ ಪಡೆಯನ್ನು ಮುನ್ನಡೆಸಿ ಗೆಲುವಿನ ದಡ ಸೇರಿಸುವ ಸಮರ್ಥ ನಾಯಕರ ಸೇರಿಸಿಕೊಳ್ಳಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೊರತೆ ಸರಿದೂಗಿಸುವ ತಂತ್ರಗಾರಿಕೆ ಭಾಗವಾಗಿ ಬೇರೆ ಪಕ್ಷಗಳ, ವಿವಿಧ ಕ್ಷೇತ್ರಗಳ ರಾಜಕೀಯ ಆಸಕ್ತ ಪ್ರಭಾವಿ ಮುಖಂಡರಿಗೆ ಪಕ್ಷ ಗಾಳ ಹಾಕಿದ್ದು, ತೆರೆಮರೆಯಲ್ಲಿ ಮನವೊಲಿಸುತ್ತಿದೆ. ‘ಆಪರೇಷನ್ ಕಮಲ’ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕೆ ಮಾತ್ರವಲ್ಲ, ಮತ್ತೊಮ್ಮೆ ಅಧಿಕಾರಕ್ಕೆ ಬರುವ ಗುರಿಯನ್ನೂ ಹೊಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಕೆಲವು ಮುಖಂಡರಿಗೆ ಪಕ್ಷಕ್ಕೆ ಸೇರಲು ಒಲವಿದ್ದರೂ ಕಾದು ನೋಡುತ್ತಿದ್ದಾರೆ. ಬೆಂಬಲಿಗರು ಮತ್ತು ಅಭಿಮಾನಿಗಳು, ಕ್ಷೇತ್ರದ ಪರಿಸ್ಥಿತಿ, ಭವಿಷ್ಯದ ಬಗ್ಗೆ ಚಿಂತನೆ ನಡೆಸಿದ್ದಾರೆ. ಸ್ವಪಕ್ಷದಲ್ಲೇ ಅಪಸ್ವರ ಏಳಬಹುದು ಕಾರಣಕ್ಕೆ ಅನ್ಯಪಕ್ಷಗಳ ಮುಖಂಡರ ಸೇರ್ಪಡೆಗೆ ರಾಜ್ಯ ನಾಯಕರು ಹಿಂದೇಟು ಹಾಕುತ್ತಿದ್ದು, ಮೂರ್ನಾಲ್ಕು ಕ್ಷೇತ್ರಗಳಲ್ಲಿ ಈ ಸಮಸ್ಯೆಯಿದೆ. ಸದ್ಯಕ್ಕೆ ಜಾರಿಯಲ್ಲಿರುವ ಮಾತುಕತೆ, ಪ್ರಯತ್ನಗಳನ್ನು ಗಮನಿಸಿದರೆ ಹಳೇ ಮೈಸೂರು ಭಾಗದ 10-12 ಕ್ಷೇತ್ರಗಳಲ್ಲಿ ವಲಸಿಗರ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳಲ್ಲಿ ಕಡಿಮೆ ಮತ, ಸೋತ ಕ್ಷೇತ್ರಗಳಲ್ಲಿ ಕಳಪೆ ಸಾಧನೆ ಮಾಡಿದ ಬೂತ್​ಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಲೋಕಸಭೆ ಕ್ಷೇತ್ರದಲ್ಲಿ ತಲಾ 100 ಇಂತಹ ಬೂತ್​ಗಳನ್ನು ಪಟ್ಟಿ ಮಾಡಿದ್ದು, ಹಿನ್ನಡೆ ಕಾರಣಗಳನ್ನು ಹುಡುಕಿ, ಅಧ್ಯಯನ ನಡೆಸಲಾಗುವುದು. ಸರ್ಕಾರ, ಪಕ್ಷ, ಅಭ್ಯರ್ಥಿ, ಮುಖಂಡ, ಕಾರ್ಯಕರ್ತರ ಹೀಗೆ ಎಲ್ಲ ಆಯಾಮಗಳಲ್ಲಿ ವಿಶ್ಲೇಷಿಸಿ ಪರಿಹಾರ ಕಂಡುಕೊಳ್ಳಲು ವರಿಷ್ಠರು ಯೋಚಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿ, ಸಂಗ್ರಹಿಸಿರುವ ಮಾಹಿತಿ, ದತ್ತಾಂಶಗಳ ಬಗ್ಗೆ ಹಾಸನ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

9ರಂದು ಹಾಸನದಲ್ಲಿ ವಿಶೇಷ ಸಭೆ: ಹಾಸನದಲ್ಲಿ ಜು.9ಕ್ಕೆ ನಿಗದಿಯಾಗಿದ್ದು, ಸಂಘಟನಾ ಕಾರ್ಯಯೋಜನೆ ಪ್ರಗತಿ ಪರಾಮರ್ಶೆ ಪ್ರಧಾನ ಕಾರ್ಯಸೂಚಿ ಯಾಗಿದೆ. ವಿಭಾಗ ಪ್ರಭಾರಿ, ಸಹಪ್ರಭಾರಿಗಳಿಂದ ಆಯಾ ಜಿಲ್ಲಾ ಸಂಘಟನೆ ಚಟುವಟಿಕೆಗಳು, ಕೈಗೊಂಡ ಕ್ರಮಗಳು ಬಗ್ಗೆ ರ್ಚಚಿಸಿ ಮುಂದಿನ ಕಾರ್ಯಯೋಜನೆ ರೂಪುರೇಷೆ ಅಂತಿಮವಾಗಲಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮಾತ್ರವಲ್ಲ, 2024ರ ಲೋಕಸಭೆ ಸಾರ್ವತ್ರಿಕ ಚುನಾವಣೆ ಪೂರ್ವ ಭೂಮಿಕೆ ಸಜ್ಜುಗೊಳಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net