

ಕಲಬುರಗಿ: ಆಯಿಲ್ ಟ್ಯಾಂಕರ್ ಮತ್ತು ಸ್ವಿಫ್ಟ್ ಕಾರೊಂದರ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬರ ತೀವ್ರ ಗಾಯಗೊಂಡಿದ್ದು ಪರಿಸ್ಥಿತಿ ಗಂಭೀರವಾಗಿದೆ. ಕಲಬುರಗಿ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ.
ಕಲಬುರಗಿ ಹೊರವಲಯದ ಶಹಬಾದ್ ರಸ್ತೆಯ ಶೆಟ್ಟಿ ಕಾಲೇಜು ಬಳಿ ಕಾರು-ಟ್ಯಾಂಕರ್ ಡಿಕ್ಕಿ ಆಗಿವೆ. ಅಪಘಾತದ ತೀವ್ರತೆಗೆ ಕಲಬುರಗಿ ನಿವಾಸಿಗಳಾದ ಅಮಿತ್ (21), ಆದಶ್೯ (22) ಎಂಬಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮಹಾಂತೇಶ್ ಎಂಬವರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುವನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಾರು ಕಲಬುರಗಿಯಿಂದ ಶಹಬಾದ್‌ನತ್ತ ಹೊರಟಿತ್ತು. ಟ್ಯಾಂಕರ್ ಶಹಬಾದ್ನಿಂದ ಕಲಬುರಗಿ ಕಡೆಗೆ ಬರುತ್ತಿತ್ತು. ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಲಬುರಗಿ ಸಂಚಾರಿ-2 ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.