ಪಶ್ಚಿಮ ಬಂಗಾಳದಲ್ಲಿ ಹೈ ಡ್ರಾಮ! ಟಿಎಂಸಿ ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಬಿಜೆಪಿ ಸಂಸದನ ಪತ್ನಿ ಟಿಎಂಸಿ ಸೇರ್ಪಡೆ!

bj[p
Published on

ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಇನ್ನೂ ತಿಂಗಳುಗಳು ಬಾಕಿಯಿವೆ. ಈಗಾಗಲೇ ಪಕ್ಷಗಳು ಪ್ರಚಾರ ಸಭೆಗಳನ್ನು ಆರಂಭಿಸಿದ್ದು, ನಾಯಕರುಗಳ ಪಕ್ಷಾಂತರವೂ ಆರಂಭವಾಗಿದೆ. ಇತ್ತೀಚೆಗಷ್ಟೇ ಟಿಎಂಸಿ ಪಕ್ಷದ ಹಲವು ಶಾಸಕರು ಪಕ್ಷಕ್ಕೆ ಗುಡ್​ ಬೈ ಹೇಳಿ ಬಿಜೆಪಿ ಸೇರಿದ್ದಾರೆ. ಇದೀಗ ಅದರ ಬೆನ್ನಲ್ಲೇ ಮತ್ತೊಂದು ರೋಚಕ ಪಕ್ಷಾಂತರ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಬಿಜೆಪಿ ಸಂಸದರೊಬ್ಬರ ಪತ್ನಿ ಟಿಎಂಸಿ ಸೇರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಬಿಜೆಪಿ ಸಂಸದ ಸೌಮಿತ್ರ ಖಾನ್​ ಅವರ ಪತ್ನಿ ಸುಜಾತಾ ಮೊಂಡಾಲ್​ ಖಾನ್​ ಅವರು ಸೋಮವಾರ ಟಿಎಂಸಿ ಸೇರಿದ್ದಾರೆ. ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವವಿಲ್ಲ. ಅದೇ ಕಾರಣದಿಂದಾಗಿ ನಾನು ಟಿಎಂಸಿ ಸೇರ್ಪಡೆಗೊಳ್ಳುತ್ತಿದ್ದೇನೆ. ಇಲ್ಲಿ ಹೆಣ್ಣಿಗೆ ಗೌರವವಿದೆ ಎಂದು ಟಿಎಂಸಿ ಸೇರಿರುವ ಸುಜಾತ ಹೇಳಿದ್ದಾರೆ.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆನ್ನುವುದೇ ಗೊತ್ತಿಲ್ಲ. ಅಲ್ಲಿ ಆರು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದರೆ, 14 ಉಪಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಯಾರಾದರೂ ನನ್ನನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಕೇಳಿದರೆ ನನ್ನ ಬಳಿ ಉತ್ತರವೇ ಇಲ್ಲ ಎಂದು ಅವರು ದೂರಿದ್ದಾರೆ. ಪತ್ನಿಯಂತೆ ಸಂಸದ ಸೌಮಿತ್ರ ಅವರೂ ಟಿಎಂಸಿ ಸೇರಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದೆ ಆಗುವುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ.

ಸೌಮಿತ್ರ ಮತ್ತು ಸುಜಾತ ಅವರ ದಾಂಪತ್ಯದಲ್ಲಿ ಬಿರುಕಿದ್ದು, ಸದ್ಯದಲ್ಲೇ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡಿದೆ. ಆದರೆ ಈ ಕುರಿತಾಗಿ ಸಂಸದರು ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net