

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಮರಣೋತ್ತರ ವರದಿ ಕೂಡ ಬಂದಿದೆ. ಹೀಗಿದ್ದರೂ ಇದರಲ್ಲೇನೋ ಷಡ್ಯಂತ್ರ ಅಡಗಿದೆ ಎಂಬ ಅನುಮಾನ ಹಲವರಲ್ಲಿದೆ.
ಸುಶಾಂತ್ ಸಿಂಗ್ ಚಿಕ್ಕಪ್ಪ ಹಾಗೂ ಹಲವು ರಾಜಕಾರಣಿಗಳು, ಗಣ್ಯರು, ಸೆಲೆಬ್ರಿಟಿಗಳು ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಇದೆಲ್ಲದರ ನಡುವೆ, ಸಾಕ್ಷ್ಯಾಧಾರಗಳು ನಾಶವಾದ ಬಳಿಕ ಸುಶಾಂತ್ ಸಾವಿನ ತನಿಖೆ ನಡೆಸಲಾಗುತ್ತದೆಯೇ ಎಂದು ಬಿಜೆಪಿ ಸಂಸದೆ ರೂಪಾ ಗಂಗೂಲಿ ಪ್ರಶ್ನಿಸಿದ್ದಾರೆ. ಅವರ ಈ ಅನುಮಾನಕ್ಕೂ ಕಾರಣವೂ ಇಲ್ಲದಿಲ್ಲ.
ಸುಶಾಂತ್ ಫೋನ್ನ್ನು ಬೇರೆ ಯಾರಾದರೂ ಬಳಸುತ್ತಿದ್ದಾರಾ? ಎಂದು ರೂಪಾ ಗಂಗೂಲಿ ಕೇಳಿದ್ದಾರೆ. ಏಕೆಂದರೆ, ಕೆಲ ದಿನಗಳಿಂದ ಸುಶಾಂತ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಆತ ಫಾಲೋ ಮಾಡುತ್ತಿದ್ದವರನ್ನು ಅನ್ಫಾಲೋ ಮಾಡಲಾಗುತ್ತಿದೆ. ಇದು ಹೇಗೆ ಸಾಧ್ಯ? ಆತನ ಖಾತೆಯನ್ನು ಬೇರಾರೋ ನಿರ್ವಹಿಸುತ್ತಿರುವುದರ ಬಗ್ಗೆ ಸುದ್ದಿ ಕೇಳಿದ್ದೆ. ಇದರಿಂದ ಶಾಕ್ ಆಗಿತ್ತು. ಈಗ ಆತನ ಖಾತೆಯನ್ನು ಇನ್ನೊಬ್ಬರು ನಿರ್ವಹಿಸುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಇದು ಸಾಕ್ಷ್ಯಾಧಾರಗಳ ನಾಶವಲ್ಲದೆ ಬೇರೇನು ಎಂದು ಕೇಳಿದ್ದಾರೆ.
ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಈ ಹಿಂದೆಯೇ ರೂಪಾ ಗಂಗೂಲಿ ಒತ್ತಾಯಿಸಿದ್ದರು. ಆದರೆ, ಸಿಬಿಐನವರು ಎಲ್ಲ ಸಾಕ್ಷ್ಯಗಳು ನಾಶವಾದ ಬಳಿಕ ಪ್ರಕರಣದ ತನಿಖೆ ನಡೆಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಆತನ ಇನ್ಸ್ಟಾಗ್ರಾಂ ಅಕೌಂಟ್ನ ಫಾಲೋವರ್ಗಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿರುವ ಸ್ಕ್ರೀನ್ಶಾಟ್ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಮತ್ತಷ್ಟು ಅನುಮಾನಗಳಿಗೆ ಪುಷ್ಠಿ ನೀಡಿದೆ.
ಇಲ್ಲಿದೆ ರೂಪಾ ಗಂಗೂಲಿ ಹೇಳಿಕೆಯ ಲಿಂಕ್....