

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಹಿಂದಿಯ ಜನಪ್ರಿಯ ಧಾರಾವಾಹಿ ಕ್ರೈಂ ಪಾಟ್ರೋಲ್ ನಟಿ ಪ್ರೇಕ್ಷಾ ಮೆಹ್ತಾ ಸಾವಿನ ಬಳಿಕ, ಮತ್ತೊಬ್ಬ ನಟಿ ಸಿಯಾ ಕಕ್ಕರ್ ಅದೇ ಹಾದಿ ತುಳಿದಿದ್ದಾಳೆ.
ಟಿಕ್ ಟಾಕ್ನಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದ ನೃತ್ಯಗಾರ್ತಿ, ನಟಿ ಸಿಯಾ ಕಕ್ಕರ್ ಗುರುವಾರ (ಜೂನ್ 25) ಪ್ರೀತ್ ವಿಹಾರದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಈಕೆಯ ಸಾವಿನ ವಿಷಯವನ್ನು ಮ್ಯಾನೇಜರ್ ಅರ್ಜುನ್ ಸರೀನ್ ಖಚಿತಪಡಿಸಿದ್ದಾರೆ.
ಸಿಯಾ ಕಕ್ಕರ್ ಆತ್ಮಹತ್ಯೆಗೆ ವೈಯಕ್ತಿಕ ವಿಚಾರಗಳೇ ಕಾರಣವಾಗಿರಬೇಕು. ಏಕೆಂದರೆ, ಕೆಲಸದ ವಿಚಾರದಲ್ಲಿ ಆಕೆ ಉತ್ತಮವಾಗಿದ್ದಳು ಎಂದು ಅರ್ಜುನ್ ಹೇಳಿದ್ದಾರೆ. ಸಿಯಾಳ ಎಲ್ಲ ಕೆಲಸ ಹಾಗೂ ಜಾಹೀರಾತುಗಳ ನಿರ್ವಹಣೆಯನ್ನು ಅರ್ಜುನ್ ನೋಡಿಕೊಳ್ಳುತ್ತಿದ್ದರು.
ಹೊಸ ಯೋಜನೆಯೊಂದರ ವಿಚಾರವಾಗಿ ಆಕೆಯ ಜತೆ ಕಳೆದ ರಾತ್ರಿಯಷ್ಟೇ ಚರ್ಚಿಸಿದ್ದೆ. ಆಕೆ ಎಂದಿನಂತೆ ಸಹಜವಾಗಿಯೇ ಮಾತನಾಡಿದ್ದಳು. ಆಕೆ ಪ್ರತಿಭಾವಂತೆಯಾಗಿದ್ದಳು ಎಂದು ಅರ್ಜುನ್ ಹೇಳಿದ್ದಾರೆ.
ಸಿಯಾ ಕಕ್ಕರ್ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಳು. ಟಿಕ್ಟಾಕ್, ಇನ್ಸ್ಟಾಗ್ರಾಂ, ಸ್ನ್ಯಾಪ್ ಚಾಟ್ ಯೂಟ್ಯೂಬ್ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಳು. ಟಿಕ್ಟಾಕ್ನಲ್ಲಿ ನೃತ್ಯದ ಮೂಲಕ ಹೆಚ್ಚು ಜನಪ್ರಿಯತೆ ಹೊಂದಿದ್ದ ಈಕೆಗೆ 11 ಲಕ್ಷ ಫಾಲೋವರ್ಗಳಿದ್ದರು.
ಈಕೆಯ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಕುಟುಂಬವು ಪೊಲೀಸ್ ತನಿಖೆಗೆ ಒತ್ತಾಯಿಸಿದೆ.