

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಎಲ್ಲ ಭಾಗದಿಂದಲೂ ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಬಿಜೆಪಿ ವತಿಯಿಂದ ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನ ಆರಂಭಿಸಲಾಗಿದ್ದು, ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯವಾದ ದೇಗುಲ ನಿರ್ಮಾಣವಾಗುತ್ತಿದೆ. ಭಾರತೀಯರ ಕನಸು ನನಸಾಗುತ್ತಿದೆ. ಸಾಕಷ್ಟು ವರ್ಷಗಳ ವಿವಾದಕ್ಕೆ ತೆರೆ ಬಿದ್ದಿದೆ. ಇದು ಏಕತೆ ಮತ್ತು ಶಾಂತಿಗೆ ದಾರಿ ಮಾಡಿಕೊಡುತ್ತದೆ. ಈ ಪ್ರಯತ್ನದಲ್ಲಿ ನನ್ನ ಮತ್ತು ನನ್ನ ಕುಟುಂಬದಿಂದ ಒಂದು ಸಣ್ಣ ಕೊಡುಗೆಯಾಗಿ ಈ ಹಣವನ್ನು ಕೊಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. 10, 100, 1000 ರೂಪಾಯಿಗಳ ಕೂಪನ್ ನೀಡಿ ಮನೆ ಮನೆಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಒಂದು ಸಾವಿರ ರೂಪಾಯಿಗೂ ಅಧಿಕ ಹಣ ನೀಡುವವರ ಬಳಿ ಚೆಕ್ ರೂಪದಲ್ಲಿ ನಿಧಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)