ಕುಮಾರ್​ ಬಂಗಾರಪ್ಪ-ಕಾಗೋಡು ತಿಮ್ಮಪ್ಪ ಭೇಟಿ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಹೀಗೊಂದು ಚರ್ಚೆ ಶುರು…

Kumara Bangarappa Kagodu Thimmappa
Published on

ಶಿವಮೊಗ್ಗ: ಸೊರಬ ಕ್ಷೇತ್ರದಿಂದ ಸಹೋದರನ ವಿರುದ್ಧವೇ ಸೋಲುಂಡಿರುವ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಕಾಂಗ್ರೆಸ್​ ಪಾಳಯಕ್ಕೆ ಜಿಗಿಯಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭ್ಯರ್ಥಿಯಾಗಿ ಸೊರಬ ಕ್ಷೇತ್ರದಿಂದ ಕುಮಾರ್​ ಬಂಗಾರಪ್ಪ ಕಣಕ್ಕಿಳಿದಿದ್ದರು. ಅವರ ಪ್ರತಿಸ್ಪರ್ಧಿಯಾಗಿ ಅವರ ಸ್ವಂತ ಸಹೋದರ ಮಧು ಬಂಗಾರಪ್ಪ ಅವರು ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೇ 13ರಂದು ಪ್ರಕಟವಾದ ಫಲಿತಾಂಶದಲ್ಲಿ ಕುಮಾರ್​ ಬಂಗಾರಪ್ಪ ಅವರು ಸಹೋದರನ ವಿರುದ್ಧವೇ ಹೀನಾಯ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ.

ಸೂಕ್ತ ಅಭ್ಯರ್ಥಿಗಳ ಹುಡುಕಾಟ

ಇದೀಗ ಬಿಜೆಪಿ ಬಿಟ್ಟು ಆಡಳಿತಾರೂಢ ಕಾಂಗ್ರೆಸ್​ ಕಡೆ ಮುಖ ಮಾಡಿದ್ದಾರೆನ್ನಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕುಮಾರ್​ ಬಂಗಾರಪ್ಪ ಅವರು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಇತ್ತ ಕಾಂಗ್ರೆಸ್​ ಸಹ ಲೋಕಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಕುಮಾರ್​ ಬಂಗಾರಪ್ಪ ಹೆಸರು ಮುನ್ನೆಲೆಗೆ ಬಂದಿದೆ.

ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ

ಬಿಜೆಪಿಯಲ್ಲಿದ್ದರೆ ಉತ್ತಮ ಸ್ಥಾನಮಾನ ಸಿಗುವುದು ಅನುಮಾನ ಎಂದು ಭಾವಿಸಿ, ಕಾಂಗ್ರೆಸ್​ನತ್ತ ಕುಮಾರ್​ ಬಂಗಾರಪ್ಪ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಕಾಂಗ್ರೆಸ್ ಸೇರ್ಪಡೆಗೊಂಡರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಕಾಗೋಡು ತಿಮ್ಮಪ್ಪ ಭೇಟಿ

ಕುಮಾರ್‌ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಉಹಾಪೋಹಗಳಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಕುಮಾರ್‌ ಬಂಗಾರಪ್ಪ ಭೇಟಿ ಮಾಡಿರುವ ಫೋಟೋಗಳು ಪುಷ್ಠಿ ನೀಡಿವೆ. ತಿಮ್ಮಪ್ಪ ಅವರೊಂದಿಗೆ ಕುಮಾರ್​ ಬಂಗಾರಪ್ಪ ವೈಯಕ್ತಿಕವಾಗಿ ಚರ್ಚೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net