ಗಾಸಿಪ್​ಗೊಂದು ಫುಲ್​ಸ್ಟಾಪ್!; ಗಾಸಿಪ್ ಮಾಡಲು ಕಾರಣ?

Gossip
Published on

| ಡಾ. ಕೆ.ಎಸ್.ಚೈತ್ರಾ

ಮೂಲೆ ಮನೆ ಮಾಲಾ ನಿನ್ನೆ ರಾತ್ರಿಯಿಂದ ಮನೆಗೆ ಬಂದಿಲ್ಲವಂತೆ; ಅಯ್ಯೋ! ನಿಮಗೆ ಗೊತ್ತಿಲ್ವಾ, ಅವ್ಳಿಗೆ ಬಾಯ್ ಫ್ರೆಂಡ್ ಇದ್ದಾನೆ! ಅವರಿಬ್ಬರದ್ದು ಲಿವಿಂಗ್ ರಿಲೇಶನ್ಶಿಪ್; ನಿಮಗೆ ಗೊತ್ತಾ?

ಆಗ್ಲೇ ಮಗೂನೂ ಇದೆ !!

ರ್ಪಾನಲ್ಲಿ ನಡೆಯುತ್ತಿದ್ದ ಮಹಿಳೆಯರ ಮಾತುಕತೆಯಲ್ಲಿ ಇನ್ನೂ ಬಿಟ್ಟರೆ ಮೊಮ್ಮಕ್ಕಳೂ ಬರುತ್ತಿದ್ದರು..ಅಷ್ಟಕ್ಕೂ ನಿಜವಾಗಿ ನಡೆದಿದ್ದು ಪ್ರವಾಸಕ್ಕೆ ಹೋದ ಮಾಲಾ ರಾತ್ರಿ ಗೆಳತಿ ಮನೆಯಲ್ಲಿ ಉಳಿದಿದ್ದಷ್ಟೇ! ಯಾರದ್ದೋ ಮನೆಯ ವಿಷಯಕ್ಕೆ ರೆಕ್ಕೆ- ಪುಕ್ಕ ಅಂಟಿಸಿ, ಬಾಯಿಂದ ಬಾಯಿಗೆ ಕಿವಿಯಿಂದ ಕಿವಿಗೆ, ಮನೆ ಮನೆಗೆ ಹಾರಿಬಿಟ್ಟ ಪರಿಣಾಮ ಇದು. ನಿಜ; ಗಾಸಿಪ್ ಅಥವಾ ಗಾಳಿಮಾತಿನ ಪ್ರಭಾವ ಇದು.

ಗಾಸಿಪ್ ಅಂದ ತಕ್ಷಣ ಮಹಿಳೆಯರಿಗೆ ಸಂಬಂಧಿಸಿದ್ದು ಎನ್ನುವುದು ರೂಢಿ. ಇತರರ ಬಗ್ಗೆ ಸುದ್ದಿ ಕೇಳುವುದು, ಹೇಳುವುದು ಎಲ್ಲವೂ ಮಹಿಳೆಯರಿಗೆ ಪ್ರೀತಿ ಎನ್ನುವುದು ಭಾಗಶಃ ಸತ್ಯ. ಹಾಗೆ ನೋಡಿದರೆ ಪುರುಷರೂ ಗಾಸಿಪ್ ಮಾಡುತ್ತಾರೆ; ಆದರೆ ವಿಷಯಗಳು ಬೇರೆ ಅಷ್ಟೇ. ಬಹಳ ಮುಖ್ಯವಾದ ಅಂಶವೆಂದರೆ ಗಾಸಿಪ್ ಯಾರೇ ಮಾಡಿದರೂ ಹುಡುಗಿ/ ಮಹಿಳೆ ಅದರ ಕೇಂದ್ರಬಿಂದು ಮತ್ತು ಹೆಚ್ಚಿನ ಪರಿಣಾಮ ಅನುಭವಿಸುತ್ತಾರೆ. ಗಾಸಿಪ್ ಹಾವಳಿ ಎಲ್ಲ ರಂಗಗಳಲ್ಲಿಯೂ ಇದ್ದದ್ದೇ. ಹಾಗಿದ್ದೂ ದಿನನಿತ್ಯ ಸಂಪರ್ಕಕ್ಕೆ ಬರುವ ಜನರ ಬಗ್ಗೆ ನಡೆಸುವ ಗಾಸಿಪ್ ಹೆಚ್ಚಿಗೆ ಹಾನಿಕಾರಕ. ಏಕೆಂದರೆ ಇವು ಕುಟುಂಬಗಳನ್ನೇ ಒಡೆಯಬಲ್ಲದು, ವೈಯಕ್ತಿಕ ಸಂಬಂಧಗಳನ್ನು ಕೆಡಿಸಿ ಕುಟುಂಬಗಳನ್ನೇ ಒಡೆಯಬಲ್ಲದು, ಉದ್ಯೋಗಗಳನ್ನು ಕಸಿಯಬಲ್ಲದು, ಮನಃಶಾಂತಿ ಕಳೆದು ಬದುಕನ್ನೇ ನಾಶವಾಗಿಸಬಹುದು!

ಸಿಗುವ ಲಾಭವಾದರೂ ಏನು?: ಗಾಸಿಪ್ ಮಾಡುವವರು ದುರ್ಬಲ ವ್ಯಕ್ತಿತ್ವದವರು. ತಮ್ಮಲ್ಲಿರುವ ಕುಂದು ಕೊರತೆಗಳನ್ನು ಮುಚ್ಚಿಕೊಳ್ಳಲು ಗಾಸಿಪ್ ಅನ್ನು ಸಾಧನವಾಗಿ ಬಳಸಿ ಕೆಲ ಕ್ಷಣಗಳ ಮಟ್ಟಿಗೆ ತಾವೇ ಶ್ರೇಷ್ಠರು ಎನ್ನುವ ಸಮಾಧಾನ ಹೊಂದುತ್ತಾರೆ. ಇತರರ ಯಶಸ್ಸು, ಪ್ರತಿಭೆ, ಜೀವನ ಶೈಲಿ ಇವೆಲ್ಲದರ ಬಗ್ಗೆ ಹುಟ್ಟಿದ ಅಸೂಯೆಯನ್ನು ಹೊರಹಾಕಲು ಗಾಸಿಪ್ ಅನ್ನು ಅಸ್ತ›ವಾಗಿ ಬಳಸುತ್ತಾರೆ. ಜನಪ್ರಿಯರಾಗುವ ಹುಮ್ಮಸ್ಸಿನಲ್ಲಿ ಗಾಸಿಪ್ ಮಾಡುತ್ತಾರೆ; ಯಾರಿಗೂ ಗೊತ್ತಿಲ್ಲದ ವಿಷಯ ತನಗೆ ಗೊತ್ತು ಎಂದು ತೋರಿಸಿ ಇತರರ ಮೆಚ್ಚುಗೆಗೆ ಪಾತ್ರರಾಗುವ ಆಸೆ ಹೀಗೆ ಮಾಡಿಸುತ್ತದೆ. ಕೆಲವೊಮ್ಮೆ ಸುಮ್ಮನೆ ಟೈಂಪಾಸಿಗೆ, ವಿಷಯ- ವಿಚಾರ ಸಾಮರ್ಥ್ಯ ಇಲ್ಲದೆ ಇದ್ದಾಗ ನಾಲಿಗೆ ಹರಿಬಿಡುವುದೂ ಇದೆ!

ಕಾರಣ -ಲಾಭ ಏನೇ ಇರಲಿ, ಈ ರೀತಿಯ ಗಾಸಿಪ್​ಗೆ ಆಹಾರವಾದಾಗ ಮಹಿಳೆಯರಿಗೆ ಆಗುವ ಮನಸ್ಸಿಗಾಗುವ ಆಘಾತ ಅಪಾರ. ಬೇಸರ, ದುಃಖ, ಆಕ್ರೋಶ ಕಡೆಗೆ ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ನೋವಾಗಬಹುದು. ಗಾಸಿಪ್ ಮಾಡುವುದರ ಉದ್ದೇಶವೇ ಅಸೂಯೆ, ಇತರರನ್ನು ಕುಗ್ಗಿಸುವುದು. ಹಾಗಾಗಿ ಗಾಸಿಪ್​ಗೆ ಬೆಲೆ ಕೊಟ್ಟು ಧೈರ್ಯಗುಂದಿದಲ್ಲಿ ಮಾಡುವವರ ಉದ್ದೇಶ ಸಾರ್ಥಕವಾದಂತೆ. ಗಾಸಿಪ್​ಗೆ ರೆಕ್ಕೆ ಪುಕ್ಕಗಳಿದ್ದು ವೇಗವಾಗಿ ಹರಡುವ ಶಕ್ತಿಯಿದ್ದರೂ ಅಲ್ಪಾಯುಷಿ. ಆದರೆ ಸತ್ಯದ ಸದೃಢ ನಡಿಗೆ ನಿರಂತರವಾಗಿದ್ದು ದೀರ್ಘಕಾಲ ಬದುಕುತ್ತದೆ. ಹಾಗಾಗಿ ಗಾಸಿಪ್​ನ ಮೂಲವನ್ನು ಹುಡುಕುತ್ತಾ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುವುದರ ಬದಲು ನಿರ್ಲಕ್ಷ ಮಾಡುವುದು ಅಥವಾ ನಕ್ಕು ಸುಮ್ಮನಾಗುವುದು ಅದನ್ನು ನಿಭಾಯಿಸುವ ಸರಿಯಾದ ಕ್ರಮ. ಹಾಗೆಯೇ ಉಂಟಾದ ಸಂಕಟವನ್ನು, ಸೃಜನಶೀಲವಾಗಿ ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ತಕ್ಕದಾದ ಪ್ರತ್ಯುತ್ತರ.

ಇತರರ ಓಡುವ ಮನಸ್ಸು, ಆಡುವ ನಾಲಿಗೆಯನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ ನಮ್ಮ ಯೋಚನೆ- ವರ್ತನೆ ನಮ್ಮ ನಿಯಂತ್ರಣದಲ್ಲಿದೆ. ಹಾಗಾಗಿ ಗಾಸಿಪ್ ಮಾಡದಂತೆ ಮತ್ತು ಮಾಡುವವರಿಗೆ ಪ್ರೋತ್ಸಾಹವನ್ನು ನೀಡದಂತೆ ಪ್ರಯತ್ನಿಸಬೇಕು. ಅತ್ತಿತ್ತ ಅಲೆಯುವ ಸೋಮಾರಿ ಮನಸ್ಸನ್ನು ಸರಿದಾರಿಗೆ ತರಲು ಉತ್ತಮ ಹವ್ಯಾಸಗಳು ಸಹಕಾರಿ. ಘಾಸಿ ಮಾಡುವ ಗಾಸಿಪ್​ಗೆ ನಗು/ ಮೌನ/ ಉದಾಸೀನ ಮತ್ತು ಇನ್ನಷ್ಟು ಸಾಧನೆಯ ಮೂಲಕ ಫುಲ್​ಸ್ಟಾಪ್ ಹಾಕೋಣ!

ಗಾಸಿಪ್ ಮಾಡಲು ಕಾರಣ

ಸಂಘ ಜೀವಿಗಳಾದ ನಮಗೆ ಇತರರ ಒಡನಾಟ ಬೇಕು. ಹಾಗಾಗಿಯೇ ಇನ್ನೊಬ್ಬರ ಜೀವನದ ವಿವರಗಳು ಕುತೂಹಲವನ್ನು ಹುಟ್ಟಿಸುತ್ತವೆ. ಪರಸ್ಪರರ ಬದುಕಿನ ಬಗೆಗೆ ತಿಳಿಯುವ, ಸ್ನೇಹ ವೃದ್ಧಿಸುವ, ಹೆಚ್ಚಿನದನ್ನು ಸಾಧಿಸಲು ಪ್ರೇರಣೆ ನೀಡುವ ಮಾತುಕತೆಯಿಂದ ಖಂಡಿತ ಲಾಭವಿದೆ. ಆದರೆ ಸತ್ಯ ತಿಳಿಯದೆ ಇನ್ನೊಬ್ಬರ ಅನುಪಸ್ಥಿತಿಯಲ್ಲಿ ಸಣ್ಣ ಘಟನೆಗೆ ಉಪ್ಪುಖಾರ ಸೇರಿಸಿ ಕೀಳಾಗಿ ಗುಸು-ಗುಸು ಮಾತನಾಡುವ ಗಾಸಿಪ್​ನಿಂದ ಅನಾಹುತವೇ ಹೆಚ್ಚು. ಶೇಕಡ ಎಪ್ಪತ್ತರಷ್ಟು ಸಂದರ್ಭದಲ್ಲಿ ವ್ಯಕ್ತಿಯ ದೋಷ ಹುಡುಕುವುದು, ಇಲ್ಲಸಲ್ಲದ್ದನ್ನು ಹುಟ್ಟಿಸುವುದು ಕೆಟ್ಟದ್ದನ್ನು ಬಯಸುವುದು ಗಾಸಿಪ್​ನಲ್ಲಿ ಕಂಡುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net