

ನವದೆಹಲಿ: ಬಿಜೆಪಿಗೆ 2023-24ರಲ್ಲಿ ವಿವಿಧ ವ್ಯಕ್ತಿಗಳು, ಟ್ರಸ್ಟ್ಗಳು ಮತ್ತು ಕಾರ್ಪೆರೇಟ್ ಸಂಸ್ಥೆಗಳಿಂದ 2,244 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಇದು ಕಳೆದೆಲ್ಲಾ ವರ್ಷಗಳಿಗೆ ಹೋಲಿಸಿದರೆ ಅತ್ಯಧಿಕ ಪ್ರಮಾಣ ದೇಣಿಗೆಯಾಗಿದೆ.
2022-23ಕ್ಕೆ ಹೋಲಿಸಿದರೆ 23-24ಲ್ಲಿ ದೇಣಿಗೆ ಹಣ ಮೂರು ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷಕ್ಕೆ 2023-24ರಲ್ಲಿ 288.9 ಕೋಟಿ ರೂ. ದೇಣಿಗೆ ಬಂದಿದೆ. ಕಳೆದ ವರ್ಷ ಪಕ್ಷಕ್ಕೆ ರೂ. 79.9 ಕೋಟಿ ನೆರವು ಹರಿದುಬಂದಿತ್ತು. ದೇಣಿಗೆಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ. 2023-24ರಲ್ಲಿ ಬಿಜೆಪಿಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ರೂ 723.6 ಕೋಟಿ ದೇಣಿಗೆ ನೀಡಿದೆ. ಇದೇ ಸಂಸ್ಥೆ ಕಾಂಗ್ರೆಸ್ಗೆ ರೂ 156.4 ಕೋಟಿ ಕೊಡುಗೆ ನೀಡಿದೆ. 2023-24ರಲ್ಲಿ ಬಿಜೆಪಿಯ ಮೂರನೇ ಒಂದು ಭಾಗದಷ್ಟು ಮತ್ತು ಕಾಂಗ್ರೆಸ್ನ ಅರ್ಧಕ್ಕಿಂತ ಹೆಚ್ಚು ದೇಣಿಗೆಗಳು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ನಿಂದ ಬಂದಿರುವುದು ಗಮನಾರ್ಹ. 2022-23ರಲ್ಲಿ ಪ್ರುಡೆಂಟ್ ಸಂಸ್ಥೆಯ ಅಗ್ರ ದಾನಿ ಗಳಲ್ಲಿ ಮೇಘಾ ಎಂಗ್ ಮತ್ತು ಇನ್ಫ್ರಾ ಲಿಮಿಟೆಡ್, ಸೀರಮ್ ಇನ್ಸ್ಟಿಟ್ಯೂಟ್, ಆರ್ಸೆಲರ್ ಮಿತ್ತಲ್ ಗ್ರೂಪ್ ಮತ್ತು ಭಾರ್ತಿ ಏರ್ಟೆಲ್ ಒಳಗೊಂಡಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಘೊಷಿಸಿದ ಒಟ್ಟು ದೇಣಿಗೆಗಳು ಚುನಾವಣಾ ಬಾಂಡ್ ರಸೀದಿಗಳನ್ನು ಒಳಗೊಂಡಿಲ್ಲ. ಏಕೆಂದರೆ ನಿಯಮಗಳ ಪ್ರಕಾರ ಈ ಎಲ್ಲಾ ವಿವರವನ್ನು ರಾಜಕೀಯ ಪಕ್ಷಗಳು ತಮ್ಮ ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳಲ್ಲಿ ಮಾತ್ರ ಘೊಷಿಸಬೇಕು ಮತ್ತು ಕೊಡುಗೆ (ಕಾಂಟ್ರಿಬ್ಯೂಷನ್) ವರದಿಗಳಲ್ಲಿ ಅಲ್ಲ. ಚುನಾವಣಾ ಬಾಂಡ್ ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಹೀಗಾಗಿ, ರಾಜಕೀಯ ಪಕ್ಷಗಳು ಹಣವನ್ನು ನೇರವಾಗಿ ಅಥವಾ ಚುನಾವಣಾ ಟ್ರಸ್ಟ್ ಮಾರ್ಗದ ಮೂಲಕ ಪಡೆಯಬೇಕಾಗಿದೆ. ಕೆಲ ಪ್ರಾದೇಶಿಕ ಪಕ್ಷಗಳು 2023-24ರ ಕೊಡುಗೆ ವರದಿಗಳಲ್ಲಿ ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ಸ್ವೀಕರಿಸಿದ್ದನ್ನು ಘೊಷಿಸಿವೆ. ಇವುಗಳಲ್ಲಿ ಬಿಆರ್ಎಸ್ 495.5 ಕೋಟಿ ರೂ. ಬಾಂಡ್, ಡಿಎಂಕೆ 60 ಕೋಟಿ ರೂ., ವೈಎಸ್ಆರ್ 121.5 ಕೋಟಿ ರೂ. ದೇಣಿಗೆ ಪಡೆದಿವೆ.
ಕೇಂದ್ರದಿಂದ ಆರ್ಥಿಕ ನೆರವು ಕೋರಿದ ಚಂದ್ರಬಾಬು: ಆಂಧ್ರಪ್ರದೇಶಕ್ಕೆ ವಿಶೇಷ ನೆರವು ಯೋಜನೆ ಅಡಿಯಲ್ಲಿ ಆರ್ಥಿಕ ನೆರವು ನೀಡಬೇಕೆಂದು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕೇಂದ್ರದಿಂದ ಸಹಾಯ ಕೇಳಿದ್ದಾರೆ. ಎನ್ಡಿಎ ಪಾಲುದಾರ ಪಕ್ಷಗಳ ಸಮನ್ವಯ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ದೆಹಲಿಗೆ ಬಂದಿದ್ದ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಶಾ, ಅಶ್ವಿನಿ ವೈಷ್ಣವ್ ಮತ್ತು ಎಚ್.ಡಿ ಕುಮಾರ ಸ್ವಾಮಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾದರು. ಮೋದಿ ಮತ್ತು ಇತರ ಕೇಂದ್ರ ಸಚಿವರೊಂದಿಗೆ ನಾಯ್ಡು ಅವರ ಸಭೆಗಳು ದೆಹಲಿಯಲ್ಲಿ ಮುಂದಿನ ಕೇಂದ್ರ ಬಜೆಟ್ಗೆ ಸಿದ್ಧತೆಗಳು ಪ್ರಾರಂಭ ವಾಗಿವೆ ಎಂಬ ಸೂಚಕ ಎನ್ನುವುದು ಸ್ಪಷ್ಟ. ಕಳೆದ ಬಜೆಟ್ನಲ್ಲಿ ಅಮರಾವತಿ ಅಭಿವೃದ್ಧಿಗಾಗಿ ಬಹುಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳಿಂದ ಮೃದು ಸಾಲದ ರೂಪದಲ್ಲಿ ನೆರವು ಮತ್ತು ಪೋಲಾವರಂ ವಿವಿಧೋದ್ದೇಶ ಯೋಜನೆಗೆ ಕೇಂದ್ರ ಬಜೆಟ್ನಿಂದ ಹಣ ಪಡೆಯುವಲ್ಲಿ ಟಿಡಿಪಿ ಯಶಸ್ವಿಯಾಗಿತ್ತು.
ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು!: ಏಪ್ರಿಲ್ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 64.64 ಕೋಟಿ ಜನ ಮತ ಚಲಾಯಿಸಿದ್ದು, ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಮಹಿಳಾ ಮತದಾರರು 65.78 ಪ್ರತಿಶತದಷ್ಟಿದ್ದರೆ, ಶೇ.65.55 ಪುರುಷ ಮತದಾರರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ. 2019ರ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 726 ಆಗಿತ್ತು. ಇದು 2024ರಲ್ಲಿ 800ಕ್ಕೆ ಏರಿದೆ ಎಂದು ಆಯೋಗ ತಿಳಿಸಿದೆ. ಲೋಕಸಭೆ ಚುನಾವಣೆಯಲ್ಲಿನ ಮತದಾನದ ಅಂಕಿಅಂಶಗಳು ಸುಳ್ಳು ಎಂದು ಆರೋಪಿಸಲಾದ ಹಿನ್ನೆಲೆಯಲ್ಲಿ ಈ ಅಂಕಿ ಅಂಶಗಳನ್ನು ನೀಡ ಲಾಗಿದೆ. 2019ರ 11,692 ನಾಮಪತ್ರಗಳಿಗೆ ಹೋಲಿಸಿದರೆ ಈ ಬಾರಿ ಒಟ್ಟು 12,459 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಬಾರಿ 8,360 ಅಭ್ಯರ್ಥಿಗಳು ಸ್ಪರ್ಧಿಸಿದರೆ, 2019ರಲ್ಲಿ 8,054 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ವರದಿ ಹೇಳಿದೆ.
ಡಿಎಂಕೆ ಸರ್ಕಾರ ತೊಲಗುವವರೆಗೆ ಚಪ್ಪಲಿ ತ್ಯಜಿಸಲು ಅಣ್ಣಾಮಲೈ ಸಂಕಲ್ಪ: ರಾಜ್ಯದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರ ಅಧಿಕಾರದಿಂದ ತೊಲಗುವವರೆಗೆ ಪಾದರಕ್ಷೆ ಹಾಕಿಕೊಳ್ಳುವುದಿಲ್ಲ ಎಂದು ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ. ಅಣ್ಣಾಮಲೈ ಗುರುವಾರ ಶಪಥ ಮಾಡಿದ್ದಾರೆ. ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಲೈಂಗಿಕ ಕಿರುಕುಳದ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ವಹಿಸಿದ ವೈಖರಿಯನ್ನು ಪ್ರತಿಭಟಿಸಿ ಶುಕ್ರವಾರ ತಮ್ಮ ಮನೆ ಮುಂದೆ ಆರು ಛಡಿಯೇಟು ಹೊಡೆದುಕೊಳ್ಳುವುದಾಗಿಯೂ ಬಿಜೆಪಿ ನಾಯಕ ಘೋಷಿಸಿದರು. ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತರ ಹೆಸರು, ಫೋನ್ ಸಂಖ್ಯೆ ಮತ್ತಿತರ ವೈಯಕ್ತಿಕ ವಿವರಗಳನ್ನು ತಮಿಳುನಾಡು ಪೊಲೀಸರು ಬಹಿರಂಗ ಪಡಿಸಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದರು.