ಅಸಮಾಧಾನದ ದಿಗಿಲು: ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು

JDS
Published on

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ತ್ವರಿತವಾಗಿ ಪೂರ್ಣಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ಭಿನ್ನಮತ ಅಡ್ಡಗಾಲು ಹಾಕಿದೆ. ಉದ್ದೇಶಿತ ಸ್ಥಾನಗಳ ಪೈಕಿ ಬಹುತೇಕ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ ಎಂದರಿತ ಆಕಾಂಕ್ಷಿಗಳು, ಮುಖಂಡರ ಅಸಮಾಧಾನ ಭುಗಿಲೆದ್ದಿದ್ದು, ಆಡಳಿತ ಪಕ್ಷ ದಿಗಿಲುಗೊಂಡಿದೆ.

ಬೆಳಗಾವಿ ಕ್ಷೇತ್ರಕ್ಕೆ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ ಅವರನ್ನು ಮುಂದುವರಿಸಲು ಪಕ್ಷದ ನಾಯಕರು ಬಯಸಿದ್ದು, ಜಾರಕಿಹೊಳಿ ಸೋದರರನ್ನು ಕೆರಳಿಸಿದೆ. ವಿಶ್ವಾಸಕ್ಕೆ ತೆಗೆದುಕೊಂಡು ರ್ಚಚಿಸಿಲ್ಲ, ಸೌಜನ್ಯವಿಲ್ಲದ ಧೋರಣೆಗೆ ತಿರುಗೇಟು ನೀಡಲು ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಚಿಂತನೆ ನಡೆಸಿದ್ದಾರೆ. ಕಿರಿಯ ಸೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಯೋಚಿಸಿದ್ದು, ಮಾಹಿತಿ ಅರಿತ ಮುಖಂಡರು ಸರಿಪಡಿಸುವ ಕಸರತ್ತಿಗೆ ಕೈ ಹಾಕಿದ್ದಾರೆ. ಕೊಡಗು ಕ್ಷೇತ್ರದಲ್ಲಿ ಹಾಲಿ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ಸುಜಾ ಕುಶಾಲಪ್ಪ ಹೆಸರುಗಳು ರಾಜ್ಯ ನಾಯಕರ ಮಧ್ಯೆ ಹೊಯ್ದಾಡುತ್ತಿವೆ. ಆಕಾಂಕ್ಷಿಗಳಿಬ್ಬರೂ ಶಾಸಕ ಅಪ್ಪಚ್ಚು ರಂಜನ್ ಸೋದರರು ಎಂಬುದು ಗಮನಾರ್ಹ.

ಮೈಸೂರು ಮತ್ತು ತುಮಕೂರು ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದ್ದು, ಸಂಘಟನೆಗೆ ದುಡಿದವರು ಹಾಗೂ ವರ್ಚಸ್ಸುಳ್ಳ ಮುಖಂಡರ ಸಂಖ್ಯೆ ಸಾಕಷ್ಟಿದೆ. ಆದರೂ ಗೆಲುವೊಂದೇ ಮಾನದಂಡ ಹೆಸರಿನಲ್ಲಿ ಹೊರಗಿನವರನ್ನು ಕರೆ ತರುತ್ತಿರುವುದಕ್ಕೆ ಆಕ್ಷೇಪ ತೀವ್ರಗೊಂಡಿದ್ದು, ಜೆಡಿಎಸ್ ಸದಸ್ಯರಾದ ಸಂದೇಶ ನಾಗರಾಜ್ ಹಾಗೂ ಸಿ.ಆರ್.ಮನೋಹರ್​ಗೆ ಮಣೆ ಹಾಕಲು ಮುಂದಾಗಿರುವ ನಾಯಕರಿಗ ಇರಿಮುರಿಸು ಉಂಟಾಗಿದೆ. ವಲಸಿಗರಿಬ್ಬರಿಗೆ ಕ್ರಮವಾಗಿ ಮೈಸೂರು ಮತ್ತು ತುಮಕೂರು ಕ್ಷೇತ್ರದ ಟಿಕೆಟ್ ನೀಡಬೇಕೆಂಬ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ರ್ಚಚಿಸಿದರೂ ನಿರ್ಧಾರಕ್ಕೆ ಬರಲಾಗಿಲ್ಲ. ತಗಾದೆ ಮಾಹಿತಿ ತಿಳಿದುಕೊಂಡಿದ್ದ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಇವೆರಡು ಕ್ಷೇತ್ರಗಳ ಸಂಸದ-ಶಾಸಕರು, ಮುಖಂಡರೊಂದಿಗೆ ಮತ್ತೊಮ್ಮೆ ರ್ಚಚಿಸಿ ಒಮ್ಮತದ ನಿಲುವು ತಳೆಯಲು ಸೂಚಿಸಿದ್ದಾರೆ.

ಈ ನಡುವೆ ಧಾರವಾಡ ಕ್ಷೇತ್ರಕ್ಕೆ ಪ್ರದೀಪ ಶೆಟ್ಟರ್ ಹೆಸರು ಫೈನಲ್ ಆಗಿದ್ದರೂ ತಮ್ಮನಿಗೆ ಟಿಕೆಟ್ ಖಾತರಿಪಡಿಸಲು ಜಗದೀಶ ಶೆಟ್ಟರ್ ಲಾಬಿ ನಡೆಸಿದ್ದು, ಹಠಾತ್ ದೆಹಲಿ ಪ್ರವಾಸಕ್ಕೆ ಇದೂ ಒಂದು ಕಾರಣ ಎಂದು ತಿಳಿದಿದೆ. ರಾಯಚೂರು ಕ್ಷೇತ್ರದ ಟಿಕೆಟ್​ಗಾಗಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಮತ್ತು ಹಿಂದುಳಿದ ವರ್ಗದ ಮುಖಂಡ ಈ.ಆಂಜನೇಯ ನಡುವೆ ಪೈಪೋಟಿ ಏರ್ಪಟ್ಟಿದೆ. ಈ.ಅಂಜನೇಯ ಪರವಾಗಿ ರಾಯಚೂರು-ಕೊಪ್ಪಳ ಸಂಸದರು, ಕೆಲವು ಮುಖಂಡರು ನಿಂತಿದ್ದರೆ, ಬ್ಯಾಗವಾಟ್ ಪರವಾಗಿ ಒಬ್ಬ ಸಚಿವ, ಕೆಲವು ಶಾಸಕರು ಹಾಗೂ ಅನೇಕ ಮುಖಂಡರು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದಿಂದ ಸ್ಪರ್ಧಿಸಲು ಉದ್ದೇಶಿತ 20 ಸ್ಥಾನಗಳ ಪೈಕಿ 14ಕ್ಕೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಬೆರಳೆಣಿಕೆಯಷ್ಟು ಕ್ಷೇತ್ರಗಳು ಕಗ್ಗಂಟಾಗಿವೆ. ಇದರಿಂದಾಗಿ ಕೇಂದ್ರ ಸಂಸದೀಯ ಮಂಡಳಿಗೆ ಅಂತಿಮ ಪಟ್ಟಿ ರವಾನೆ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಮುಂದಿನ ಲೋಕಸಭಾ ಚುನಾವಣೆ ನಂತರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಪರಿಷತ್ ಚುನಾವಣೆಯಲ್ಲಿ ಹೆಣ್ಣು ಮಕ್ಕಳಿಗೆ ಟಿಕೆಟ್ ಕೊಡಬಾರದು ಎಂಬ ಭಾವನೆ ನನಗಿಲ್ಲ. ಆದರೆ ಅವರು ಆಯ್ಕೆಯಾದರೆ ಕಚೇರಿಯಿಂದ ಕಚೇರಿಗೆ ಅಲೆದು ಕೆಲಸ ಮಾಡುವುದು ಕಷ್ಟಕರ. ಆದ್ದರಿಂದ ರ್ಚಚಿಸಿ ತೀರ್ವನಿಸುತ್ತೇವೆ.

| ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ

ಅಭಿಪ್ರಾಯ ಪಡೆದು ಅಭ್ಯರ್ಥಿ ಘೋಷಣೆ

ಹಾಸನ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ನಡೆಯುವ ಚುನಾವಣೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹೆಸರು ಮುಂಚೂಣಿಗೆ ಬಂದಿದ್ದು, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರ ಸಭೆ ಏರ್ಪಡಿಸಿ ಅವರ ಅಭಿಪ್ರಾಯ ಪಡೆದು ಅಭ್ಯರ್ಥಿ ಹೆಸರು ಘೊಷಿಸಲು ತೀರ್ವನಿಸಲಾಯಿತು. ನಗರದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್ ಶಾಸಕರು, ಪ್ರಮುಖರ ಸಭೆಯಲ್ಲಿ ಈ ಸಂಬಂಧ ವಿಸõತವಾಗಿ ರ್ಚಚಿಸಲಾಯಿತು. ‘ನಿಮ್ಮ ಸೊಸೆ ಎಂದು ಭಾವಿಸದೆ ಮಹಿಳಾ ನಾಯಕಿಯಾಗಿ ಭವಾನಿ ಅವರಿಗೆ ಟಿಕೆಟ್ ನೀಡಬೇಕು’ ಎಂಬ ಪ್ರಮುಖರ ಒತ್ತಡಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಮ್ಮ ಪಕ್ಷದ ಸರ್ಕಾರವಿಲ್ಲದಿದ್ದಾಗ ಹೆಣ್ಣುಮಗಳು ವಿಧಾನಪರಿಷತ್​ನಲ್ಲಿ ಹೋರಾಟ ಮಾಡುವುದು ಬಹಳ ಕಷ್ಟ. ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂದು ನಾವೇ ವಾದಿಸುತ್ತೇವೆ. ಆದರೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಎಂದು ರ್ಚಚಿಸಿ ಅಂತಿಮ ತೀರ್ಮಾನ ಮಾಡಬೇಕು ಎಂದು ಹೇಳುವ ಮೂಲಕ ಕುತೂಹಲ ಕಾಯ್ದಿಟ್ಟರು.

ವರಿಷ್ಠರ ವಿರುದ್ಧ ಶಿವಲಿಂಗೇಗೌಡ ಗರಂ: ಸಭೆಯಲ್ಲಿ ಮುಖಂಡರು ಭಾಗವಹಿಸುವ ಬಗ್ಗೆ ಮಾಹಿತಿ ನೀಡಿಲ್ಲ ಎನ್ನುವ ಕಾರಣ ಮುಂದೊಡ್ಡಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವರಿಷ್ಠರ ವಿರುದ್ಧ ವೇದಿಕೆಯಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ರಹಸ್ಯ ಸಭೆ ಎಂದು ಹೇಳಿದ್ದರು. ಅದಕ್ಕೇ ನಾನೊಬ್ಬನೇ ಬಂದೆ. ನಮ್ಮ ಕ್ಷೇತ್ರದ ಕಾರ್ಯಕರ್ತರು, ಮುಖಂಡರಿಗೆ ಈಗ ಏನೆಂದು ಹೇಳಲಿ? ಇಪ್ಪತ್ತು ಜನರಿಗೆ ಫೋನ್ ಮಾಡಿ ಕೊಡುತ್ತೇನೆ. ನೀವೇ ಶಿವಲಿಂಗನದ್ದು ತಪ್ಪಿಲ್ಲ ಅಂತ ಹೇಳಬೇಕು ಎಂದರು.

ಬೆಳಗಾವಿ ಪಾಲಿಕೆ ಸದಸ್ಯರಿಗಿಲ್ಲ ಮತದಾನ ಅವಕಾಶ?

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ 58 ಸದಸ್ಯರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಕೈತಪು್ಪವ ಸಾಧ್ಯತೆ ಹೆಚ್ಚಿದೆ. ಕಾರಣ ಸದಸ್ಯರು ಆಯ್ಕೆಯಾಗಿ ಎರಡು ತಿಂಗಳು ಕಳೆದಿದೆ. ಆದರೆ, ಇನ್ನೂ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಆಯ್ಕೆಯಾಗಿರುವ ಸದಸ್ಯರು ಸದಸ್ಯತ್ವ ಪ್ರತಿಜ್ಞೆ ಸ್ವೀಕರಿಸದಿರುವ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net