ಗೊಲ್ಲರ ಸೆಳೆಯಲು ಬಿಜೆಪಿ ರಣತಂತ್ರ

BJP LOGO
Published on

ಬೆಂಗಳೂರು: ಗೊಲ್ಲ ಅಭಿವೃದ್ಧಿ ನಿಗಮ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಈ ಕ್ರಮವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ವೇಳಾಪಟ್ಟಿ ನಿಗದಿ ಹೊಸ್ತಿಲಲ್ಲಿ ಈ ತೀರ್ಮಾನ ಕೈಗೊಂಡಿರುವುದು ರಾಜಕೀಯವಾಗಿ ಗಮನಸೆಳೆದಿದ್ದು, ಆಡಳಿತಾರೂಢ ಬಿಜೆಪಿಯ ಚುನಾವಣಾ ರಣತಂತ್ರದ ಭಾಗವಾಗಿದೆ.

ಕ್ಷೇತ್ರದಲ್ಲಿರುವ ಹಿಂದುಳಿದ ವರ್ಗಗಳ ಪೈಕಿ ಗೊಲ್ಲ ಸಮುದಾಯದ 30,000 ಮತಗಳಿವೆ ಎಂಬ ಲೆಕ್ಕಾಚಾರವಿದೆ. ಈ ಸಮುದಾಯವನ್ನು ಸೆಳೆಯಲೆಂದು ನಿಗಮ ರಚನೆಗೆ ಬಿಎಸ್​ವೈ ದಿಢೀರ್ ಆದೇಶ ಹೊರಡಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ‘ಮಹಾ’ ನಾಯಕರ ಗುಟ್ಟಾದ ಭೇಟಿಗೆ ಹೀಗಿದೆ ಸಮಜಾಯಿಶಿ; ರಾಜಕೀಯ ಇಲ್ವೇ ಇಲ್ವಂತೆ !

ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕಾಂಗ್ರೆಸ್​ನ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಮತ್ತೊಮ್ಮೆ ಕೈ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಪಾಳಯದಲ್ಲಿ ನಡೆದಿರುವ ಚರ್ಚೆಯ ಪ್ರಕಾರ ಅಗಲಿದ ಶಾಸಕ ಬಿ.ಸತ್ಯನಾರಾಯಣ ಕುಟುಂಬಕ್ಕೆ ಆದ್ಯತೆ ಸಿಗುವ ಸಾಧ್ಯತೆಗಳಿವೆ. ಅವರೂ ಕುಂಚಿಟಿಗ ಒಕ್ಕಲಿರಾಗಿದ್ದಾರೆ. ಮತದಾರರ ಸಂಖ್ಯಾಬಲದ ದೃಷ್ಟಿಯಿಂದ ಎಸ್ಸಿ, ಎಸ್ಟಿ, ಮುಸ್ಲಿಂ, ಕುರುಬ ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಹಿಂದುಳಿದ ವರ್ಗಗಳ ಸಮುದಾಯಗಳನ್ನು ಒಟ್ಟುಗೂಡಿಸಿ ತನ್ನತ್ತ ಸೆಳೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಬಿರುಸಿನ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಪ್ರತಿ ಹಳ್ಳಿಗಳಲ್ಲಿ ಸಭೆಗಳನ್ನು ಸಂಘಟಿಸುವ ಜತೆಗೆ ಬೂತ್ ಮಟ್ಟದಲ್ಲಿ ಸಮಿತಿ, ಪೇಜ್ ಪ್ರಮುಖರ ನೇಮಕ, ವಾಟ್ಸ್​ಆಪ್ ಗ್ರೂಪ್ ರಚನೆ ಇತ್ಯಾದಿ ಪೂರ್ವಭಾವಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸಂಖ್ಯೆಯೂ ದಿನಗಳೆದಂತೆ ಏರುತ್ತಿದೆ. ಆದರೆ ಬಿಜೆಪಿ ವರಿಷ್ಠರು ಕಾದು ನೋಡುತ್ತಿದ್ದಾರೆ. ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಚಿಸುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಹೆಸರು ಪ್ರಕಟವಾದ ನಂತರವೇ ಬಿಜೆಪಿ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕರಣ್​ ಜೋಹರ್​ ಹೆಸರು ಹೇಳಿದರೆ ಬಿಟ್ಟುಬಿಡ್ತೀವಿ ಎಂದರಂತೆ ಎನ್​ಸಿಬಿ ಅಧಿಕಾರಿಗಳು …

ಕಾಡುಗೊಲ್ಲರ ಅಪಸ್ವರ: ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚಿಸುವುದಾಗಿ ಘೋಷಿಸಿದ್ದ ಸಿಎಂ, ಇದೀಗ ಗೊಲ್ಲ ಅಭಿವೃದ್ಧಿ ನಿಗಮ ರಚನೆಗೆ ಆದೇಶಿಸಿರುವುದಕ್ಕೆ ಕಾಡುಗೊಲ್ಲ ಸಮುದಾಯದ ಮುಖಂಡ ದೊಡ್ಡನಾಗಯ್ಯ ಅಪಸ್ವರ ಎತ್ತಿದ್ದಾರೆ. ಘೋಷಿಸಿದಂತೆಯೇ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ರಚಿಸಿ, ಸಮುದಾಯವನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net