

ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಅವರು ಶನಿವಾರ ಹೋಟೆಲ್ವೊಂದರಲ್ಲಿ ಗುಟ್ಟಾಗಿ ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಈ ಬಗ್ಗೆ ಬಿಜೆಪಿ ವಕ್ತಾರ ಸ್ಪಷ್ಟನೆ ಕೊಟ್ಟು, ಇವರಿಬ್ಬರ ಭೇಟಿಗೆ ರಾಜಕೀಯ ಕಾರಣವಿಲ್ಲ. ಶಿವಸೇನೆ ಮುಖವಾಣಿ ಸಾಮ್ನಾಕ್ಕೆ ಸಂದರ್ಶನ ಕೊಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಭೇಟಿಯಾಗಿದ್ದರು ಎಂದು ಹೇಳಿದ್ದರು. ಆದರೂ ಗುಸುಗುಸು, ಪಿಸುಪಿಸು ನಿಂತಿಲ್ಲ.
ಈ ಮಧ್ಯೆ ಶಿವಸೇನೆ ಎಂಪಿ ಸಂಜಯ್ ರಾವತ್ ಬಾಯ್ಬಿಟ್ಟಿದ್ದಾರೆ. ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕೋಸ್ಕರ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಷ್ಟೇ. ಬಿಜೆಪಿ ಹಾಗೂ ಶಿವಸೇನೆ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಎರಡೂ ಪಕ್ಷಗಳ ಮುಖಂಡರು ಎಂದಿಗೂ ಶತ್ರುಗಳಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರಣ್ ಜೋಹರ್ ಹೆಸರು ಹೇಳಿದರೆ ಬಿಟ್ಟುಬಿಡ್ತೀವಿ ಎಂದರಂತೆ ಎನ್ಸಿಬಿ ಅಧಿಕಾರಿಗಳು …
ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ. ಹಾಗೇ ಈಗ ಪ್ರತಿಪಕ್ಷದ ನಾಯಕ. ಬಿಹಾರ ಚುನಾವಣೆಯ ಉಸ್ತುವಾರಿ. ನಮ್ಮ ಮಧ್ಯೆ ವೈಯಕ್ತಿಕ ಜಗಳ, ಭಿನ್ನಮತಗಳಿಲ್ಲ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಸಭೆಗಳು ಸಾಮಾನ್ಯ. ನಾವು ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದಾಗಲೂ, ಎನ್ಸಿಪಿಯ ಶರದ್ ಪವಾರ್ ಅವರನ್ನು ಭೇಟಿಯಾಗುತ್ತಿದ್ದೆ ಎಂದು ಸಮಜಾಯಿಶಿ ನೀಡಿದ್ದಾರೆ.
ಹಾಗೇ ಈ ಬಗ್ಗೆ ಫಡ್ನವೀಸ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮಿಬ್ಬರ ಭೇಟಿಯಲ್ಲಿ ರಾಜಕೀಯ ವಿಚಾರಗಳು ಏನೂ ಇಲ್ಲ. ನಾವು ಶಿವಸೇನೆಯೊಂದಿಗೆ ಕೈ ಜೋಡಿಸುತ್ತಿಲ್ಲ. ನಮಗೆ ಅಧಿಕಾರಕ್ಕೆ ವಾಪಸ್ ಬರಲು ಆತುರವಿಲ್ಲ. ನಾವು ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)