

ರಾಘವ ಶರ್ಮ ನಿಡ್ಲೆ, ನವದೆಹಲಿ
ಕರೊನಾ ವೈರಾಣು ಹರಡುವಿಕೆ ತಾರಕಕ್ಕೇರಿರುವ ಇಂದಿನ ಸನ್ನಿವೇಶದಲ್ಲಿ ಜಗತ್ತಿನಾದ್ಯಂತ ನಿತ್ಯವೂ 5-6 ಸಾವಿರ ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಸೋಂಕು ಹರಡುವ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ದಿನಕ್ಕೆ 1000-1200 ಮಂದಿ ವೈರಸ್ಗೆ ಬಲಿಯಾಗುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳು ಪೂರ್ತಿ ಸಾವಿನ ಸರಾಸರಿ ಹೆಚ್ಚುಕಡಿಮೆ ಇದೇ ಪ್ರಮಾಣದಲ್ಲಿದೆ. ದಿನಕ್ಕೆ 80 ಸಾವಿರ ಕೇಸುಗಳು ವರದಿಯಾಗುತ್ತಿವೆ.
ಸೂಪರ್ ಸ್ಪ್ರೆಡರ್ ಭಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಜೂನ್ ತಿಂಗಳಲ್ಲಿ ತುಲ್ಸಾ ಎಂಬ ಪ್ರಾಂತ್ಯದಲ್ಲಿ ನಡೆಸಿದ ಚುನಾವಣಾ ರ‍್ಯಾಲಿ ಕರೊನಾ ಸೂಪರ್ ಸ್ಪ್ರೆಡರ್ ಆಗಿ ಪರಿವರ್ತನೆಯಾಗಿತ್ತು. ರ‍್ಯಾಲಿ ಯಲ್ಲಿ ಪಾಲ್ಗೊಂಡ ನೂರಾರು ಮಂದಿಗೆ ಕರೊನಾ ಅಂಟಿಕೊಂಡಿತ್ತು. ಬಿಹಾರ ಚುನಾವಣೆ ಮೇಲೂ ಇಂಥದ್ದೇ ಆತಂಕದ ಛಾಯೆಯಿದೆ. ಹಳ್ಳಿಗಾಡಿನಲ್ಲಿ ಏರ್ಪಡಿಸುವ ಸಭೆ, ಸಮಾವೇಶವೂ ಸೂಪರ್ ಸ್ಪ್ರೆಡರ್ ಆಗಿ ಪರಿಣಮಿಸುವ ಅಪಾಯವಿದೆ. ಅಸಮರ್ಪಕ, ಕಳಪೆ ಆರೋಗ್ಯ ವ್ಯವಸ್ಥೆಯಿಂದ ಕುಖ್ಯಾತಿಯಾಗಿರುವ ಬಿಹಾರದಲ್ಲಿ ಕೋವಿಡ್-19 ಶಿಷ್ಟಾಚಾರ ಪಾಲನೆ ಮಾಡದ ಚುನಾವಣಾ ಅಭ್ಯರ್ಥಿ, ಮುಖಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ಷಮ ಕೈಗೊಳ್ಳದಿದ್ದಲ್ಲಿ, ಚುನಾವಣೆ ಪೂರ್ಣಗೊಳ್ಳುವ ವೇಳೆ ಅತಿ ಹೆಚ್ಚು ಸೋಂಕಿತರ ಸಂಖ್ಯೆಗೆ ರಾಜ್ಯ ಸಾಕ್ಷಿಯಾದರೂ ಅಚ್ಚರಿ ಇಲ್ಲ. ಏತನ್ಮಧ್ಯೆ, ಕರೊನಾ ಭಯದಿಂದಾಗಿಯೇ ಮತದಾನದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಕಡಿಮೆಯಾದೀತು ಎಂಬ ಭಯ ಪಕ್ಷಗಳನ್ನು ಕಾಡುತ್ತಿದೆ. ವರ್ಚುವಲ್ ರ್ಯಾಲಿ, ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆಯಾದರೂ, ಇದು ವೈಯಕ್ತಿಕ ಉಪಸ್ಥಿತಿ, ಭೇಟಿಯಷ್ಟು ಪರಿಣಾಮಕಾರಿಯಾಗುತ್ತಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಜಗತ್ತಿನಲ್ಲಿ ನಿತ್ಯವೂ ವರದಿಯಾಗುತ್ತಿರುವ ಸಾವಿನ ಸಂಖ್ಯೆಗೆ ಭಾರತದ ಕೊಡುಗೆ ಶೇಕಡ 18-25ರಷ್ಟಿದೆ. ಕಳೆದ ಏಪ್ರಿಲ್ 28ಕ್ಕೆ 1 ಸಾವಿರವಿದ್ದ ಸಾವಿನ ಸಂಖ್ಯೆ, ಜೂನ್ 16ಕ್ಕೆ 10 ಸಾವಿರ, ಜುಲೈ 16ಕ್ಕೆ 25 ಸಾವಿರ, ಆಗಸ್ಟ್ 16ಕ್ಕೆ 50 ಸಾವಿರ, ಸೆಪ್ಟೆಂಬರ್ 9ಕ್ಕೆ 75 ಸಾವಿರ ದಾಟಿ ಅಕ್ಟೋಬರ್ 2ಕ್ಕೆ 1 ಲಕ್ಷದ ಗಡಿ ದಾಟಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 26 ಲಕ್ಷ ಕೇಸುಗಳು ಭಾರತದಲ್ಲಿ ದಾಖಲಾಗಿದೆ. ಸರ್ಕಾರದ ಅಧಿಕೃತ ವರದಿಗಳ ಪ್ರಕಾರ, ಕಳೆದ 22 ದಿನಗಳಲ್ಲಿ 25 ಸಾವಿರ ಮಂದಿ ದೇಶದಲ್ಲಿ ಸತ್ತಿದ್ದಾರೆ! ಮುಂದಿನ ದಿನಗಳಂತೂ ಭಾರತದ ಮಟ್ಟಿಗೆ ಕರೊನಾ ಮತ್ತಷ್ಟು ಕರಾಳ ಎನಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹಳ್ಳಿ-ಹಳ್ಳಿಗಳಿಗೆ ಕರೊನಾ ದಾಂಗುಡಿ ಇಡುತ್ತಿದ್ದು, ಜನಸಾಮಾನ್ಯರು (ಮುಖ್ಯವಾಗಿ ವಯಸ್ಸಾದವರು, ಅನಾರೋಗ್ಯಪೀಡಿತರು) ಆತಂಕದಲ್ಲಿ ದಿನದೂಡುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕವನ್ನು ಮೀರಿ ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣಲಿದೆ ಎಂಬ ಆರೋಗ್ಯ ತಜ್ಞರ ಎಚ್ಚರಿಕೆ ನಡುವೆಯೇ ವಿಧಾನಸಭೆ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆಗಳನ್ನು ನಡೆಸಲು ಹೊರಟಿರುವುದು ಭವಿಷ್ಯದ ಭಯಾನಕತೆ ಬಗ್ಗೆ ಪ್ರಜ್ಞಾವಂತರನ್ನು ಚಿಂತೆಗೆ ತಳ್ಳಿದೆ. ಅಕ್ಟೋಬರ್ 28ಕ್ಕೆ ಬಿಹಾರ ವಿಧಾನಸಭೆ ಚುನಾವಣೆಯಿದ್ದು, ಈಗಾಗಲೇ ಪ್ರಚಾರ ಕಾರ್ಯಗಳೂ ಭರ್ಜರಿಯಾಗಿ ನಡೆಯುತ್ತಿವೆ. ಕರೊನಾ ವೈರಸ್ ನಮ್ಮ ಮಧ್ಯೆ ಇಲ್ಲವೇನೋ ಎಂಬಂತೆ ರಾಜಕಾರಣಿಗಳು, ಕಾರ್ಯಕರ್ತರು ಬೀದಿಗಳಿದು ಪ್ರಚಾರದಲ್ಲಿ ತೊಡಗಿದ್ದಾರೆ. ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೂ ಪೂರ್ವತಯಾರಿಗಳು ನಡೆಯುತ್ತಿವೆ.
ಇದನ್ನೂ ಓದಿ: ನಟಿ ತಮನ್ನಾ ಭಾಟಿಯಾ ಆಸ್ಪತ್ರೆಗೆ ದಾಖಲು
ಭಾರತದಲ್ಲಿ ಚುನಾವಣೆ ಎಂದರೆ ಜಾತ್ರೆಯಿದ್ದಂತೆ. ಪ್ರಜಾತಂತ್ರದ ಈ ಹಬ್ಬದಲ್ಲಿ ಜನರೂ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಗ್ರಹಿಸಲೂ ಸಾಧ್ಯವಾಗದಿರುವ ವಿಚಿತ್ರ ಮಹಾಮಾರಿಯ ಮಧ್ಯೆ ಚುನಾವಣೆ ನಡೆಸಿ, ಜನರನ್ನು ಅಪಾಯದಲ್ಲಿ ಸಿಲುಕಿಸುವ ಅಗತ್ಯ ಏನಿತ್ತು ಎಂಬುದು ಕಾಡುತ್ತಿರುವ ಪ್ರಶ್ನೆ. ಈ ವೈರಾಣು ಅಮೆರಿಕ ಅಧ್ಯಕ್ಷರನ್ನೂ ಬಿಟ್ಟಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲನಿಯಾ ಟ್ರಂಪ್ಗೂ ಕರೊನಾ ಪಾಸಿಟಿವ್ ಆಗಿರುವುದರಿಂದ ಮುಂದಿನ 18 ದಿನಗಳ ಕಾಲ ಅವರು ಜನರಿಂದ ಪ್ರತ್ಯೇಕವಾಗಿರಬೇಕು. ಪ್ರಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ. ತೀವ್ರ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಆನ್ಲೈನ್ ಪ್ರಚಾರವೂ ಅಸಾಧ್ಯ.
ಅಭ್ಯರ್ಥಿಗಳೇನು ಮಾಡಬೇಕು?
ಬಿಹಾರದಲ್ಲಿ ಕರೊನಾ ಹರಡುವಿಕೆ ನಿತ್ಯವೂ ಏರುತ್ತಿದೆ. ಚುನಾವಣಾ ಕಾವು ಆರೋಗ್ಯ ಬಿಕ್ಕಟ್ಟನ್ನು ಮತ್ತಷ್ಟು ಹಿಗ್ಗಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಕರೊನಾ ಇಲ್ಲ ಎಂಬ ವರದಿ ತೋರಿಸಿದರೂ, ಆತನನ್ನು ಭೇಟಿ ಮಾಡಲು ಬರುವ ಮುಖಂಡರು, ಕಾರ್ಯಕರ್ತರು ಅಥವಾ ಆತ ಭೇಟಿ ಮಾಡಿ ಮತ ಯಾಚಿಸುವ ಜನಸಾಮಾನ್ಯನಿಗೆ ಕರೊನಾ ಇರುವುದಿಲ್ಲ ಎಂಬ ಗ್ಯಾರಂಟಿ ಇದೆಯೇ? ದೇಶದಲ್ಲಿ ರೋಗ ಲಕ್ಷಣವಿಲ್ಲದವರ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿದೆ ಎಂದು ವೈದ್ಯಾಧಿಕಾರಿಗಳು ಹತ್ತಾರು ಬಾರಿ ಹೇಳಿದ್ದಾರೆ. ಹೀಗಿರುವಾಗ, ಚುನಾವಣೆ ಘೊಷಿಸಿ ಕರೊನಾ ಹಬ್ಬಲು ಸರ್ಕಾರ, ಕೇಂದ್ರ ಚುನಾವಣಾ ಆಯೋಗವೇ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಕರೊನಾದಿಂದ ಗುಣಮುಖರಾಗಿ ಬರುತ್ತಿರುವವರ ಸಂಖ್ಯೆ ಭರವಸೆದಾಯಕವಾಗಿದ್ದರೂ, ಯಾವುದೇ ಇತರ ರೋಗಗಳಿಲ್ಲದ ವ್ಯಕ್ತಿಗಳೂ ಸೋಂಕಿಗೆ ಬಲಿಯಾಗುತ್ತಿಲ್ಲವೇ? ಒಂದುವೇಳೆ, ಮತದಾನಕ್ಕೆ 10-15 ದಿನಕ್ಕೆ ಮುನ್ನ ಅಭ್ಯರ್ಥಿಗೆ ಕರೊನಾ ಪಾಸಿಟಿವ್ ವರದಿ ಬಂದಲ್ಲಿ ಆತ ಏನು ಮಾಡಬೇಕು? ಕರೊನಾದಿಂದಾಗಿ ಪ್ರಚಾರ ನಡೆಸಲಾಗದೆ ಆತ ಚುನಾವಣೆ ಸೋತಲ್ಲಿ ಅದಕ್ಕೆ ಜವಾಬ್ದಾರಿ ಯಾರು?
ದೈಹಿಕ ಅಂತರವೆಂಬ ತಮಾಷೆ!
ಸಾಮಾನ್ಯ ದಿನಗಳಲ್ಲೇ ಜನರು ದೈಹಿಕ ಅಂತರ ಕಾಪಾಡುತ್ತಿಲ್ಲ. ಚುನಾವಣೆ, ಪ್ರಚಾರಭಿಯಾನಗಳಿದ್ದಾಗಲಂತೂ ಕೇಳುವುದು ಬೇಡ. ಕೆಲ ದಿನಗಳ ಹಿಂದೆ ಬಿಹಾರಕ್ಕೆ ಹೋಗಿದ್ದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ತೆರೆದ ವಾಹನವೊಂದರಲ್ಲಿ ಕಾರ್ಯಕರ್ತರೊಂದಿಗೆ ಪ್ರವಾಸ ಮಾಡುತ್ತಿದ್ದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದರಲ್ಲಿ ಕೆಲವರು ಮಾಸ್ಕ್ ಹಾಕಿದ್ದರೆ, ಮತ್ತೆ ಕೆಲವರ ಮಾಸ್ಕ್ ಕುತ್ತಿಗೆಯಲ್ಲಿತ್ತು. ದೈಹಿಕ ಅಂತರ ಇರಲಿಲ್ಲ. ಇದಕ್ಕೆ ತೇಜಸ್ವಿಯವರನ್ನು ದೂರಲಾಗದು. ಏಕೆಂದರೆ, ಅಭಿಮಾನದಿಂದ ತಮ್ಮ ನಾಯಕನ ಬಳಿ ಬರುವ ಬೆಂಬಲಿಗರು, ಕಾರ್ಯಕರ್ತರನ್ನು ದೂರವಿರಿ ಎಂದು ಹೇಳುವುದು ಕಷ್ಟಸಾಧ್ಯ! ಹಾಗಂತ, ಕರೊನಾ ಹರಡುವಿಕೆಯನ್ನೂ ತಡೆಹಿಡಿಯಲು ಸಾಧ್ಯವಿಲ್ಲ. ಹೀಗಿರುವಾಗ, ಸರ್ಕಾರಗಳು, ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳೇ ಅನಿವಾರ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ, ಭಾರತದ ಮಟ್ಟಿಗೆ ಹಾಗಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ‘ಮಾಸ್ಕ್ ಧರಿಸಿ, ಎರಡು ಗಜ ಅಂತರ ಕಾಯ್ದುಕೊಳ್ಳಿ’ ಎಂದು ಭಾಷಣ ಮಾಡುತ್ತಿರುವಾಗಲೇ, ಅವರ ಮಾತಿಗೆ ವ್ಯತಿರಿಕ್ತ ಎನಿಸುವ ಕ್ರಮಗಳು ಜಾರಿಗೆ ಬರುತ್ತವೆ!
ವ್ಯತ್ಯಾಸವಿದೆ:
ರಾಜ್ಯಸಭೆ ಅಥವಾ ಯಾವುದೋ ಸಂಘಸಂಸ್ಥೆ ಚುನಾವಣೆಯಲ್ಲಿ ಸೀಮಿತ ಮಂದಿ ಮಾತ್ರ ಮತದಾನ ಮಾಡಬೇಕಿರುವುದರಿಂದ ಗುಂಪಾಗಿ ಜನ ಸೇರುವ ಭೀತಿ ಇರುವುದಿಲ್ಲ. ಆದರೆ ವಿಧಾನಸಭೆ ಅಥವಾ ಪಂಚಾಯತ್ ಚುನಾವಣೆ ಹಾಗಲ್ಲ. ಸಮರೋಪಾದಿಯಲ್ಲಿ ಜನ ಮತದಾನ ಮಾಡುವಾಗ ದೈಹಿಕ ಅಂತರ ಸಾಧ್ಯವೇ? ಬಿಹಾರ ಮತದಾನ ವೇಳೆ ಕರೊನಾ ಹರಡುವಿಕೆ ತಪ್ಪಿಸಲು ಆಯೋಗ ಕೆಲವು ಕ್ರಮಗಳನ್ನು ಘೊಷಿಸಿದೆ. ಆದರೆ, ಲಾಕ್ಡೌನ್ ವೇಳೆ ಜಾರಿಯಲ್ಲಿದ್ದ ಮತ್ತು ಈಗ ಚಾಲ್ತಿಯಲ್ಲಿರುವ ನಿಯಮಗಳನ್ನೇ ಜನ ಪಾಲಿಸುತ್ತಿಲ್ಲ. ಚುನಾವಣೆ ಪ್ರಚಾರವಿದ್ದಾಗಲಂತೂ ನಿಯಮ ಪಾಲನೆ ದೂರದ ಮಾತು.
ಕೋರ್ಟ್ ಕಲಾಪಗಳಿಲ್ಲವೇಕೆ?
ಕರೊನಾ ಹರಡುವಿಕೆ ತಪ್ಪಿಸಲೆಂದೇ ಹೈಕೋರ್ಟ್, ಸುಪ್ರೀಂಕೋರ್ಟ್ಗಳಲ್ಲಿ ಈಗಲೂ ವಿಚಾರಣೆಗಳನ್ನು ವಿಡಿಯೋ ಕಾನ್ಪ್ರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ. ವಕೀಲರು, ಜನರ ಓಡಾಟ ಹೆಚ್ಚಾದಲ್ಲಿ ಕೋರ್ಟುಗಳೇ ಕರೊನಾ ಸೂಪರ್ ಸ್ಪ್ರೆಡರ್ ಆಗಬಹುದು ಎಂಬ ಭಯದಿಂದಲೇ ನ್ಯಾಯಮೂರ್ತಿಗಳು ಆನ್ಲೈನ್ ಕಲಾಪಕ್ಕೆ ಪ್ರಾಶಸ್ಱ ನೀಡುತ್ತಿದ್ದಾರೆ. ಆದರೆ, ಕರೊನಾ ಕಾಲದಲ್ಲಿ ಚುನಾವಣೆ ನಡೆಸಬಹುದಾದರೆ ಹಿಂದಿನಂತೆ ಕೋರ್ಟ್ ಕಲಾಪಗಳೂ ನಡೆಯಲಿ ಎನ್ನುವುದು ಕಷ್ಟದಲ್ಲಿರುವ ವಕೀಲರ ವಾದ. ವಾಸ್ತವದಲ್ಲಿ, ಕೋರ್ಟ್ ಕಲಾಪ ನಡೆಸುವುದಕ್ಕಿಂತ ಹೆಚ್ಚು ಅಪಾಯಕಾರಿ ಚುನಾವಣೆ ನಡೆಸುವುದು. ಇದು ಗೊತ್ತಿದ್ದರೂ, ಆಯೋಗ ಇಂಥ ನಿರ್ಧಾರ ತೆಗೆದುಕೊಂಡಿದ್ದು ಏಕೆ? 6-8 ತಿಂಗಳ ಮಟ್ಟಿಗೆ ಚುನಾವಣೆ ಮುಂದೂಡಬಹುದಿತ್ತಲ್ಲವೇ? ಶಾಲೆ-ಕಾಲೇಜು ಆರಂಭಕ್ಕೆ ಹೆತ್ತವರು ವಿರೋಧಿಸುತ್ತಿರುವುದು ಇದೇ ಭಯದಿಂದಲ್ಲವೇ?
ಲಸಿಕೆಯ ಖಚಿತತೆ ಇಲ್ಲ
ಕರೊನಾ ಸಂಪೂರ್ಣ ನಾಶ ಮಾಡಬಲ್ಲ ಲಸಿಕೆ ಯಾವಾಗ ಬರಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಷ್ಯಾ ಬಿಡುಗಡೆ ಮಾಡಿರುವ ಸ್ಪುಟ್ನಿಕ್ ಲಸಿಕೆಯನ್ನು ಕೆಲ ದೇಶಗಳು ತರಿಸಿಕೊಳ್ಳುತ್ತಿದ್ದರೂ, ಬಳಕೆಗೆ ವೈದ್ಯರ ವಿರೋಧವೂ ಕೇಳಿಬರುತ್ತಿದೆ. ಉದಾಹರಣೆಗೆ, ಗಲ್ಪ್ ದೇಶಗಳು ಸ್ಪುಟ್ನಿಕ್ ಪ್ರಯೋಗ ಮಾಡಿ, ಅಲ್ಲಿನ ವೈದ್ಯರು ಮತ್ತು ನರ್ಸ್ಗಳು ಇದನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿದವು. ಆದರೆ, ಇದಕ್ಕೆ ವೈದ್ಯ ಮತ್ತು ನರ್ಸ್ ವೃಂದ ವಿರೋಧಿಸಿ ಪ್ರತಿಭಟನೆ ನಡೆಸಿದವು. ಸ್ಪುಟ್ನಿಕ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಮತ್ತು ಆರೋಗ್ಯದ ಬಗೆಗಿನ ಭಯದಿಂದಲೇ ಅವರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಲಸಿಕೆ ತೆಗೆದುಕೊಂಡ ಬಳಿಕ ಹಲವರಲ್ಲಿ ಮೈಗ್ರೇನ್ ತಲೆನೋವು ಸೇರಿ ಬೇರೆ ಸಮಸ್ಯೆಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಗಳಿರುವುದರಿಂದ ಸ್ಪುಟ್ನಿಕ್ನ್ನು ಪೂರ್ಣಪ್ರಮಾಣದಲ್ಲಿ ಸ್ವೀಕರಿಸಲಾಗಿಲ್ಲ. ಭಾರತದಲ್ಲೂ ಲಸಿಕೆ ಯಾವಾಗ ಬರಬಹುದು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆನಡಾದ ಮೆಕ್ಗಿಲ್ ವಿಶ್ವವಿದ್ಯಾಲಯದ ಕೆನಡಾ ಮತ್ತು ಅಮೆರಿಕದ ವ್ಯಾಕ್ಸಿನಾಲಜಿ ವಿಜ್ಞಾನಿಗಳ ಅಧ್ಯಯನ ಪ್ರಕಾರ 2022ರ ತನಕ ಕರೊನಾ ವಿನಾಶಕ ಲಸಿಕೆ ಬರುವುದು ಅನುಮಾನ. ಹೀಗಿರುವಾಗ, ಸದ್ಯದ ಮಟ್ಟಿಗೆ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಜತೆಗೆ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದೇ ಜನರ ಮುಂದಿರುವ ಆಯ್ಕೆ. ಆದರೆ, ಚುನಾವಣೆಯಂಥ ‘ಜನಜಾತ್ರೆ’ಗಳಿದ್ದಾಗ ಕರೊನಾ ಹರಡುವಿಕೆ ದುಪ್ಪಟ್ಟಾಗುವ ಅಪಾಯವೇ ಹೆಚ್ಚು.