ಎನ್​ಡಿಎಯಿಂದ ಎಲ್​ಜೆಪಿ ಔಟ್: ನಿತೀಶ್ ವಿರುದ್ಧ ತೊಡೆ ತಟ್ಟಿದ ಪಾಸ್ವಾನ್​

chirag_paswan nitish kumar
Published on

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಿಗೇ ಎನ್​ಡಿಎ ಮೈತ್ರಿಕೂಟದಿಂದ ಲೋಕ ಜನಶಕ್ತಿ ಪಾರ್ಟಿ (ಎಲ್​ಜೆಪಿ) ಭಾನುವಾರ ಹೊರಬಿದ್ದಿದೆ. ಬಿಹಾರಕ್ಕೆ ಸೀಮಿತವಾಗಿ ಮೈತ್ರಿ ಕಡಿದುಕೊಂಡಿರುವ ಎಲ್​ಜೆಪಿ ನಾಯಕ ಚಿರಾಗ್​ ಪಾಸ್ವಾನ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೊಡೆ ತಟ್ಟಿದ್ದಾರೆ. ಬಿಹಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ರಾಜ್ಯದಲ್ಲಿ ಸ್ಥಾಪಿಸುವುದಾಗಿ ಪಾಸ್ವಾನ್​ ಘೋಷಿಸಿದ್ದಾರೆ.

ಮೈತ್ರಿ ನಿಯಮದಂತೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ. ಅವರ ಪಕ್ಷ ಜೆಡಿಯು ಎಲ್ಲೆಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದೋ ಅಲ್ಲೆಲ್ಲ ಎಲ್​ಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಪಕ್ಷದ ಶಾಸಕರು ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಿದ್ದಾರೆ ಎಂಬ ನಿರ್ಣಯವನ್ನು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ ಎಲ್​ಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಕ್ಟೋಬರ್ 28ರಿಂದ ಮೂರು ಹಂತದಲ್ಲ ಮತದಾನ ನಡೆಯಲಿದೆ. ಬಿಹಾರ ಚುನಾವಣೆಗೆ ಸಂಬಂಧಿಸಿ ರಾಷ್ಟ್ರಮಟ್ಟದಲ್ಲಿ ಸೈದ್ಧಾಂತಿಕ ಭಿನ್ನಮತ ಏರ್ಪಟ್ಟ ಕಾರಣ ಎಲ್​ಜೆಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದಕ್ಕೆ ನಿರ್ಣಯಿಸಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಜೆಡಿಯು ಜತೆಗೆ ಆದ ಕಾರಣ, ರಾಜ್ಯದಲ್ಲಿ ಅದರ ವಿರುದ್ಧವೇ ಸ್ಪರ್ಧೆ ಇರಲಿದೆ. ಬಿಹಾರ ಚುನಾವಣೆಯಲ್ಲಿ 243 ವಿಧಾನಸಭಾ ಸ್ಥಾನಗಳ ಪೈಕಿ ಎಲ್​ಜೆಪಿ 143 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಚಿರಾಗ್ ಘೋಷಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net