

ರಾಘವ ಶರ್ಮ ನಿಡ್ಲೆ, ನವದೆಹಲಿ
ಮೇವು ಹಗರಣದಲ್ಲಿ ಜೈಲು ಸೇರಿರುವ ಅಪ್ಪ ಲಾಲೂ ಪ್ರಸಾದ್ ಯಾದವ್ ಗೈರಿನಲ್ಲಿ ಚುನಾವಣೆ ಎದುರಿಸುತ್ತಿರುವ ಕಿರಿಯ ಪುತ್ರ ತೇಜಸ್ವಿ ಯಾದವ್ಗೆ ಆರ್ಜೆಡಿ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಈ ಚುನಾವಣೆ ಮಹತ್ವದ್ದೆನಿಸಿಕೊಂಡಿದೆ. ನಿತೀಶ್ ಕುಮಾರ್ರನ್ನು ಸಿಎಂ ಕುರ್ಚಿಯಿಂದ ಬಡಿದಟ್ಟಬೇಕು ಎಂದು ಮಹಾಮೈತ್ರಿ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಮತದಾರರ ಮುಂದೆ ಆಗ್ರಹಿಸಿದರೂ, ಜಾತಿ ಮತ್ತು ಸಾಮಾಜಿಕ ಸಮೀಕರಣಗಳಲ್ಲಿ ಎನ್ಡಿಎ ಒಂದು ಹೆಜ್ಜೆ ಮುಂದಿರುವುದು ಗುಟ್ಟೇನಲ್ಲ. ಅದನ್ನು ಮೀರಿ ಮತದಾರರನ್ನು ಸೆಳೆಯುವ ಸವಾಲು ತೇಜಸ್ವಿ ಮುಂದಿದೆ.
ಬಿಹಾರ ರಾಜಕಾರಣದ ಮಟ್ಟಿಗೆ ಲಾಲು ಯಾದವ್ ಅಚ್ಚಳಿಯದ ನಾಯಕ. 1990ರಲ್ಲಿ ಮುಖ್ಯಮಂತ್ರಿಯಾಗಿ 2005ರ ತನಕ ಪಕ್ಷ ಮತ್ತು ಸರ್ಕಾರದಲ್ಲಿ ಏಕಚಕ್ರಾಧಿಪತಿಯಾಗಿ ಮೆರೆದವರು ಲಾಲು. ತಾವು ಮೇವು ಹಗರಣದಲ್ಲಿ ಸಿಲುಕಿದ್ದರಿಂದ ಪತ್ನಿ ರಾಬ್ರಿ ದೇವಿಯವರನ್ನು ತಂದು ಕೂರಿಸಿ, ಗೂಂಡಾ ಹಿನ್ನೆಲೆಯ ರಾಜಕಾರಣಿಗಳನ್ನು ಉತ್ತೇಜಿಸಿ, ರಾಜ್ಯವನ್ನು ಜಂಗಲ್ರಾಜ್ ಎಂಬ ಕುಖ್ಯಾತಿಗೆ ತಳ್ಳಿದ ಜನನಾಯಕ! ಹಿಂದೊಮ್ಮೆ ತಮ್ಮ ಜತೆಗಿದ್ದ ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್, ಜಾರ್ಜ್ ಫರ್ನಾಂಡಿಸ್, ಶರದ್ ಪವಾರ್ರನ್ನು ದೂರವಿಟ್ಟು ಕುಟುಂಬಸ್ಥರನ್ನೇ ಪಕ್ಷ, ಸರ್ಕಾರದಲ್ಲಿ ತೊಡಗಿಸಿಕೊಂಡ ಲಾಲೂ, ಮಂಡಲ ರಾಜಕೀಯ, ಸೆಕ್ಯುಲರ್, ಅಹಿಂದ ಸಿದ್ಧಾಂತದ ಬಗ್ಗೆ ಮಾತನಾಡುತ್ತಲೇ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡವರು. 2005ರಲ್ಲಿ ಬಿಹಾರದ ಮತದಾರರು ಲಾಲೂರನ್ನು ಮನೆಗೆ ಕಳಿಸಿ, ನಿತೀಶ್ ಕುಮಾರ್ರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದರು. ರಾಜ್ಯದಲ್ಲಿ ಅಭಿವೃದ್ಧಿಪರ್ವ ಶುರುವಾಗಿದ್ದೇ 2005ರಿಂದ ಎನ್ನುವುದು ಉತ್ಪ್ರೇಕ್ಷೆಯ ಮಾತೇನಲ್ಲ. ಅದೇ ಕಾರಣಕ್ಕಾಗಿ ನಿತೀಶ್ರನ್ನು ಜನ ಪ್ರೀತಿಯಿಂದ ‘ಸುಶಾಸನ್ ಬಾಬು’ ಎಂದು ಕರೆಯುವುದು.
2014ರಲ್ಲಿ ಎನ್ಡಿಎ ಮೈತ್ರಿ ಕಡಿದುಕೊಂಡಿದ್ದ ನಿತೀಶ್ಗೆ 2015ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಲಾಲೂವನ್ನು ನೆಚ್ಚಿಕೊಳ್ಳುವುದು ಅನಿವಾರ್ಯವಾಯಿತು. ರಾಜ್ಯದಲ್ಲಿ ಪ್ರಸ್ತುತತೆ ಕಳೆದುಕೊಂಡಿದ್ದ ಲಾಲುಗೆ ನಿತಿಶ್ ಜತೆ ಸೇರಿಕೊಂಡಿದ್ದು, ಹೊಸ ಅವಕಾಶದ ಬಾಗಿಲನ್ನು ತೆರೆದಿತ್ತು. ಅತ್ಯಧಿಕ ಸೀಟುಗಳನ್ನು (80) ಗೆದ್ದ ಪಕ್ಷವಾಗಿ ಆರ್ಜೆಡಿ ಹೊರಹೊಮ್ಮಿತು. ಜೆಡಿಯು 71 ಸೀಟುಗಳನ್ನು ಗೆದ್ದುಕೊಂಡಿತು. ಮೇವು ಹಗರಣದಲ್ಲಿ ಅಪರಾಧಿಯಾಗಿರದಿದ್ದರೆ, 2015ರಲ್ಲಿ ಲಾಲು ಸಿಎಂ ಆಗುತ್ತಿದ್ದರು. ನಿತೀಶ್ ಅದೃಷ್ಟ ಚೆನ್ನಾಗಿತ್ತು. ಹಾಗಂತ, ಈ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. ಒಂದೇ ವರ್ಷದಲ್ಲಿ ಆರ್ಜೆಡಿ ಜತೆಗಿನ ಸಖ್ಯಕ್ಕೆ ಎಳ್ಳುನೀರು ಬಿಟ್ಟ ನಿತೀಶ್, ಎನ್ಡಿಎ ಮರುಪ್ರವೇಶ ಮಾಡಿ ಮತ್ತೆ ಸಿಎಂ ಆದರು.
ಈ ಬಾರಿ ಲಾಲು ಯಾದವ್ ಗೈರಿನಿಂದಾಗಿ ತೇಜಸ್ವಿ ಮುಂದೆ ಭಾರೀ ಸವಾಲಿದೆ. 1990-2005ರ ಅಧಿಕಾರಾವಧಿಯಲ್ಲಿ ಆಗಿ ಹೋದ ತಪ್ಪುಗಳಿಗೆ ನಮ್ಮನ್ನು ಕ್ಷಮಿಸಿಬಿಡಿ ಎಂದು ತೇಜಸ್ವಿ ಜನರಲ್ಲಿ ಕೇಳಿಕೊಂಡಿದ್ದಾರೆ. ಹೊಸ ಮಾದರಿಯ ರಾಜಕಾರಣಕ್ಕೆ ಕೈ ಹಾಕಿರುವ ತೇಜಸ್ವಿ, ‘ನಯೀ ಸೋಚ್ ನಯೀ ಬಿಹಾರ್’ ಮಂತ್ರದೊಂದಿಗೆ ಅಖಾಡಕ್ಕಿಳಿದಿದ್ದಾರೆ. ಜಾತಿ, ಧರ್ಮ, ಸಮುದಾಯಗಳ ಲೆಕ್ಕಾಚಾರಗಳನ್ನು ಕೊಂಚ ಮಟ್ಟಿಗೆ ಬದಿಗೆ ಸರಿಸಿ, ಯುವಕರಿಗೆ ನೌಕರಿ ಕೊಡಿಸುವುದೇ ಮೈತ್ರಿ ಸರ್ಕಾರದ ಪರಮೋಚ್ಚ ಗುರಿ ಎಂದು ಸಾರಿದ್ದಾರೆ. ರಾಜ್ಯದಲ್ಲಿ ಶೇ.24ರಷ್ಟಿರುವ 29ಕ್ಕಿಂತ ಕಡಿಮೆ ವಯಸ್ಸಿನ ದೊಡ್ಡ ಮತವರ್ಗ ಸೆಳೆಯಲು ಜಾತಿ ಲೆಕ್ಕಾಚಾರ ಬದಿಗಿಟ್ಟು ಯೋಚಿಸಬೇಕು ಎನ್ನುವುದು ತೇಜಸ್ವಿ ವಾದ. ಹೀಗಾಗಿ, ವಲಸೆ ಕಾರ್ವಿುಕರ ಬವಣೆ ಹಾಗೂ ನಿರುದ್ಯೋಗ ವಿಷಯಗಳನ್ನೇ ಪ್ರಸ್ತಾಪಿಸಿ ಮತದಾರರನ್ನು ಸೆಳೆಯಲಾಗುತ್ತಿದೆ. ಮಹಾಮೈತ್ರಿ ಗೆದ್ದರೆ, ಮೊದಲ ಸಂಪುಟ ಸಭೆಯಲ್ಲೇ 10 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದು ತೇಜಸ್ವಿ ಘೊಷಿಸಿದ್ದಾರೆ.
90ರ ದಶಕದಿಂದ ಆರ್ಜೆಡಿ ಪೋಸ್ಟರ್ಗಳಲ್ಲಿ ಲಾಲೂ, ರಾಬ್ರಿ ದೇವಿ ಚಿತ್ರಗಳು ಇಲ್ಲದಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಬಾರಿ ತೇಜಸ್ವಿ ಯಾದವ್ ಹೊರತುಪಡಿಸಿ ಬೇರ್ಯಾರೂ ಕಾಣುತ್ತಿಲ್ಲ. ಅಣ್ಣ ತೇಜ್ಪ್ರತಾಪ್ ಯಾದವ್, ಸೋದರಿ ಮೀಸಾ ಭಾರತಿಯವರನ್ನೂ ದೂರವಿಡಲಾಗಿದೆ. ‘ಕುಟುಂಬ ಪಕ್ಷ’ ಎಂಬ ಅಪವಾದದಿಂದ ಹೊರಬರಬೇಕೆಂದೇ ಈ ತಂತ್ರ.
2017ರಲ್ಲಿ ಲಾಲೂ ನ್ಯಾಯಾಂಗ ಬಂಧನಕ್ಕೊಳಪಟ್ಟ ಬಳಿಕ ಪಕ್ಷದ ಉಸ್ತುವಾರಿ ತೇಜಸ್ವಿ ಹೆಗಲೇರಿದೆ. 1997ರಲ್ಲಿ ಪಕ್ಷ ಸ್ಥಾಪನೆಯಾದ ವರ್ಷದಿಂದ ಹಿಡಿದು ಈವರೆಗಿನ ಲೋಕಸಭೆ ಚುನಾವಣೆ ಫಲಿತಾಂಶಗಳಿಗೆ ಹೋಲಿಸಿದರೆ 2019ರಲ್ಲಿ ಆರ್ಜೆಡಿ ನಿಕೃಷ್ಟ ಫಲಿತಾಂಶಕ್ಕೆ ಸಾಕ್ಷಿಯಾಗಿತ್ತು. ತೇಜಸ್ವಿ ಕಾರ್ಯಶೈಲಿಯೂ ಕೆಲ ಹಿರಿಯರಿಗೆ ಪಥ್ಯವೆನಿಸಿಲ್ಲ. 2015 ಮತ್ತು 2019ರ ಚುನಾವಣೆಯಲ್ಲಿ ಜತೆಗಿದ್ದ ಮಿತ್ರರಾದ ಮಾಜಿ ಸಿಎಂ ಜೀತನ್ ರಾಮ್ ಮಾಂಜಿ, ಖುಶ್ವಾಹ ಸಮುದಾಯದ ಉಪೇಂದ್ರ ಖುಶ್ವಾಹ, ನಿಷಾದ್ ಸಮುದಾಯದ (ಅಗಸರು) ಯುವ ನಾಯಕ ಮುಖೇಶ್ ಸಹಾನಿ ಮಹಾಮೈತ್ರಿಯಿಂದ ಪ್ರತ್ಯೇಕಗೊಂಡಿರುವುದು ತೇಜಸ್ವಿ ಹಾದಿಯನ್ನು ಕಠಿಣಗೊಳಿಸಿದೆ. 2015ರಲ್ಲಿ ಕುರ್ವಿು ಸಮುದಾಯದ ನಿತೀಶ್ ಸಿಎಂ ಅಭ್ಯರ್ಥಿಯಾಗಿದ್ದ ಕಾರಣ ಶೇ.6ರಷ್ಟಿರುವ ಖುಶ್ವಾಹಗಳು ಆರ್ಜೆಡಿ ಅಭ್ಯರ್ಥಿಗೆ ಮತ ಹಾಕಿದ್ದರು. ಆದರೆ, ಈ ಬಾರಿ ಖುಶ್ವಾಹ ಪಕ್ಷ (ಆರ್ಎಲ್ಎಸ್ಪಿ) ಮಹಾಮೈತ್ರಿ ಜತೆಗಿರದ ಕಾರಣ ಖುಶ್ವಾಹ ಮತದಾರರು ಆರ್ಜೆಡಿ ಬೆಂಬಲಿಸುವುದು ಅನುಮಾನ. ಅದಲ್ಲದೆ, ಚುನಾವಣೆ ಹೊಸ್ತಿಲಲ್ಲಿ ಆರ್ಜೆಡಿಯ 12 ಶಾಸಕರು, ಐವರು ವಿಧಾನಪರಿಷತ್ ಸದಸ್ಯರು ಜೆಡಿಯು ಸೇರ್ಪಡೆಯಾಗಿದ್ದಾರೆ. ಲಾಲು ಪರಮಾಪ್ತರಾಗಿದ್ದ ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್ ನಿಧನಕ್ಕೆ ಮೂರು ದಿನ ಮುನ್ನ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆಳವಣಿಗೆಗಳು ವಿರೋಧಿ ಬಣಕ್ಕೆ ತೇಜಸ್ವಿ ನಾಯಕತ್ವದ ವಿಶ್ವಾಸಾರ್ಹತೆ ಪ್ರಶ್ನಿಸುವ ಅಸ್ತ್ರಗಳಾಗಿಬಿಟ್ಟಿವೆ.
ಬಿಹಾರದಲ್ಲಿ ಕಾಂಗ್ರೆಸ್ ಪ್ರಭಾವಿ ಆಟಗಾರನೇನಲ್ಲ. ಕಳೆದ ಬಾರಿ ಲಾಲು-ನಿತೀಶ್ ಕಾರಣದಿಂದಾಗಿ 27 ಸೀಟುಗಳನ್ನು ಗೆದ್ದ ಕಾಂಗ್ರೆಸ್ನಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಬಾರಿ ಆರ್ಜೆಡಿ 144, ಕಾಂಗ್ರೆಸ್ 70 ಮತ್ತು ಸಿಪಿಐ-ಸಿಪಿಐ (ಎಂಎಲ್), ಸಿಪಿಎಂ ಪಕ್ಷಗಳು ಉಳಿದ 29 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ನಿತೀಶ್ ಕುಮಾರ್ರನ್ನು ಸೋಲಿಸಲೇಬೇಕು ಎಂದು ಯುವ ರಾಜಕಾರಣಿ ಮತ್ತು ಕುಟುಂಬ ರಾಜಕಾರಣದ ಫಲಾನುಭವಿಗಳಾದ ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಎಲ್ಜೆಪಿಯ ಚಿರಾಗ್ ಪಾಸ್ವಾನ್ ಹಠ ಹಿಡಿದಿದ್ದಾರೆ. ಮತದಾರನ ಮನದಾಳ ಮಾತ್ರ ನಿಗೂಢ.
ಇದನ್ನೂ ಓದಿ: ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್ಕೋಚಿಂಗ್ ಸಿಟಿ, ಸೀತಾ ಮಂದಿರ ಎಲ್ಜೆಪಿ ಪ್ರಣಾಳಿಕೆ
ರಾಜಸ್ಥಾನದ ಕೋಟಾ, ದೆಹಲಿಯ ಮುಖರ್ಜಿ ನಗರ ಮತ್ತು ಉತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಇರುವಂಥ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು (ಕೋಚಿಂಗ್ ಸಿಟಿ) ಸ್ಥಾಪಿಸುವುದಾಗಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಬುಧವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಭವ್ಯವಾದ ಸೀತಾ ಮಂದಿರವನ್ನು ನಿರ್ವಿುಸುವುದಾಗಿಯೂ ಆಶ್ವಾಸನೆ ಕೊಟ್ಟಿದ್ದಾರೆ.
ನಿತೀಶ್ ಪಾದಸ್ಪರ್ಶ: ರಾಮ್ ವಿಲಾಸ್ ಪಾಸ್ವಾನ್ರ ಸಂಸ್ಮರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ನಿತೀಶ್ರಿಗೆ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಕಾಲಿಗೆರಗಿದರು. ನಿತೀಶ್ ವಿರುದ್ಧ ಚಿರಾಗ್ ರಾಜಕೀಯವಾಗಿ ಹರಿಹಾಯುತ್ತಿದ್ದರೂ ವೈಯಕ್ತಿಕವಾಗಿ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.