ದೊಡ್ಡ ದೊಡ್ಡವರೇ ಇದ್ದಾರೆ ಸರ್!; ಮುಖ್ಯಪೇದೆ-ನಿವೃತ್ತ ಪಿಎಸ್​ಐ ಚರ್ಚೆ ವೈರಲ್

Bit Coin Viral Audio
Published on

ಬೆಂಗಳೂರು: ಬಿಟ್ ಕಾಯಿನ್ ಹಗರಣ ಭಾರಿ ಸದ್ದು ಮಾಡುತ್ತಿರುವ ಸಮಯದಲ್ಲಿ ಇಬ್ಬರು ಪೊಲೀಸರು ಈ ಬಗ್ಗೆ ಸಂಭಾಷಣೆ ನಡೆಸಿರುವ ಆಡಿಯೋ ಬಹಿರಂಗವಾಗಿದೆ. ಹ್ಯಾಕರ್ ಶ್ರೀಕಿ ಖಾತೆಯಿಂದ ‘ದೊಡ್ಡ ದೊಡ್ಡವರಿಗೆ’ ಹಣ ವರ್ಗಾವಣೆಯಾಗಿದೆ ಎಂಬ ಚರ್ಚೆ ನಡೆದಿದೆ. ಆಡಿಯೋದಲ್ಲಿರುವ ಧ್ವನಿ ಸಿಐಡಿ ಹೆಡ್ ಕಾನ್​ಸ್ಟೇಬಲ್ ಮತ್ತು ನಿವೃತ್ತ ಸಬ್ ಇನ್ಸ್​ಪೆಕ್ಟರ್ ಅವರದು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ವಿವಾದಕ್ಕೆ ಸಿಲುಕಿರುವ ಹೆಡ್ ಕಾನ್​ಸ್ಟೇಬಲ್ ವಿರುದ್ಧ ಸಿಐಡಿ ಡಿಜಿಪಿ ಶಿಸ್ತು ಕ್ರಮ ಜರುಗಿಸಿದ್ದಾರೆ ಎನ್ನಲಾಗಿದೆ.

ಆಡಿಯೋದಲ್ಲಿ ಮಾತನಾಡಿರುವ ಮುಖ್ಯಪೇದೆ ‘ಪ್ರತಿ ದಿನ ಏರಿಕೆ-ಇಳಿಕೆ ಆಗುತ್ತಿರುತ್ತದೆ ಸರ್’ ಎಂದಾಗ, ನಿವೃತ್ತ ಅಧಿಕಾರಿ ‘ಅಂದಾಜು ಇವತ್ತಿನ ಬಿಟ್ ಕಾಯಿನ್ ಬೆಲೆ ಎಷ್ಟು’ ಎನ್ನುತ್ತಾರೆ. ಅದಕ್ಕೆ ಮುಖ್ಯಪೇದೆ ‘ಇವತ್ತು 56 ಲಕ್ಷ ರೂ. ಇದೆ’ ಎಂದುತ್ತರಿಸುತ್ತಾರೆ. ‘ಅವನ ಅಕೌಂಟ್​ನಿಂದ ಯಾರ್ಯಾರ ಖಾತೆಗಳಿಗೆ ಹೋಗಿದೆ’ ಎಂದು ಅಧಿಕಾರಿ ಪ್ರಶ್ನಿಸಿದಾಗ, ‘ದೊಡ್ಡ ದೊಡ್ಡವರೇ ಇದ್ದಾರೆ. ಆದರೆ, ಸರಿಯಾಗಿ ಹೆಸರುಗಳು ಖಚಿತವಾಗಿಲ್ಲ. ಮಿನಿಸ್ಟರ್ ಲೇವಲ್​ನವರೇ ಇದ್ದಾರೆ. ಐಪಿಎಸ್​ನವರು ಇದ್ದಾರೆ.

ಗುಪ್ತದಳ ಮುಖ್ಯಸ್ಥ ದಯಾನಂದ ಸರ್ ಅವರನ್ನು ಶರತ್ (ಸಿಐಡಿ ಸೈಬರ್ ವಿಭಾಗ ಎಸ್​ಪಿ) ಭೇಟಿಯಾಗಿ ವಿವರಣೆ ನೀಡಿದರು’ ಎಂಬ 3 ನಿಮಿಷಗಳ ಚರ್ಚೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲಿಗೆ ಐಪಿಎಸ್ ಅಧಿಕಾರಿ ದನಿ ಎಂದು ಹೇಳಲಾಗಿತ್ತು.

ರೈಸ್ ಮಿಲ್ ಮಾಲೀಕನ ಪುತ್ರನ ಜತೆ ನಂಟು

ಪಶ್ಚಿಮ ಬಂಗಾಳದ ರಾಬಿನ್ ಖಂಡೆಲ್ ಲಾಲ್ (32) ಎಂಬಾತನ ಸಹಾಯದಿಂದ ಶ್ರೀಕಿ, ತಾನು ಹ್ಯಾಕ್ ಮಾಡಿ ಕದ್ದ ಬಿಟ್ ಕಾಯಿನ್ ಮಾರಾಟ ಮಾಡಿ ಹಣ ಪಡೆಯುತ್ತಿದ್ದ. ಬಿಕಾಂ ಪದವೀಧರ ರಾಬಿನ್, ತಂದೆಯ ರೈಸ್​ವಿುಲ್ ನೋಡಿಕೊಳ್ಳುತ್ತಿದ್ದ. 2016ರಲ್ಲಿ ಆನ್ಲೈನ್ ಸರ್ವೀಸಸ್ ಹೆಸರಿನ ಬಿಟ್​ಕಾಯಿನ್ ಟ್ರೇಡಿಂಗ್ ವ್ಯವಹಾರ ಮಾಡಿದ್ದ. 2017ರ ಏಪ್ರಿಲ್​ನಲ್ಲಿ ಲೋಕಲ್ ಬಿಟ್​ಕಾಯಿನ್ ಡಾಟ್​ಕಾಂ ವೆಬ್​ಸೈಟ್​ನಲ್ಲಿ ಶ್ರೀಕಿ ಚಾಟ್ ಮಾಡಿ ಪರಿಚಯ ಮಾಡಿಕೊಂಡು 900 ಬಿಟ್ ಕಾಯಿನ್ ಇವೆ. ಸೇಲ್ ಮಾಡಿಕೊಡುವಂತೆ ಮನವಿ ಮಾಡಿದ್ದ. ಅದಕ್ಕೆ ಒಪ್ಪಿದಾಗ ಹಂತ ಹಂತವಾಗಿ ಶ್ರೀಕಿಯಿಂದ 30 ಕಾಯಿನ್ ಪಡೆದು ಸೇಲ್ ಮಾಡಿ 10 ಕಾಯಿನ್ ಕಮಿಷನ್ ಆಗಿ ಪಡೆದಿದ್ದ. 2018ರಲ್ಲಿ ಬೆಂಗಳೂರಿಗೆ ಬರುವ ರಾಬಿನ್, ಐಟಿಸಿ ಗಾರ್ಡೆನಿಯಾ ಹೋಟೆಲ್​ನಲ್ಲಿ ಶ್ರೀಕಿಯನ್ನು ಭೇಟಿಯಾಗಿದ್ದ. ಈ ವೇಳೆ ತನ್ನ ಸ್ನೇಹಿತರಾದ ಅಕೀಬ್, ಸೋನು, ಸೌಮ್ಯ, ಮಹಮ್ಮದ್ ನಲಪಾಡ್, ನಾಫಿ ಎಂಬುವರನ್ನು ಪರಿಚಯ ಮಾಡಿಕೊಟ್ಟು ವ್ಯವಹಾರ ಮುಂದುವರಿಸಿದ್ದ. ಫೋನ್​ನಲ್ಲಿಯೇ ಸಂಪರ್ಕವಿದ್ದ ಶ್ರೀಕಿ, 2018ರಲ್ಲಿ ಯುಬಿ ಸಿಟಿ ಗಲಾಟೆಯಲ್ಲಿ ಸಿಕ್ಕಿಬಿದ್ದು, ಕೋಲ್ಕತ್ತಗೆ ಹೋದಾಗ ತನ್ನ ಮನೆಯಲ್ಲಿಯೇ ರಾಬಿನ್ ಆಶ್ರಯ ಕೊಟ್ಟಿದ್ದ. ಇದೇ ರೀತಿ ಹಂತ ಹಂತವಾಗಿ ಶ್ರೀಕಿಗೆ 1.50 ಕೋಟಿ ರೂ. ನಗದು ಮತ್ತು ಬಿಟ್ ಕಾಯಿನ್ ಮಾರಾಟ ಮಾಡಿ 4.98 ಕೋಟಿ ರೂ. ಅನ್ನು ರಾಬಿನ್ ಕೊಟ್ಟಿದ್ದಾನೆ. ಅಂದರೆ ಶ್ರೀಕಿ ಹೇಳಿದಂತೆ ಹೋಟೆಲ್, ಸ್ನೇಹಿತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net