

ನವದೆಹಲಿ: ಹೆಚ್ಚುತ್ತಲೇ ಇರುವ ಪೆಟ್ರೋಲ್-ಡೀಸೆಲ್ ಬೆಲೆ, ತೈಲ ಬೆಲೆ ಏರಿಕೆ ಇತ್ಯಾದಿಗಳನ್ನು ವಿರೋಧಿಸಿ ವರ್ತಕ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾಡಿದ್ದು ಭಾರತ್ ಬಂದ್ ನಡೆಸುವುದಾಗಿ ಕರೆಕೊಟ್ಟಿದೆ. ಅಲ್ಲದೆ, ಫೆ. 26ರಂದು ದೇಶವ್ಯಾಪಿ ನಡೆಯಲಿರುವ ಈ ಬಂದ್ನಲ್ಲಿ 8 ಕೋಟಿ ವ್ಯಾಪಾರಸ್ಥರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಕಾನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಈ ಬಂದ್ಗೆ ಕರೆ ನೀಡಿದ್ದು, ಇದರಲ್ಲಿ 8 ಕೋಟಿಗೂ ಅಧಿಕ ವ್ಯಾಪಾರಸ್ಥರನ್ನು ಪ್ರತಿನಿಧಿಸುವ ಸುಮಾರು 40,000 ವರ್ತಕ ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂಬುದಾಗಿ ಹೇಳಿದೆ. ಇನ್ನು ಈ ಬಂದ್ ಕರೆಗೆ ಆಲ್ ಇಂಡಿಯಾ ಟ್ರಾನ್ಸ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಷನ್ (ಎಐಟಿಡಬ್ಲ್ಯುಎ) ಕೂಡ ಬೆಂಬಲ ವ್ಯಕ್ತಪಡಿಸಿದೆ.
ಫೆ. 26ರಂದು ದೇಶಾದ್ಯಂತ ಇರುವ ಎಲ್ಲ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಿರಲಿವೆ. ಅಲ್ಲದೆ ದೇಶಾದ್ಯಂತದ ಎಲ್ಲ ರಾಜ್ಯಗಳ ಪ್ರಮುಖ ಪಟ್ಟಣಗಳು ಸೇರಿ ಸುಮಾರು 1,500 ಕೇಂದ್ರಗಳಲ್ಲಿ ಧರಣಿಗಳು ನಡೆಯಲಿವೆ ಎಂದು ಸಿಎಐಟಿ ಸೆಕ್ರೆಟರಿ ಜನರಲ್ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ