ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಹೊಸ ಕಾರು ಖರೀದಿಸಲು ಸಚಿವ-ಸಂಸದರಿಗೆ ಲಕ್ಷಾಂತರ ಹಣ ಕೊಡುತ್ತೆ ಸರ್ಕಾರ

Vidhana Soudha vvani
Published on

ಬೆಂಗಳೂರು: ಕರೊನಾ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಲಾಕ್​ಡೌನ್​ ಘೋಷಣೆ ಆಗ್ತಿದ್ದಂತೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು. ದೇಶ ಮಾತ್ರವಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿತು. ರಾಜ್ಯದ ಬೊಕ್ಕಸ ಖಾಲಿ ಆಗಿದ್ದಲ್ಲದೆ, ಸರ್ಕಾರಿ ಉದ್ಯೋಗಿಗಳ ವೇತನ ಪಾವತಿಗೂ ಹಣ ಇರಲಿಲ್ಲ.

ಖಾಸಗಿ ಉದ್ಯೋಗಿಗಳ ವೇತನ ಕಡಿತ, ವ್ಯಾಪಾರ ವಹಿವಾಟು ಸ್ಥಗಿತವಾಗಿದ್ದರಿಂದ ಕೋಟ್ಯಂತರ ಜನ ಬದುಕಿನ ಬಂಡಿದೂಡಲು ಹೆಣಗಾಡುತ್ತಿದ್ದಾರೆ. ಇದರ ಜತೆಗೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಬಿಸಿ ಬಡ-ಮಧ್ಯಮ ವರ್ಗದ ಜನರ ಕೈ ಸುಡುತ್ತಿದೆ. ಉದ್ಯೋಗ, ಸೂಕ್ತ ವೇತನ ಸಿಗದೆ ಲೆಕ್ಕವಿಲ್ಲದಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವೂ ಆರ್ಥಿಕ ಕೊರತೆಯ ನೆಪವೊಡ್ಡಿ ಹಲವು ಯೋಜನೆಗೆ ತಾತ್ಕಾಲಿಕ ಬ್ರೇಕ್​ ಹಾಕಿದೆ. ಇಂತಹ ಸಂಕಷ್ಟ ಕಾಲದಲ್ಲೂ ರಾಜ್ಯದ ಸಂಸದರು ಮತ್ತು ಸಚಿವರ ಕಾರು ಖರೀದಿ ಮೊತ್ತವನ್ನ ರಾಜ್ಯ ಸರ್ಕಾರ ಹೆಚ್ಚಿಸಿದೆ. ಕರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಸಚಿವರು ಮತ್ತು ಸಂಸದರ ದರ್ಬಾರಿಗೆ ಯಾವುದೇ ಅಡ್ಡಿ ಇಲ್ಲ.

ರಾಜ್ಯದ ಎಲ್ಲ ಸಚಿವರು ಮತ್ತು ಸಂಸದರು ಇನ್ಮುಂದೆ 23 ಲಕ್ಷ ರೂ. ವೆಚ್ಚದಲ್ಲಿ ಕಾರು ಖರೀದಿಸಲು ಅವಕಾಶವಿದೆ. ಈ ಮೊದಲು ಹೊಸ ಕಾರು ಖರೀದಿಗೆ ರಾಜ್ಯ ಸರ್ಕಾರ 22 ಲಕ್ಷ ರೂ. ವೆಚ್ಚ ಭರಿಸುತ್ತಿತ್ತು. ಈ ಮೊತ್ತ ಹೆಚ್ಚಿಸಲು ಸಚಿವರು ಮತ್ತು ಸಂಸದರಿಂದ ಒತ್ತಡ ಬಂದಿತ್ತು. ಇವರ ಒತ್ತಡಕ್ಕೆ ಮಣಿದ ಸರ್ಕಾರ, ಹೊಸ ಕಾರು ಖರೀದಿಗೆ 23 ಲಕ್ಷ ರೂಪಾಯಿ ನೀಡಲು ಸಮ್ಮತಿಸಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net