

ಮುಂಬೈ: ಬಿಕ್ಷುಕರು ಅಥವಾ ಬಿಕ್ಷಾಟನೆ ಎಂಬ ಪದ ಕೇಳಿದೊಡನೆ ನಮಗೆಲ್ಲಾ ಅನಿಸೋದು ಅಯ್ಯೋ ಪಾಪ, ಅವರು ಒಂದು ಹೊತ್ತಿನ ಊಟ, ದಿನದ ಜೀವನೋಪಾಯಕ್ಕೆ ಪರದಾಡುತ್ತಿದ್ದಾರೆ ಎಂದು. ಆದರೆ, ಅದೇ ಕೆಲವರಿಗೆ ವರವಾದರೆ ಹೇಗೆ? ಬಿಕ್ಷೆ ಬೇಡುತ್ತಲೇ ಐಷಾರಾಮಿ ಕಾರು, ಮನೆ ಖರೀದಿ ಮಾಡಿದ್ದಾರೆ ಎಂಬ ಸತ್ಯ ಗೊತ್ತಾದರೇ ನಿಜಕ್ಕೂ ಆಶ್ಚರ್ಯಚಿಕಿತರಾಗೋದು ಖಚಿತ! ಇಂತಹದ್ದೇ ಘಟನೆಯೊಂದು ವರದಿಯಾಗಿದ್ದು, ಈ ವ್ಯಕ್ತಿ ಬಿಕ್ಷಾಟನೆಯಲ್ಲೇ ಜಾಗತಿಕವಾಗಿ ಶ್ರೀಮಂತ ಬಿಕ್ಷುಕ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ.
ಹೆಚ್ಚಾಗಿ ಬಡತನದಲ್ಲಿ ವಾಸಿಸುವ ವ್ಯಕ್ತಿಗಳು ತಮ್ಮ ದಿನನಿತ್ಯದ ಕೂಳಿಗಾಗಿ, ಮೂಲಭೂತ ಅಗತ್ಯಗಳನ್ನು ಪೂರೈಸಲು ಬಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೆಣಗಾಡುತ್ತಾರೆ. ಆದಾಗ್ಯೂ, ಭಿಕ್ಷಾಟನೆಯನ್ನೇ ಲಾಭದಾಯಕ ವೃತ್ತಿಯಾಗಿ ಬದಲಾಯಿಸಿಕೊಂಡು ಹಣ ಸಂಪಾದಿಸುವವರೂ ಇದ್ದಾರೆ ಎಂಬ ಸಂಗತಿ ತಿಳಿದಾಗ ಖಂಡಿತ ಒಂದು ನಿಮಿಷ ನಿಮಗೆ ಆಶ್ಚರ್ಯ ಉಂಟಾಗುತ್ತದೆ. ಅಸಲಿಗೆ ಶಾಕ್ ಆದ್ರೂ ಇದು ನಿಜವೇ!
ವರದಿಯೊಂದರ ಪ್ರಕಾರ, ಮೇಲ್ಕಂಡ ಫೋಟೋದಲ್ಲಿರುವ ವ್ಯಕ್ತಿಯನ್ನು ಮುಂಬೈ ನಿವಾಸಿ ಭರತ್ ಜೈನ್ ಎಂದು ಹೇಳಲಾಗಿದ್ದು, ಈತ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಶ್ರೀಮಂತ ಭಿಕ್ಷುಕ ಎಂಬ ಬಿರುದನ್ನು ಹೊಂದಿದ್ದಾರೆ. ಬಾಲ್ಯದಲ್ಲೇ ಎದುರಾದ ಆರ್ಥಿಕ ಸಮಸ್ಯೆಯಿಂದ ಭರತ್ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ಮದುವೆಯಾದ ಇವರಿಗೆ ಇಬ್ಬರು ಗಂಡುಮಕ್ಕಳು ಇದ್ದಾರೆ. ಬಿಕ್ಷಾಟನೆ ಮಾಡಿಯೇ ಇಬ್ಬರಿಗೂ ಒಳ್ಳೆಯ ಶಿಕ್ಷಣ ಕೊಡಿಸಿ, ಇಂದು ಅವರ ಶಿಕ್ಷಣವನ್ನು ಪೂರ್ಣಗೊಳಿಸಲು ಹೆಚ್ಚು ಶ್ರಮಿಸಿದ್ದಾರೆ.
ಬಿಕ್ಷಾಟನೆಯಲ್ಲಿ ಜೀವನ ಕಟ್ಟಿಕೊಂಡ ಭರತ್ ಜೈನ್ ನಿವ್ವಳ ಮೌಲ್ಯ 7.5 ಕೋಟಿ ರೂ. ಇದ್ದು, ಅವರ ಮಾಸಿಕ ಆದಾಯ 60,000 ಮತ್ತು 75,000 ರೂ.ಗಳವರೆಗೂ ಇದೆ. ಮುಂಬೈನಲ್ಲಿ 1.4 ಕೋಟಿ ರೂ. ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ ಮತ್ತು ಥಾಣೆಯಲ್ಲಿರುವ ಎರಡು ಅಂಗಡಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದು ಮಾಸಿಕ 30,000 ರೂಪಾಯಿ ಬಾಡಿಗೆ ಆದಾಯವನ್ನು ತಂದುಕೊಡುತ್ತದೆ.
ಈ ಸಂಪತ್ತಿನ ಹೊರತಾಗಿಯೂ ಭರತ್, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ಇಂದಿಗೂ ಕಾಣಬಹುದು. ಪ್ರಸ್ತುತ ಪರೇಲ್‌ನಲ್ಲಿ ನೆಲೆಸಿರುವ ಭರತ್ ಅವರ ಕುಟುಂಬದ ಇತರ ಸದಸ್ಯರು ಸ್ಟೇಷನರಿ ಅಂಗಡಿಯೊಂದನ್ನು ನೋಡಿಕೊಳ್ಳುತ್ತಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).